ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಗೆ ಕಾಂಗ್ರೆಸ್‌ ಶಾಸಕರ ಸರ್ಟಿಫಿಕೇಟ್ ಬೇಡ’‌: ಸಂಸದ ಮುನಿಸ್ವಾಮಿ

ಶಾಸಕ ನಾರಾಯಣಸ್ವಾಮಿ ವಿರುದ್ಧ ಸಂಸದ ಮುನಿಸ್ವಾಮಿ ತೀವ್ರ ವಾಗ್ದಾಳಿ
Last Updated 12 ಜೂನ್ 2021, 15:45 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಸರ್ಟಿಫಿಕೇಟ್ ಬೇಕಿಲ್ಲ. ಜನರಿಗೆ ಉತ್ತಮ ಸೇವೆ ನೀಡಿದ್ದೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಮಾತೃಶ್ರೀ ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಟ್ರಸ್ಟ್ ಹಾಗೂ ಬಿಜೆಪಿ ಸಹಯೋಗದಲ್ಲಿ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾದ ಸುಸಜ್ಜಿತ 5 ಆಂಬುಲೆನ್ಸ್‌ಗಳ ಸೇವೆಗೆ ಇಲ್ಲಿ ಶನಿವಾರ ಚಾಲನೆ ಮಾತನಾಡಿದರು.

‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಾನು ಬಂಗಾರಪೇಟೆ ತಾಲ್ಲೂಕಿನ ಹಳ್ಳಿ ಹಳ್ಳಿ ಸುತ್ತುವವರೆಗೂ ಶಾಸಕ ನಾರಾಯಣಸ್ವಾಮಿ ಯಾವ ಬಿಲದಲ್ಲಿ ಸೇರಿಕೊಂಡಿದ್ದರು ಎಂಬುದನ್ನು ಜನರು ಪ್ರಶ್ನಿಸಬೇಕು. ತಮ್ಮ ಕ್ಷೇತ್ರದಲ್ಲಿ ಜನರ ಸೇವೆಗೆ ಮುಂದಾಗದ ನಾರಾಯಣಸ್ವಾಮಿ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ’ ಎಂದು ಗುಡುಗಿದರು.

‘ರಾಜ್ಯದಲ್ಲಿ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಹಲವು ಸಲಹೆ ನೀಡಿದ್ದರು. ಆದರೆ, ಕಾಂಗ್ರೆಸ್‌ ಮುಖಂಡರು ಇದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದು ಟೀಕಿಸಿದ್ದರು. ಇದರಿಂದ ಲಸಿಕೆ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗಿದೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದು, ಗೊಬ್ಬರ ಸೇರಿದಂತೆ ಎಲ್ಲವನ್ನೂ ಸರ್ಕಾರ ಪೂರೈಸುತ್ತಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಪರಿಸ್ಥಿತಿ ಹಂತಹಂತವಾಗಿ ಸುಧಾರಿಸಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ದೇಶವನ್ನು ಗುಡಿಸಿ ಗುಂಡಾಂತರ ಮಾಡುತ್ತಿತ್ತು’ ಎಂದು ಕುಟುಕಿದರು.

ಜನೋಪಯೋಗಿ ಕೆಲಸ: ‘ಕೋವಿಡ್‌ ಹಿನ್ನೆಲೆಯಲ್ಲಿ ಜನೋಪಯೋಗಿ ಕೆಲಸ ಮಾಡುತ್ತಿದ್ದೇವೆ. ಆಂಬುಲೆನ್ಸ್‌ ಚಾಲಕರು ಜನರ ಬಳಿ ಹೆಚ್ಚಿನ ಹಣ ಕೇಳುತ್ತಿದ್ದ ಸಂಬಂಧ ಸಾಕಷ್ಟು ದೂರು ಬಂದಿದ್ದವು. ಹೀಗಾಗಿ ಜನರಿಗೆ ಉಚಿತವಾಗಿ ಆಂಬುಲೆನ್ಸ್‌ ಸೇವೆ ನೀಡಲು ಮುಂದಾಗಿದ್ದೇವೆ. ಇದು ಯಶಸ್ವಿಯಾಗಿ ನಡೆಯಬೇಕು. ಒಟ್ಟಾರೆ ಜಿಲ್ಲೆ, ರಾಜ್ಯ, ದೇಶದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರಬೇಕು’ ಎಂದು ಆಶಿಸಿದರು.

‘ಆಂಬುಲೆನ್ಸ್‌ಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸೇವೆ ಒದಗಿಸಲಿವೆ. ಆಂಬುಲೆನ್ಸ್‌ಗಳ ನಿರ್ವಹಣೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಅಗತ್ಯವಿದ್ದರೆ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಲು ಬಳಸಿಕೊಳ್ಳಬಹುದು. ಕೋವಿಡ್‌ 3ನೇ ಅಲೆ ಬರುತ್ತದೆ ಎಂಬ ಮಾಹಿತಿ ಇರುವುದರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಸೋಂಕಿತರು ವೈದ್ಯಕೀಯ ಆಮ್ಲಜನಕ ಸಾಕಷ್ಟು ಪರದಾಡಿದ್ದರು. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಂಪರ್ಕವುಳ್ಳ 50 ಹಾಸಿಗೆಗಳು ಮತ್ತು 31 ವೆಂಟಿಲೇಟರ್‌ ಸೇವೆಗೆ ಸಿದ್ಧ ಇವೆ. ಜತೆಗೆ ಆಂಬುಲೆನ್ಸ್‌ಗಳಲ್ಲಿ ಆಮ್ಲಜನಕ ಸಿಲಿಂಡರ್‌ ಅಳವಡಿಸಲಾಗಿದೆ’ ಎಂದು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ಮುಳಬಾಗಿಲು ಶಾಸಕ ಎಚ್.ನಾಗೇಶ್, ಮಾತೃಶ್ರೀ ಟ್ರಸ್ಟ್‌ ಅಧ್ಯಕ್ಷೆ ಶೈಲಜಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT