ಗುರುವಾರ , ಮೇ 6, 2021
23 °C
ಸಾರಿಗೆ ನೌಕರರ ಮುಷ್ಕರ ಅಂತ್ಯ: ಕರ್ತವ್ಯಕ್ಕೆ ಹಾಜರು

ಜಿಲ್ಲೆಯಲ್ಲಿ ಬಸ್‌ ಸೇವೆ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಕಳೆದ 15 ದಿನದಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದ್ದು, ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಪುನರಾರಂಭವಾಯಿತು.

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಪಟ್ಟು ಹಿಡಿದಿದ್ದ ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿ ಹೈಕೋರ್ಟ್‌ ಸೂಚನೆಯಂತೆ ಮುಷ್ಕರ ಕೈಬಿಟ್ಟು ಒಲ್ಲದ ಮನಸ್ಸಿನಿಂದಲೇ ಕರ್ತವ್ಯಕ್ಕೆ ಹಾಜರಾದರು.

ಮುಷ್ಕರದ ನಡುವೆಯೂ ಜಿಲ್ಲೆಯ ಹಲವೆಡೆ ಬೆಳಿಗ್ಗೆ ಪೊಲೀಸ್‌ ಭದ್ರತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಯಿತು. ಜತೆಗೆ ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ನಿಲ್ದಾಣಗಳಿಂದಲೇ ಸಂಚರಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಬಸ್‌ ನಿಲ್ದಾಣಗಳು ಮತ್ತು ಡಿಪೊಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮಧ್ಯಾಹ್ನದವರೆಗೆ ಗ್ರಾಮೀಣ ಭಾಗಕ್ಕೆ ಬೆರಳೆಣಿಕೆ ಬಸ್‌ ಸಂಚರಿಸಿದವು. ಮುಷ್ಕರದ ಕಾರಣಕ್ಕೆ 15 ದಿನದಿಂದ ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದ ನಿಲ್ದಾಣಗಳಲ್ಲಿ ಬುಧವಾರ ಪ್ರಯಾಣಿಕರು ಕಂಡುಬಂದರು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬಸ್‌ಗಳ ಓಡಾಟ ಕಡಿಮೆಯಿದ್ದ ಕಾರಣ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುವಂತಾಯಿತು.

ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಗಂಟೆಗೊಂದರಂತೆ ಬಸ್‌ ಓಡಿಸಲಾಯಿತು. ಕೆಲ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬಾರದಿದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಿದರು. ಮುಷ್ಕರದ ವಿಷಯ ತಿಳಿದಿದ್ದವರು ಕೆಎಸ್‌ಆರ್‌ಟಿಸಿ ನಿಲ್ದಾಣಗಳತ್ತ ಬರಲೇ ಇಲ್ಲ. ಬದಲಿಗೆ ಖಾಸಗಿ ಬಸ್‌, ಆಟೊ ಹಾಗೂ ಟೆಂಪೊ ಟ್ರಾವೆಲರ್‌ಗಳ ಮೊರೆ ಹೋದರು.

ನಿಲ್ದಾಣಗಳಲ್ಲಿ ಸಂಜೆಯ ನಂತರ ಹೆಚ್ಚಿನ ಜನಸಂದಣಿ ಕಂಡುಬಂತು. ಜಿಲ್ಲೆಯಲ್ಲಿ ಬುಧವಾರ ಒಟ್ಟಾರೆ 210 ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸಿದವು. 745 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ನೋಟಿಸ್‌ ಜಾರಿ ನಂತರವೂ ಕೆಲಸಕ್ಕೆ ಬಾರದ 6 ಸಿಬ್ಬಂದಿಯನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಅಧಿಕಾರಿಗಳು ಆದೇಶ ಹೊರಡಿಸಿದರು.

ದುಪ್ಪಟ್ಟು ದರ: ಖಾಸಗಿ ಬಸ್‌ ಮತ್ತು ವಾಹನಗಳ ಮಾಲೀಕರು ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಪರ್ಯಾಯವಾಗಿ ಸೇವೆ ಒದಗಿಸಿದ್ದರಿಂದ ಜನತೆಗೆ ಮುಷ್ಕರದ ಬಿಸಿ ಹೆಚ್ಚಾಗಿ ತಟ್ಟಲಿಲ್ಲ. ಆದರೆ, ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಪ್ರಯಾಣ ದರ ಪಡೆಯುತ್ತಿದ್ದರಿಂದ ಜನರಿಗೆ ಆರ್ಥಿಕವಾಗಿ ಹೊರೆಯಾಯಿತು.

ಮುಷ್ಕರದ ಪರಿಣಾಮ ಜಿಲ್ಲೆಯ 5 ಕೆಎಸ್‌ಆರ್‌ಟಿಸಿ ಡಿಪೊಗಳಲ್ಲೂ ಬಸ್‌ಗಳು ನಿಂತಲ್ಲೇ ನಿಂತು ಸಂಸ್ಥೆಗೆ 15 ದಿನಗಳಿಂದ ಸುಮಾರು ₹ 7.50 ಕೋಟಿ ಆದಾಯ ಖೋತಾ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.