ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡ್‌ ಹಂಚಿಕೆಗೆ ಗಣಕೀಕೃತ ವ್ಯವಸ್ಥೆ ಜಾರಿ: ಸಚಿವ ಲಿಂಬಾವಳಿ ಸೂಚನೆ

ಪ್ರಕ್ರಿಯೆ ಪಾರದರ್ಶಕವಾಗಲಿ: ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಲಿಂಬಾವಳಿ ಸೂಚನೆ
Last Updated 11 ಮೇ 2021, 12:45 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಈ ನಿಟ್ಟಿನಲ್ಲಿ ಬೆಡ್‌ ನಿಗದಿಗೆ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ ನಿರ್ವಹಣೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬೆಡ್‌ ಹಂಚಿಕೆಯ ಗಣಕೀಕೃತ ವ್ಯವಸ್ಥೆಯ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಿಸಬೇಕು. ಕೋವಿಡ್‌ ಆಸ್ಪತ್ರೆಗಳಲ್ಲಿ ಸೋಂಕಿತರ ದಾಖಲಾತಿ ಒತ್ತಡ ತಪ್ಪಿಸಲು ಮನೆಗಳಲ್ಲೇ ಕ್ವಾರಂಟೈನ್‌ ಮಾಡುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಮೀಸಲಿಟ್ಟಿದ್ದಾರೆ. ಆದರೆ, ನಿರ್ವಹಣೆ ಸಮರ್ಪಕವಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಕ್ಕೆ ಹಂಚಿಕೆಯಾದ ಹಾಸಿಗೆಗಳ ಭರ್ತಿ ಕಾರ್ಯವನ್ನು ಜಿಲ್ಲಾಡಳಿತದಿಂದಲೇ ನಡೆಸಬೇಕು. ಲಭ್ಯವಿರುವ ಹಾಸಿಗೆ ಮತ್ತು ಸರ್ಕಾರಿ ಕೋಟಾದ ರೋಗಿಗಳ ಸಂಖ್ಯೆಯ ಸಂಪೂರ್ಣ ವಿವರ ಪ್ರತಿನಿತ್ಯ ಪ್ರಕಟ ಆಗಬೇಕು’ ಎಂದು ನಿರ್ದೇಶನ ನೀಡಿದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ವೈದ್ಯಕೀಯ ಆಮ್ಲಜನಕದ ಕೊರತೆಯಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಬೇಕಿದ್ದರೆ ಸರ್ಕಾರ ಪೂರೈಸಲಿದೆ. ರೆಮ್‌ಡಿಸಿವರ್ ಚುಚ್ಚುಮದ್ದಿನ ಕೊರತೆಯಿದ್ದು, ಇದನ್ನು ಸರಿಪಡಿಸುತ್ತೇವೆ. ಅಗತ್ಯ ಪ್ರಮಾಣದಲ್ಲಿ ರೆಮ್‌ಡಿಸಿವರ್‌ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಕೋಲಾರ ಮತ್ತು ಮಾಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣ ವರದಿಯಾಗುತ್ತಿವೆ. ಈ ತಾಲ್ಲೂಕುಗಳಲ್ಲಿ ಹೆಚ್ಚಿನ ಸೋಂಕಿತರು ಮನೆಗಳಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಜತೆಗೆ ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಿರುವುದರಿಂದ ಹಾಗೂ ಈ ತಾಲ್ಲೂಕುಗಳು ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ಪ್ರಕರಣಗಳ ಸಂಖ್ಯೆ ಹೆಚ್ಚಿದೆ’ ಎಂದು ವಿವರಿಸಿದರು.

