ಮಂಗಳವಾರ, ಜೂನ್ 15, 2021
23 °C
20 ವರ್ಷದ ನಂತರ ನಾಳೆಯಿಂದ ಕಾರ್ಯಾರಂಭ

ಲೋಕಾರ್ಪಣೆಗೆ ಬಿಜಿಎಂಎಲ್‌ ಆಸ್ಪತ್ರೆ ಸಜ್ಜು

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಕೋವಿಡ್–19ರ ಎರಡನೇ ಅಲೆಯ ಸಂದರ್ಭದಲ್ಲಿ ಬಿಜಿಎಂಎಲ್ ಆಸ್ಪತ್ರೆ ಮರುಚಾಲನೆಗೆ ಮರು ಜೀವ ಬಂದಿದ್ದು, ಮರುಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಬಿಜಿಎಂಎಲ್ (ಚಿನ್ನದ ಗಣಿ) 2001 ರಲ್ಲಿ ಮುಚ್ಚಿದ ನಂತರ, ಅದರ ಆಡಳಿತದಲ್ಲಿ ನಡೆಯುತ್ತಿದ್ದ ಬಿಜಿಎಂಎಲ್ ಆಸ್ಪತ್ರೆ ಕೂಡ 107 ವರ್ಷಗಳ ಸೇವೆಯನ್ನು ನೀಡಿ ಬಾಗಿಲು ಮುಚ್ಚಿತು. ಅಂದಿನಿಂದ ಹಲವಾರು ಬಾರಿ ಆಸ್ಪತ್ರೆಯನ್ನು ಮರುಬಳಕೆ ಮಾಡಿಕೊಳ್ಳಬೇಕೆಂಬ ಮಾತುಗಳು ಕೇಳಿ ಬಂದರೂ ಕಾರ್ಯಗತಗೊಂಡಿರಲಿಲ್ಲ.

ಕೋವಿಡ್ ಎರಡನೇ ಅಲೆ ತೀವ್ರವಾಗಿರುವ ಈ ಸಂದರ್ಭದಲ್ಲಿ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಇದ್ದಾಗ, ಕಾರ್ಯಕರ್ತರ ಒತ್ತಾಸೆಗೆ ಮಣಿದ ಸಂಸದ ಎಸ್.ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ವಿಸ್ತಾರ, ಆಕಾರ ಮತ್ತು ಪರಿಸರ ಕಂಡು ಆಸ್ಪತ್ರೆಗೆ ಮರು ಜೀವ ಕೊಡಲು ತೀರ್ಮಾನಿಸಿದರು. ಸ್ಥಳದಲ್ಲಿಯೇ ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಷಿ ಅವರನ್ನು ಸಂಪರ್ಕಿಸಿ, ಕೋವಿಡ್ ಆಸ್ಪತ್ರೆಗಾಗಿ ಅನುಮತಿ ಪಡೆದರು. ಬಿಜೆಪಿ ಮತ್ತು ಆರ್ ಎಸ್‌ಎಸ್‌ ಕಾರ್ಯಕರ್ತರನ್ನು ಬಳಸಿಕೊಂಡು ಐದು ಎಕರೆ ವಿಸ್ತೀರ್ಣವುಳ್ಳ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಶುರು ಮಾಡಿದರು.

ಎರಡು ವಾರಗಳ ಕಾಲ ನಿರಂತರವಾಗಿ ನಡೆದ ಸ್ವಚ್ಛತಾ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಮೂರು ವಾರ್ಡ್‌ಗಳು ಸಿದ್ದವಾಗಿದೆ. ಮಾರಿಕುಪ್ಪಂನಲ್ಲಿರುವ ರಾಜ್ಯ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಬಿಜಿಎಂಎಲ್ ಆಸ್ಪತ್ರೆಗೆ ವರ್ಗಾವಣೆಯಾಗಲಿದೆ. ಆಸ್ಪತ್ರೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಟ್ರ್ಯಾಕ್ಟರ್‌ಗಟ್ಟಲೆ ಇದ್ದ ಕಸದ ರಾಶಿಯನ್ನು ಸಾಗಾಣಿಕೆ ಮಾಡಲಾಗಿದೆ. ಕಾರ್ಮಿಕರ ಬಾಯಲ್ಲಿ ಜನನಿತವಾಗಿದ್ದ 'ಕಂಪನಿ ಆಸ್ಪತ್ರೆ' ಮೇ 19 ರಂದು ಮರುಲೋಕಾರ್ಪಣೆಯಾಗಲು ಸಕಲ ಸಿದ್ಧತೆ ಮಾಡಲಾಗಿದೆ. ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಷಿ ವರ್ಚುಯಲ್ ಮೀಟ್ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸ್ವಚ್ಛತೆಯ ಉಸ್ತುವಾರಿ ವಹಿಸಿರುವ ಕಮಲನಾಥನ್ ಮಾಹಿತಿ ನೀಡಿದರು.

ಚಿನ್ನದ ಗಣಿಯ ಮಾಲೀಕತ್ವ ವಹಿಸಿದ್ದ ಜಾನ್ ಟೇಲರ್ ಮತ್ತು ಕುಟುಂಬದವರು ತಮ್ಮ ಮತ್ತು ಇಂಗ್ಲೆಂಡಿನಿಂದ ಬಂದಿದ್ದ ಇತರ ಬ್ರಿಟಿಷ್ ಅಧಿಕಾರಿಗಳ ಅನುಕೂಲಕ್ಕಾಗಿ 1880 ರಲ್ಲಿ ಹತ್ತು ಹಾಸಿಗೆಗಳ ಹಾಸಿಗೆಯಿಂದ ಶುರು ಮಾಡಿದ ಬಿಜಿಎಂಎಲ್ ಆಸ್ಪತ್ರೆ ನಂತರ 300 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತನೆಯಾಯಿತು. ಬಿಜಿಎಂಎಲ್ ಕಾರ್ಮಿಕರು ಉಪಯೋಗ ಪಡೆದುಕೊಂಡರು. ಮೊದಲ ಸ್ಥಾನಿಕ ವೈದ್ಯಾಧಿಕಾರಿಯಾಗಿದ್ದ ಓ ಡೇನಿಯಲ್ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿದರು. ದೇಶದ ಇತರ ಭಾಗದಲ್ಲಿ ಸಿಗದೆ ಇದ್ದ ಆಧುನಿಕ ಚಿಕಿತ್ಸೆ ಇಲ್ಲಿ ಸಿಗುತ್ತಿತ್ತು. 1914 ರಲ್ಲಿ ದೇಶದ ಪ್ರಥಮ ಎಕ್ಸರೇ ಯಂತ್ರವನ್ನು ಆಸ್ಪತ್ರೆಯಲ್ಲಿ ಸ್ಥಾಪಿಸಲಾಯಿತು. ಅನೇಕ ಹೆಸರಾಂತ ತಜ್ಞ ವೈದ್ಯರು ಕೆಲಸ ಮಾಡಿದರು.

ಚಿನ್ನದ ಗಣಿಯ ವಿವಿಧ ಶಾಫ್ಟ್‌ ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಪ್ರತ್ಯೇಕ ವಾರ್ಡ್‌ಳನ್ನು ಮೀಸಲಾಗಿಡಲಾಗುತ್ತಿತ್ತು. ಈಗ ನವೀಕರಣವಾಗುತ್ತಿರುವ ವಾರ್ಡ್ಗಳಿಗೆ ಕೂಡ ಆಗ ಇದ್ದ ಹೆನ್ರೀಸ್ ವಾರ್ಡ್, ಬುಲೆನ್ಸ್ ವಾರ್ಡ್, ಗಿಫರ್ಡ್ ವಾರ್ಡ್, ಎಡ್ಗರ್ ವಾರ್ಡ್, ಮಾರ್ಗನ್ ವಾರ್ಡ್, ಓಡೇನಿಯಲ್ ವಾರ್ಡ್ ಗಳ ಹೆಸರನ್ನೇ ಇಡಲಾಗಿದೆ. ರೋಗಿಗಳ ಅನುಕೂಲಕ್ಕಾಗಿ ಯೋಗ ವಾರ್ಡ್ ಕೂಡ ಸಿದ್ದವಾಗಿದೆ. ನೂರಾರು ವರ್ಷಗಳಿಂದ ಉಪಯೋಗಿಸಲ್ಪಡುತ್ತಿದ್ದ ಕಬ್ಬಿಣದ ಮಂಚಗಳು ಹೊಸ ರೂಪದೊಡನೆ ವಾರ್ಡ್‌ ಗಳಲ್ಲಿ ಸ್ಥಾಪಿತಗೊಂಡಿದೆ.

ಕೋವಿಡ್‌ ಆಸ್ಪತ್ರೆ: ‘ಇಷ್ಟೊಂದು ಅನುಕೂಲವಿರುವ ಆಸ್ಪತ್ರೆಯನ್ನು ಮರುಬಳಕೆಗೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ. ಮೊದಲು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ನಂತರದ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಅನೇಕ ದಾನಿಗಳು ಆಸ್ಪತ್ರೆಗೆ ಪರಿಕರಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗಣಿ ಇಲಾಖೆಯಿಂದ ಮತ್ತಷ್ಟು ನೆರವು ಸಿಗುವ ಸಂಭವ ಇದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು