ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ತಡೆಗೆ ಜಾಗೃತಿ ಪರಿಹಾರ: ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯ

ಮನೆ ಮನೆ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯ
Last Updated 19 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಕೋಲಾರ: ‘ಎಚ್‌ಐವಿ ಸೋಂಕು ಬಂದರೆ ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಆದರೆ, ಸೋಂಕಿನ ತಡೆಗೆ ಎಚ್ಚರಿಕೆ ಮತ್ತು ಜಾಗೃತಿಯೊಂದೇ ಪರಿಹಾರ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ತಾಲ್ಲೂಕಿನ ಕೊಂಡರಾಜನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮನೆ ಮನೆ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಎಚ್‌ಐವಿ ಸೋಂಕಿನ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಚಿಕಿತ್ಸಾ ವಿಧಾನ ತಿಳಿಸಿ, ರೋಗ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಎಚ್‍ಐವಿ ಪೀಡಿತರನ್ನು ಅವಮಾನಿಸಿ ಹಿಂಸೆಗೆ ಗುರಿಪಡಿಸುವುದು ಕಾನೂನುಬಾಹಿರ. ಅವರು ಸಹ ನಾಗರೀಕರು. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಎಚ್‌ಐವಿ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಮನೆ ಮನೆ ಅಭಿಯಾನ ನಡೆಸಲಾಗುತ್ತಿದೆ. ಏಡ್ಸ್ ಮನುಷ್ಯನ ಪಾಲಿಗೆ ಮಾರಕ ಕಾಯಿಲೆ. ಎಚ್‌ಐವಿ ಸೋಂಕಿತರನ್ನು ಮುಖ್ಯವಾಹಿನಿಗೆ ತಂದು ಸಮಾಜದಲ್ಲಿ ಕಳಂಕರಹಿತರಾಗಿ ಮಾಡುವುದು ಈ ಅಭಿಯಾನದ ಉದ್ದೇಶ’ ಎಂದು ಮಾಹಿತಿ ನೀಡಿದರು.

‘ಎಚ್‌ಐವಿ ಸೋಂಕಿನ ತಡೆಗೆ ಪ್ರಾಥಮಿಕ ಹಂತದಲ್ಲೇ ಎಚ್ಚರಿಕೆ ವಹಿಸಬೇಕು. ಜನಸಾಮಾನ್ಯರಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ ಹಾಗೂ ಸೋಂಕು ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದರಿಂದ ಎಚ್‌ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಆದರೆ, ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಏಡ್ಸ್‌ ಸಂಪೂರ್ಣ ನಿರ್ಮೂಲನೆಗೆ ಪಣ ತೊಡಬೇಕು’ ಎಂದರು.

54 ಸಾವಿರ ಕುಟುಂಬ: ‘ಕೋಲಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆ ಮನೆ ಅಭಿಯಾನ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಸುಮಾರು 54 ಸಾವಿರ ಕುಟುಂಬಗಳಿಗೆ ಎಚ್‌ಐವಿ ಸೋಂಕಿನ ಮಾಹಿತಿ ನೀಡುತ್ತಾರೆ. ಮಾಹಿತಿ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಎಚ್‌ಐವಿ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಚ್‌ಐವಿ ಸೋಂಕಿತರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯಿದೆ. ಅಲ್ಲದೇ, ಅವರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಪೋಲಿಯೊ ಮಾದರಿಯಲ್ಲಿ ಏಡ್ಸ್‌ ಕಾಯಿಲೆ ನಿರ್ಮೂಲನೆ ಮಾಡಬೇಕು. ಸೋಂಕಿತರಿಗೆ ಕೆಲ ಸಮಸ್ಯೆ, ತೊಂದರೆ, ಅನುಮಾನ ಇರುತ್ತವೆ. ಅಂತಹವರು 1097 ಸಹಾಯವಾಣಿ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆಯಬಹುದು’ ಎಂದು ವಿವರಿಸಿದರು.

ಮೊದಲು ಅಮೆರಿಕದಲ್ಲಿ: ‘ಮೊದಲ ಬಾರಿಗೆ ಅಮೆರಿಕದಲ್ಲಿ 1986ರಲ್ಲಿ ಎಚ್‌ಐವಿ ಪ್ರಕರಣ ಪತ್ತೆಯಾಯಿತು. ಭಾರತದಲ್ಲಿ 1987ರಲ್ಲಿ ಎಚ್‌ಐವಿ ಮೊದಲ ಪ್ರಕರಣ ವರದಿಯಾಯಿತು. ಅಂದಿನಿಂದ ಈ ಕಾಯಿಲೆ ಮನುಕುಲವನ್ನು ಕಾಡುತ್ತ ಬಂದಿದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ ತಿಳಿಸಿದರು.

‘ಮುಖ್ಯವಾಗಿ 4 ಮಾರ್ಗದಲ್ಲಿ ಎಚ್‌ಐವಿ ಸೋಂಕು ಹರಡುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತ ಪರೀಕ್ಷೆ ಮಾಡದೆ ಪಡೆಯುವುದರಿಂದ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ, ಎದೆ ಹಾಲಿನ ಮೂಲಕ ಹಾಗೂ ಸಂರಕ್ಷಣೆ ಮಾಡದ ಸೂಜಿ ಸಿರಂಜ್‌ ಬಳಸುವುದರಿಂದ ಸೋಂಕು ಹರಡುತ್ತಿದೆ. ಆದ ಕಾರಣ ಗರ್ಭಿಣಿಯರು ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜೈಲು ಶಿಕ್ಷೆ: ‘ಜನರ ಮೂಢನಂಬಿಕೆಗಳಿಂದ ಎಚ್‌ಐವಿ ಸೋಂಕಿತರು ಮುಖ್ಯವಾಹಿನಿಗೆ ಬರಲು ಸಮಸ್ಯೆಯಾಗುತ್ತಿದೆ. ಸೋಂಕಿತರ ವಿಚಾರದಲ್ಲಿ ತಾರತಮ್ಯ ಮಾಡಿದರೆ ₹ 2 ಲಕ್ಷ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಎಚ್‌ಐವಿ ತಡೆಗೆ ಇರುವ ಏಕೈಕ ಮಾರ್ಗ ಅರಿವು. ಈ ಕಾಯಿಲೆ ಬಗ್ಗೆ ಪ್ರತಿಯೊಬ್ಬರು ಮುಕ್ತವಾಗಿ ಮಾತನಾಡುವಂತಾಗಬೇಕು’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯಾ ದೀಪಿಕಾ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ರಮೇಶ್, ಕೊಂಡರಾಜನಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬೈರಾರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT