ಸೋಮವಾರ, ನವೆಂಬರ್ 23, 2020
22 °C
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಸೂಚನೆ

ಕೋಲಾರ: ‘ಮಕ್ಕಳ ಗ್ರಾಮಸಭೆ ಕಡ್ಡಾಯವಾಗಿ ನಡೆಸಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮಸಭೆ ನಡೆಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಅವರು ಪಿಡಿಒಗಳು ಹಾಗೂ ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಆದೇಶಿಸಿದರು.

ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಮಕ್ಕಳು ಭವಿಷ್ಯದ ಪ್ರಜೆಗಳು. ಅವರಿಗೂ ಹಕ್ಕುಗಳಿವೆ. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮಸಭೆ ನಡೆಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಮಕ್ಕಳ ಗ್ರಾಮಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಸಭೆ ನಡೆದಿರುವ ಬಗ್ಗೆ ಪಂಚ ತಂತ್ರಾಂಶದಲ್ಲಿ ವಿವರ ದಾಖಲಿಸಿಲ್ಲ. ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು ತಿಂಗಳ ಸಭೆಯಲ್ಲಿ ಪರಿಶೀಲಿಸಬೇಕು. ಗ್ರಾಮಸಭೆಗಳಲ್ಲಿ ವೃತ್ತಿ ಮಾರ್ಗದರ್ಶನ, ಕೌಶಲ ಅಭಿವೃದ್ಧಿ ಕುರಿತು ಮಾಹಿತಿ ನೀಡಬೇಕು. ಮಹಿಳಾ ಗ್ರಾಮ ಸಭೆಗಳಲ್ಲಿ ಸಬಲೀಕರಣ, ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆ ಆಗಬೇಕು’ ಎಂದು ತಿಳಿಸಿದರು.

‘ಗ್ರಾ.ಪಂ ಮಟ್ಟದ ಶಿಕ್ಷಣ ಕಾರ್ಯಪಡೆಯು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಜತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಗಮನ ಹರಿಸಬೇಕು. 18 ವರ್ಷದವರೆಗಿನ ಮಕ್ಕಳ ಆರೋಗ್ಯ ಸೇವೆ, ಶಾಲಾ ದಾಖಲಾತಿಯು ಕಾರ್ಯಪಡೆಯ ಜವಾಬ್ದಾರಿ. ಓದುವ ಬೆಳಕು ಕಾರ್ಯಕ್ರಮದಡಿ ಮಕ್ಕಳನ್ನು ಗ್ರಂಥಾಲಯಕ್ಕೆ ಸೆಳೆಯುವ ಕೆಲಸ ಆಗಬೇಕು’ ಎಂದು ತಿಳಿಸಿದರು.

‘ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿಯಾಗಿಸಬೇಕು. ಉಚಿತ ಸದಸ್ಯತ್ವ ನೀಡುವ ಮೂಲಕ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕು. ಗ್ರಂಥಾಲಯಗಳು ಜ್ಞಾನಾರ್ಜನೆಯ ಕೇಂದ್ರಗಳಾಗಬೇಕು. ವಾರದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಮಕ್ಕಳನ್ನು ಆಕರ್ಷಿಸಬೇಕು’ ಎಂದು ಸಲಹೆ ನೀಡಿದರು.

ತೆರಿಗೆ ಪರಿಷ್ಕರಿಸಿ: ‘ಅಭಿವೃದ್ಧಿ ಕಾರ್ಯಗಳಿಗೆ ಆದಾಯ ಸಂಗ್ರಹಣೆಯು ಸರ್ಕಾರದ ಆದ್ಯ ಕರ್ತವ್ಯ. ವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆ ಮಾಡಿ ಸಿಇಒ ಸಮಿತಿಗೆ ಸಲ್ಲಿಸಿ. ಈ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯಬೇಕು. ಡಿಸೆಂಬರ್ ಅಂತ್ಯದೊಳಗೆ ತೆರಿಗೆ ಪರಿಷ್ಕರಣೆ ಮಾಡಿದರೆ ವಸೂಲಾತಿಗೆ 3 ತಿಂಗಳ ಕಾಲಾವಕಾಶ ಸಿಗುತ್ತದೆ’ ಎಂದರು.

‘ನರೇಗಾ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚು ಮಾಡಬೇಕು. ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಯರ ಪಾಲ್ಗೊಳ್ಳುವಿಕೆ ತುಂಬಾ ಕಡಿಮೆಯಿದೆ. ಆದ ಕಾರಣ ಪ್ರತಿ ಗ್ರಾ.ಪಂ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಬೇಕು’ ಎಂದು ಸೂಚನೆ ನೀಡಿದರು.

‘14ನೇ ಹಣಕಾಸು ಆಯೋಗದ ಅನುದಾನ ಬಳಕೆಗೆ ಇದು ಕಡೆಯ ಅವಕಾಶ. ಉಳಿಕೆ ಅನುದಾನದ ಬಗ್ಗೆ ಇ–ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿ ಮನವಿ ಸಲ್ಲಿಸಿ. ಡಿ.15ರೊಳಗೆ ಅನುದಾನ ಖರ್ಚು ಮಾಡಬೇಕಿದೆ’ ಎಂದು ತಿಳಿಸಿದರು.

ಸಮೀಕ್ಷೆ ನಡೆಸಿ: ‘ಮನೆ, ಕಟ್ಟಡಗಳ ಸಮೀಕ್ಷೆ ನಡೆಸಿ ಅವುಗಳ ವಿಸ್ತೀರ್ಣಕ್ಕೆ ತಕ್ಕಂತೆ ತೆರಿಗೆ ನಿಗದಿಪಡಿಸಬೇಕು. ಪರವಾನಗಿ ನೀಡುವ ಪ್ರಕ್ರಿಯೆ ಆನ್‌ಲೈನ್‌ ಮೂಲಕ ನಡೆಯಲಿದ್ದು, ಕಾಲಮಿತಿ ನಿಗದಿಪಡಿಸಲಾಗುತ್ತದೆ. ಆ ಕಾಲಮಿತಿಯೊಳಗೆ ಅರ್ಜಿ ಸ್ವೀಕರಿಸಿ ಪರವಾನಗಿ ನೀಡಬೇಕು ಅಥವಾ ಅರ್ಜಿ ತಿರಸ್ಕರಿಸಬೇಕು. ಇಲ್ಲವಾದರೆ ಪರವಾನಗಿ ನೀಡಲಾಗಿದೆ ಎಂದು ಭಾವಿಸಲಾಗುತ್ತದೆ’ ಎಂದು ಆರ್‌ಡಿಪಿಆರ್‌ ನಿರ್ದೇಶಕ ಅಶ್ರಫ್‌ ಉಲ್ಲಾ ಹಸನ್‌ ವಿವರಿಸಿದರು.

‘ಶಾಲೆಗಳಿಗೆ ಜಲಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ನರೇಗಾದಲ್ಲಿ ಪೌಷ್ಟಿಕ ಆಹಾರ ಕೈ ತೋಟ ನಿರ್ಮಿಸಲು 20 ಬಗೆಯ ಸಸಿಗಳನ್ನು ಗುರುತಿಸಲಾಗಿದೆ. ಸಸಿ ಲಭ್ಯವಿರುವ ನರ್ಸರಿಗಳನ್ನು ಗುರುತಿಸಿದ್ದೇವೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್‌ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಜಿ.ಪಂ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾ.ಪಂ ಆಡಳಿತಾಧಿಕಾರಿಗಳು, ಪಿಡಿಒಗಳು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.