ಬೆಡ್‌ ಬಿಡಿ: ‘ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ಸೋಂಕಿತರು ವೈದ್ಯಕೀಯ ಆಮ್ಲಜನಕ ಮತ್ತು ವೆಂಟಿಲೇಟರ್‌ ಸೌಲಭ್ಯವುಳ್ಳ ಬೆಡ್ ಪಡೆಯುತ್ತಾರೆ. ಆದರೆ, ಅವರು ಗುಣಮುಖರಾದರೂ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ನಡೆ ಸರಿಯಲ್ಲ. ಇದನ್ನು ತಡೆಯಲು ಪೊಲೀಸರನ್ನು ಬಳಸಬೇಕಾಗಿ ಬಂದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಂಕಷ್ಟದಲ್ಲಿರುವ ಇತರೆ ಸೋಂಕಿತರ ಜೀವವೂ ಅಮೂಲ್ಯ. ಗುಣಮುಖರಾದ ಸೋಂಕಿತರು ಬೆಡ್ ಬಿಟ್ಟು ಕೊಡಬೇಕು. ವೈದ್ಯರು ಗುಣಮುಖರಾದ ಸೋಂಕಿತರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಬೇಕು ಅಥವಾ ಮನೆಗೆ ಕಳುಹಿಸಬೇಕು. ಇಲ್ಲದಿದ್ದರೆ ಇತರೆ ಸೋಂಕಿತರಿಗೆ ಸಮಸ್ಯೆಯಾಗುತ್ತದೆ’ ಎಂದರು.

ಪರಿಶೀಲಿಸಿ: ‘ಆಶಾ ಕಾರ್ಯಕರ್ತೆಯರು ಮನೆಗಳಲ್ಲಿ ಕ್ವಾರಂಟೈನ್‌ ಆಗಿರುವ ಸೋಂಕಿತರ ಮನೆಗೆ ನಿಗದಿತ ದಿನದಂದು ಭೇಟಿ ಕೊಟ್ಟು ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಜತೆಗೆ ಸೋಂಕಿತರಿಗೆ ಕೋವಿಡ್ ಕಿಟ್ ತಲುಪಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಪ್ರಕ್ರಿಯೆ ಸಮರ್ಪಕವಾಗಿ ನಡೆದರೆ ಸೋಂಕಿತರ ಗುಣಮುಖ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿರುವ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಹೆಚ್ಚು ಪ್ರಕರಣ ವರದಿಯಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಡಿಕೆ ಅನುಸಾರ ನಿಯೋಜಿಸಿ. ಆರೋಗ್ಯ ಕಾರ್ಯಕರ್ತರ ಆರೋಗ್ಯವೂ ಮುಖ್ಯ. ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಕೋವಿಡ್‌ ಪರೀಕ್ಷೆಗೆ ಮತ್ತು ಸೋಂಕಿತರ ಪತ್ತೆಗೆ ಹೆಚ್ಚು ಒತ್ತು ನೀಡಿ. ಸಕಾಲದಲ್ಲಿ ಸರಿಯಾದ ಚಿಕಿತ್ಸೆ ನೀಡಿದರೆ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್‌ ಕರ್ತವ್ಯಕ್ಕೆ ಬಳಸಿಕೊಳ್ಳಿ’ ಎಂದು ಸೂಚಿಸಿದರು.

ಸಮಾಧಾನಕರ: ‘ಜಿಲ್ಲೆಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಕೆಲ ಸಂಗತಿಗಳು ಸಮಾಧಾನಕರವಾಗಿವೆ. ಕೋವಿಡ್ ಪರೀಕ್ಷೆಯ ಗುರಿ ಸಾಧಿಸಿ ಸಕಾಲಕ್ಕೆ ವರದಿ ನೀಡಲಾಗುತ್ತಿದೆ. ಸೋಂಕಿತರಲ್ಲಿ ಶೇ 85ರಷ್ಟು ಜನ ಮನೆಗಳಲ್ಲೇ ಕ್ವಾರಂಟೈನ್‌ ಆಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರನ್ನು ತಡೆಯಲು ಪೊಲೀಸರು ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ಆರಂಭಿಸಿದ್ದಾರೆ. ಪೊಲೀಸರು ಪರಿಣಾಮಕಾರಿಯಾಗಿ ಲಾಕ್‌ಡೌನ್‌ ಜಾರಿ ಮಾಡಬೇಕು’ ಎಂದು ಆದೇಶಿಸಿದರು.

ಸಂಸದ ಎಸ್‌.ಮುನಿಸ್ವಾಮಿ, ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT