ಮಂಗಳವಾರ, ಜೂನ್ 22, 2021
27 °C
ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ: ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಟೀಕೆ

ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿ-ಕೆ.ಎಚ್.ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರ ಮೇಲೆ ಗೂಬೆ ಕೂರಿಸುವ ಕುತಂತ್ರ ಮಾಡುತ್ತಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು ಅವರು ನಗರದ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ಆಂಬುಲೆನ್ಸ್‌ಗಳ ಸೇವೆಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

‘ದೇಶದೆಲ್ಲಿ ಕೋವಿಡ್‌ 2ನೇ ಆರಂಭವಾಗುತ್ತದೆ ಎಂದು ತಜ್ಞರ ಸಮಿತಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ ಕಾರಣಕ್ಕೆ ಈಗ ಪರಿಸ್ಥಿತಿ ಗಂಭೀರವಾಗಿದೆ. ಕೋವಿಡ್‌ನಿಂದ ಆಗುತ್ತಿರುವ ಜನರ ಸಾವು ನೋವಿಗೆ ಬಿಜೆಪಿಯ ದುರಾಡಳಿತವೇ ಕಾರಣ’ ಎಂದು ಕಿಡಿಕಾರಿದರು.

‘ಸರ್ಕಾರ ಲಾಕ್‌ಡೌನ್‌ ಕೋವಿಡ್‌ ನಿಯಂತ್ರಣಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಬೇಗ ಕೊರೊನಾ ಸೋಂಕು ನಿಯಂತ್ರಿಸುವುದು ಪಕ್ಷದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುತ್ತೇವೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡರೂ ಕಾಂಗ್ರೆಸ್ ಪಕ್ಷ ಜತೆಗಿರುತ್ತದೆ’ ಎಂದು ಹೇಳಿದರು.

ಪ್ರೇರಣೆ ಸಿಕ್ಕಿದೆ: ‘ನಮ್ಮ ಸೇವೆ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದೆ ಬಂದಿರುವುದರಿಂದ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ. ಕಾರ್ಮಿಕರು, ಬಡ ಜನರ ಹಿತದೃಷ್ಟಿಯಿಂದ ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ನಾಗರಿಕರು ಈ ಸೇವೆ ಬಳಸಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಸದ್ಯ 67 ಆಂಬುಲೆನ್ಸ್‌ಗಳಿವೆ. ಗೋವಿಂದರಾಜು 2 ಆಂಬುಲೆನ್ಸ್‌ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಆಂಬುಲೆನ್ಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಭರವಸೆ ನೀಡಿದರು.

‘ಡಿಜಿಟಲ್ ನರ್ವ್ ಕೇಂದ್ರದೊಂದಿಗೆ (ಡಿಂಕ್) ಆಂಬುಲೆನ್ಸ್‌ ಸೇವೆಯ ಜೋಡಣೆ ಜನರಿಗೆ ಉತ್ತಮ ಸೇವೆ ನೀಡಲಾಗುವುದು. ಕೊರೊನಾ ಸೋಂಕಿತರನ್ನು ಕರೆದೊಯ್ಯಲು ಆಂಬುಲೆನ್ಸ್‌ ಬಳಕೆ ಮಾಡಲಾಗುತ್ತದೆ. ಕೋವಿಡ್‌ ಸಂಬಂಧಿತ ಔಷಧ ಮಾತ್ರೆ ನೀಡಿರುವುದರಿಂದ ಅನುಕೂಲವಾಗಿದೆ. ಮನೆಗಳಲ್ಲಿ ಕ್ವಾರಂಟೈನ್‌ ಆಗಿರುವ ಸೋಂಕಿತರಿಗೆ ಈ ಔಷಧ ಮಾತ್ರೆ ವಿತರಿಸಲಾಗುತ್ತದೆ’ ಎಂದು ವಿವರಿಸಿದರು.

ವೈದ್ಯಕೀಯ ಆಮ್ಲಜನಕ: ‘ಆಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಆಮ್ಲಜನಕದ ಸೌಲಭ್ಯವಿದೆ. ನಾಗರೀಕರಿಗೆ ಈ ಆಂಬುಲೆನ್ಸ್‌ಗಳ ಸೇವೆ ಉಚಿತವಾಗಿದ್ದು, ದಿನದ 24 ತಾಸೂ ಸೇವೆ ಲಭ್ಯವಿರುತ್ತದೆ. ಈ ಆಂಬುಲೆನ್ಸ್‌ಗಳ ಚಾಲಕರ ಮೊಬೈಲ್‌ ಸಂಖ್ಯೆಯನ್ನು ಆಸ್ಪತ್ರೆ ಮತ್ತು ಡಿಜಿಟಲ್ ನರ್ವ್ ಕೇಂದ್ರಕ್ಕೆ ಜೋಡಣೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್‌, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಂ.ವಿ.ರಂಗಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಮಂಜುನಾಥ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು