ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್‌ ಹುನ್ನಾರ: ಅಶೋಕ ಆರೋಪ

Published 22 ಜೂನ್ 2023, 14:24 IST
Last Updated 22 ಜೂನ್ 2023, 14:24 IST
ಅಕ್ಷರ ಗಾತ್ರ

ಕೋಲಾರ: ‘ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‍ಡಿ) ಹಾಗೂ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಮಾತು ಕೇಳಿಕೊಂಡು ರಾಜ್ಯವನ್ನು ಮತ್ತೆ ಟಿಪ್ಪುಮಯವಾಗಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ’ ಎಂದು ಮಾಜಿ ಸಚಿವ, ಶಾಸಕ ಆರ್‌.ಅಶೋಕ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮತಾಂತರ ನಿಷೇಧ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ವಾಪಸ್ಸು ಹಾಗೂ ಪಠ್ಯ ಪರಿಷ್ಕರಣೆ ಮೂಲಕ ಹಿಂದೂಗಳನ್ನು ಅತಂತ್ರ ಮಾಡಲು, ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ. ಟಿಪ್ಪು ಸಂತತಿ ಬೆಳೆಸಲು ಬಲವಂತದ ಮತಾಂತರ ನಿಷೇಧ ಕಾಯ್ದೆ ತೆಗೆದು ಹಾಕಲು ಮುಂದಾಗಿದೆ’ ‌ಎಂದರು.‌

‘ಕಾಂಗ್ರೆಸ್ ಸರ್ಕಾರ ದ್ವೇಷದ ಆಡಳಿತ ನಡೆಸುತ್ತಿದೆ. ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಚರಿತ್ರೆ ಬರೆದಿಲ್ಲ, ಭಗತ್ ಸಿಂಗ್ ಕಥೆ ಬರೆದಿದ್ದಾರೆ. ಇಂತಹ ದೇಶ ಪ್ರೇಮಿಯ ಬದುಕಿನ ಪರಿಚಯ ಮಕ್ಕಳಿಗೆ ಬೇಡವೇ? ಹೆಡ್ಗೇವಾರ್ ಅವರು ದೇಶ, ಧರ್ಮದ ಬಗ್ಗೆ ಹೇಳಿರುವುದನ್ನು ಜನರಿಗೆ ತಿಳಿಸುವುದು ತಪ್ಪೇ? ಟಿಪ್ಪು ಡ್ರಾಪ್‌ನಿಂದ ಬಿದ್ದಾಗಲೇ ಇವರ ಮದ ಇಳಿಯುತ್ತದೆ. ಈ ಹಿಂದೆ ಟಿಪ್ಪು ಜಯಂತಿ ಮಾಡಲು ಹೋಗಿ ಬಿದ್ದಾಗಿದೆ’ ಎಂದು ಟೀಕಿಸಿದರು.

‘ಲಕ್ಷಾಂತರ ಜನ ಕೊಡವರನ್ನು ಟಿಪ್ಪು ಮತಾಂತರ ಮಾಡಿದ್ದು ಸರಿಯೇ? ಟಿಪ್ಪು ಸಂತತಿ ಬೆಳೆಸುತ್ತಿದ್ದೀರಾ? ಹಿಂದೂ, ಮುಸ್ಲಿಂ, ಕ್ರೈಸ್ತರು ಎಷ್ಟು ಜನ ಇದ್ದಾರೋ ಹಾಗೆಯೇ ಇರಲಿ. ಮತಾಂತರ ಮಾಡಬಾರದು ಎಂಬುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಧರ್ಮ ವಿರೋಧಿ ಕೆಲಸ ಮಾಡುವ ಈ ಸರ್ಕಾರಕ್ಕೆ ಜನ ಬುದ್ಧಿ ಕಲಿಸುತ್ತಾರೆ. ನಾವೂ ಮತಾಂತರ ಕಾಯ್ದೆ ವಾಪಸ್ಸಿಗೆ ಅವಕಾಶ ನೀಡುವುದಿಲ್ಲ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ. ಇಷ್ಟರ ನಡುವೆಯೂ ಕಾಯ್ದೆ ರದ್ದಿಗೆ ಮುಂದಾದರೆ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷವೇ ಇರಲ್ಲ’ ಎಂದರು.

‘ಅಕ್ಕಿಗಾಗಿ ಗುಮಾಸ್ತನಿಗೆ ಅರ್ಜಿ’

‘ಕಾಂಗ್ರೆಸ್‌ನವರು ಪ್ರಧಾನಿ ಮೋದಿ ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ದರಾ? ಆಗ ಜ್ಞಾನ ಇರಲಿಲ್ಲವೇ? ಬೇರೆ ಯಾವುದಾದರೂ ಬಿಜೆಪಿ ಅಧಿಕಾರ ಇರುವ ರಾಜ್ಯಕ್ಕೆ ಕೇಂದ್ರ 10 ಕೆ.ಜಿ ಅಕ್ಕಿ ನೀಡಿದೆಯೇ? ಸಿದ್ದರಾಮಯ್ಯ ನಿಮ್ಮದೇನು ವಿಶೇಷ ಕ್ಯಾಟಗರಿಯೇ’ ಎಂದು ಶಾಸಕ ಆರ್‌.ಅಶೋಕ ಪ್ರಶ್ನಿಸಿದರು.

‘ಅಕ್ಕಿ ನೀಡುವ ಕಾಳಜಿ ಇದ್ದಿದ್ದರೆ ನಾಲ್ವರು ಸಚಿವರು ಹೋಗಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿಯಾಗಬೇಕಿತ್ತು. ಯಾರೋ ಗುಮಾಸ್ತನಿಗೆ ಅರ್ಜಿ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT