ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ: ಕಾನೂನು ಕ್ರಮದ ಬಿಸಿ ಮುಟ್ಟಿಸಿ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗ

ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಜಯಶ್ರೀ ಸೂಚನೆ
Last Updated 11 ಮಾರ್ಚ್ 2022, 12:52 IST
ಅಕ್ಷರ ಗಾತ್ರ

ಕೋಲಾರ: ‘ಬಾಲ್ಯವಿವಾಹ ಪ್ರಕರಣವನ್ನು ಸಾಮಾನ್ಯ ವಿಷಯದಂತೆ ಪರಿಗಣಿಸದೆ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಆಗ ಮಾತ್ರ ಬಾಲ್ಯವಿವಾಹಗಳ ಸಂಪೂರ್ಣ ನಿರ್ಮೂಲನೆ ಸಾಧ್ಯ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಜಯಶ್ರೀ ಚನ್ನಾಲ್ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕ ವಿಚಾರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲ್ಯವಿವಾಹ ಪ್ರಕರಣಗಳು ವರದಿಯಾದ ನಂತರ ಅಧಿಕಾರಿಗಳು ನಿಯಮಿತ ಪರಿಶೀಲನೆ ಮಾಡುವುದಿಲ್ಲ. ಪ್ರಕರಣಗಳ ಬಗ್ಗೆ ಆಗಾಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರಿಗೆಕಾನೂನು ಕ್ರಮದ ಬಿಸಿ ಮುಟ್ಟಿಸಿದರೆ ಮಾತ್ರ ಇತರೆ ಪೋಷಕರಿಗೂ ಭಯ ಬರುತ್ತದೆ’ ಎಂದು ಹೇಳಿದರು.

‘ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ಪರಿಕಲ್ಪನೆ ಪೋಷಕರಿಗೆ ಇಲ್ಲವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯು ಪ್ರತಿ ಜಾತಿ ಧರ್ಮಕ್ಕೆ ಅನ್ವಯಿಸುತ್ತದೆ. ಬಾಲ್ಯವಿವಾಹ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ. ಬಾಲ್ಯವಿವಾಹ ತಡೆಗೆ ಮನೆಯಿಂದಲೇ ಪ್ರಯತ್ನ ಆರಂಭವಾಗಬೇಕು’ ಎಂದು ಸೂಚಿಸಿದರು.

‘ಅಂಗಡಿ, ಹೋಟೆಲ್‌, ಕಾರ್ಖಾನೆ ಹಾಗೂ ಗ್ಯಾರೇಜ್‍ಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡು ದುಡಿಸಿಕೊಳ್ಳುವುದು ತಪ್ಪು. ಶಾಲೆಯಿಂದ ಹೊರಗುಳಿದಿರುವ ಎಲ್ಲಾ ಮಕ್ಕಳನ್ನು ಹುಡುಕಿ ಪುನಃ ಶಾಲೆಗೆ ಕರೆತರಬೇಕು. ಬಾಲ್ಯ ಜೀವನವು ಅಮೂಲ್ಯವಾದದ್ದು. ಅದು ಮುಗ್ಧತೆ ಮತ್ತು ಸರಳತೆಯ ಪ್ರತೀಕವಾಗಿದೆ. ಮಕ್ಕಳ ಶಿಕ್ಷಣ ಆನಂದದಾಯಕವಾಗಿರುವಂತೆ ನೋಡಿಕೊಳ್ಳಬೇಕು’ ಎಂದರು.

ಕೃಷಿ ಹೊಂಡ ಸುರಕ್ಷತೆ: ‘ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೃಷಿ ಹೊಂಡಗಳಲ್ಲಿ ಬಿದ್ದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಕೃಷಿ ಹೊಂಡಗಳ ಬಳಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸಬೇಕು. ಕೃಷಿ ಹೊಂಡಗಳ ಸುತ್ತ ಕಡ್ಡಾಯವಾಗಿ ತಂತಿ ಬೇಲಿ ಹಾಕಬೇಕು. ಮಕ್ಕಳು ಕೃಷಿ ಹೊಂಡಗಳಲ್ಲಿ ಬಿದ್ದು ಮೃತಪಟ್ಟರೆ ಸಂಬಂಧಪಟ್ಟ ರೈತರನ್ನೇ ಹೊಣೆಗಾರರಾಗಿಸಿ ಕ್ರಮ ಜರುಗಿಸಿ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸೈಕಲ್ ವಿತರಣೆಯಲ್ಲಿ ವಿಳಂಬವಾಗಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಸಮವಸ್ತ್ರ ಕೊಟ್ಟಿಲ್ಲ. ಶಾಲೆ ಬಿಟ್ಟ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. 2016ರಿಂದ ಈವರೆಗೆ ರಾಜ್ಯದ ಸರ್ಕಾರಿ ಬಾಲಮಂದಿರಗಳಲ್ಲಿ 151 ಮಕ್ಕಳು ಕಾಣೆಯಾಗಿದ್ದು, ಈ ಪ್ರಕರಣ ಹೈಕೋರ್ಟ್‍ ಮೆಟ್ಟಿಲೇರಿದೆ’ ಎಂದು ವಿವರಿಸಿದರು.

ಪ್ರಕರಣ ತಡ: ‘ಬಾಲ್ಯವಿವಾಹಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಮಗುವಿನ ಹೆಸರು, ಫೋಟೋ ಹೊರತುಪಡಿಸಿ ಯಾವುದೇ ದಾಖಲೆಪತ್ರಗಳು ಪೋಷಕರಿಂದ ಸಿಗುವುದಿಲ್ಲ. ಮದುವೆ ನಿಶ್ಚಯ ಮಾಡಿದ್ದೇವೆಯೇ ಹೊರತು ಮದುವೆ ಮಾಡಿಲ್ಲ ಎಂದು ಪೋಷಕರು ಹೇಳುತ್ತಾರೆ. ಹೀಗಾಗಿ ಪ್ರಕರಣ ದಾಖಲಿಸಲು ತಡವಾಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ್ ಮಾಹಿತಿ ನೀಡಿದರು.

‘ಶಾಲಾ ಕಾಲೇಜುಗಳಿಗೆ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ವರ್ಗಾವಣೆ ಪತ್ರ (ಟಿ.ಸಿ) ನೀಡದೆ ವಿದ್ಯಾರ್ಥಿಗಳಿಗೆ ತೊಂದರೆಯಾದ ಸಂಬಂಧ 23 ಪ್ರಕರಣ ದಾಖಲಾಗಿದ್ದು, ಅವೆಲ್ಲವೂ ಬಗಹರಿದಿವೆ. ಕೋವಿಡ್‌ನಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ 5 ಮಕ್ಕಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಬಾಲ್ಯವಿವಾಹ ಪ್ರಕರಣಗಳಲ್ಲಿ ಎಲ್ಲಾ ಮಾಹಿತಿ ಜಾಲಾಡಿ. ಸಿಕ್ಕ ಕೂಡಲೇ ಪೋಷಕರ ವಿರುದ್ಧ ದೂರು ದಾಖಲಿಸಿ, ಆಗ ಇತರೆ ಪೋಷಕರೂ ದಾರಿಗೆ ಬರುತ್ತಾರೆ. ಶುಲ್ಕ ಬಾಕಿ ಕಾರಣಕ್ಕೆ ಮಕ್ಕಳಿಗೆ ತೊಂದರೆ ನೀಡಬಾರದೆಂದು ನ್ಯಾಯಾಲಯದ ಆದೇಶವಿದ್ದು, ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿ’ ಎಂದು ಆಯೋಗದ ಸದಸ್ಯೆ ಭಾರತಿ ಸೂಚಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಅಶೋಕ್.ಜಿ ಯರಗಟ್ಟಿ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT