ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರದ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರು ನಿರ್ಣಾಯಕ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಅನುಪಮಾ ಅಭಿಪ್ರಾಯ
Last Updated 2 ಮೇ 2022, 14:48 IST
ಅಕ್ಷರ ಗಾತ್ರ

ಕೋಲಾರ: ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ರಾಷ್ಟ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಕಾರ್ಮಿಕ ಇಲಾಖೆ ನೀಡುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಎನ್.ಅನುಪಮಾ ಸಲಹೆ ನೀಡಿದರು.

ಕಾರ್ಮಿಕ ಇಲಾಖೆ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.

‘ಶ್ರಮ ಜೀವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಸ್ಥಾಪಿಸಿದ್ದು, ಇದರಿಂದ ಅವರ ಆರೋಗ್ಯ ಹಾಗೂ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಕಾರ್ಮಿಕರು ಈ ದೇಶದ ಶಕ್ತಿ. ಅದರಲ್ಲೂ ಕಟ್ಟಡ ಕಾರ್ಮಿಕರು ಬೃಹತ್ ಕಟ್ಟಡ, ಡ್ಯಾಮ್‌ಗಳ ನಿರ್ಮಾಣದ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆ ಸ್ಮರಣೀಯ. ಕಾರ್ಮಿಕರ ಪರಿಶ್ರಮಕ್ಕೆ ತಕ್ಕ ಕೂಲಿ ಸಿಕ್ಕರೂ ಅವರ ಬದುಕಿಗೆ ಭದ್ರತೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬಡತನದಿಂದ ಬಂದವರಾಗಿದ್ದು, ಅವರು ಅನಾರೋಗ್ಯಕ್ಕೆ ತುತ್ತಾಗಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರ್ಮಿಕ ಇಲಾಖೆ ನಡೆಸುತ್ತಿರುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್‌ ಪಾಟೀಲ್ ಕಿವಿಮಾತು ಹೇಳಿದರು.

ಗುರುತಿನ ಚೀಟಿ: ‘ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ಪಡೆದುಕೊಳ್ಳಬೇಕು, ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ವಕೀಲ ಕೆ.ಆರ್‌.ಧನರಾಜ್‌ ತಿಳಿಸಿದರು.

‘ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಾವಿರಾರು ಕೋಟಿ ಖರ್ಚು ಮಾಡಿ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಈ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ, ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಮಾಹಿತಿ ನೀಡಬೇಕು’ ಎಂದರು.

ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT