ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ: ಶಾಸಕ ಕೆ.ಶ್ರೀನಿವಾಸಗೌಡ ಆರೋಪ

Last Updated 2 ಜುಲೈ 2019, 11:59 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ನಡೆಯುತ್ತಿದ್ದು, ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಸರ್ಕಾರ ಬೀಳಿಸಲು ನಾನಾ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೆಡಿಎಸ್ ಪಕ್ಷದ 37 ಶಾಸಕರು ಒಗ್ಗಟ್ಟಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲವಾಗಿ ನಾವು ನಿಂತಿದ್ದು, ಮುಂದಿನ 4 ವರ್ಷಗಳೂ ಸರಕಾರ ನಡೆಸುತ್ತಾರೆ’ ಎಂದರು.

‘ಕಾಂಗ್ರೆಸ್ ಪಕ್ಷದಲ್ಲಿ ಏನೇನು ಆಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ಅದಕ್ಕೆ ನಾವು ತಲೆ ಹಾಕುವುದೂ ಇಲ್ಲ. ಕುಮಾರಸ್ವಾಮಿ 4 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ. ಸದ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಬಿಜೆಪಿ ಮುಖಂಡರು ವಾಮ ಮಾರ್ಗದಲ್ಲಿ ಸಾಗುತ್ತಿದ್ದು, ವಿಫಲ ಯತ್ನ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ರಾಜೀನಾಮೆ ವಿಚಾರವನ್ನು ಜಾರಕಿಹೊಳಿ ಬಹಳ ದಿನಗಳಿಂದ ಹೇಳುತ್ತಿದ್ದರು ಅಂತೆಯೇ ಮಾಡಿದ್ದಾರೆ. ಇದರಿಂದಾಗಿ ಸರಕಾರಕ್ಕೆ ಕೆಟ್ಟ ಪರಿಸ್ಥಿತಿ ಬರುವುದಿಲ್ಲ. ಪ್ರಸ್ತುತ ಹರಿದಾಡುತ್ತಿರುವ ಊಹಾಪೋಹಗಳಂತೆ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.

‘ನಾನು ರಾಜೀನಾಮೆ ನೀಡಬೇಕು ಎನ್ನುವ ವಿಚಾರವೇ ಇಲ್ಲ. ಅನಗತ್ಯವಾಗಿ ಹೆಸರು ಬಳಸಿ ವ್ಯಕ್ತಿತ್ವ ಹಾಳು ಮಾಡಲಾಗುತ್ತಿದೆ. ಒಂದು ವೇಳೆ ನೀಡಬೇಕಾದ ಪರಿಸ್ಥಿತಿ ಬಂದಿದ್ದೇ ಆದಲ್ಲಿ ಹೆದರಿಕೊಳ್ಳುವ ಅವಶ್ಯಕತೆ ನನಗೆ ಇಲ್ಲವೇ ಇಲ್ಲ. ಬಿಜೆಪಿಯ ಯಾರೂ ಸಹ ನನ್ನ ಬಳಿ ಚರ್ಚೆ ಮಾಡಿಲ್ಲ’ ಎಂದು ತಿಳಿಸಿದರು.

‘ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಯಾವುದೇ ವಿಚಾರ ಮಾತನಾಡಿದರೂ ಸೂಕ್ಷ್ಮವಾಗಿ ಹೇಳಿರುತ್ತಾರೆ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದಿದ್ದಾಗ ಇಂತಹ ಪರಿಸ್ಥಿತಿಗಳು ಸಾಮಾನ್ಯ. ಇದು ಹೊಸದೇನಲ್ಲ ಸ್ವಾತಂತ್ರ್ಯ ಬಂದಾಗಿನಿಂದಲೂ ನಡೆಯುತ್ತಲೇ ಇದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT