ಮಂಗಳವಾರ, ಏಪ್ರಿಲ್ 13, 2021
25 °C
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ

ಗುಡಿಸಲು ಮುಕ್ತ ರಾಜ್ಯ ನಿರ್ಮಾಣ: ರವೀಂದ್ರ ಶೆಟ್ಟಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಅರೆ ಅಲೆಮಾರಿ ಮತ್ತು ಅಲೆಮಾರಿ ಜನಾಂಗದವರು ತೀರಾ ಹಿಂದುಳಿದಿದ್ದು, ಹೆಚ್ಚಾಗಿ ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಸತಿ ಸೌಲಭ್ಯ ಕಲ್ಪಿಸಿ ರಾಜ್ಯವನ್ನು ಗುಡಿಸಲು ಮುಕ್ತ ನಿರ್ಮಾಣ ಮಾಡುತ್ತೇವೆ’ ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಹೇಳಿದರು.

ಇಲ್ಲಿ ಗುರುವಾರ ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಜನಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ. ಗುಡಿಸಲು ಮುಕ್ತ ರಾಜ್ಯ ನಿರ್ಮಾಣಕ್ಕೆ ಅಗತ್ಯ ಯೋಜನೆ ರೂಪಿಸಲು ರಾಜ್ಯ ಬಜೆಟ್‌ನಲ್ಲಿ ₹ 250 ಕೋಟಿ ಮೀಸಲಿಡುವಂತೆ ಸರ್ಕಾರವನ್ನು ಕೋರಲಾಗಿದೆ’ ಎಂದು ತಿಳಿಸಿದರು.

‘ನಿಗಮದ ವ್ಯಾಪ್ತಿಯಲ್ಲಿ 46 ಜಾತಿಗಳಿವೆ. ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೊಲ್ಲ ಅಥವಾ ಯಾದವ ಜನಾಂಗದವರಿಗೆ ಶೇ 50ರಷ್ಟು ನಿಗಮದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಉಳಿದ 45 ಜಾತಿಗಳಿಗೆ ಶೇ 50ರಷ್ಟು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ’ ಎಂದರು.

‘ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪಿಚ್ಚಗುಂಟ್ಲ, ಹೆಳವ, ಗೋಂದಳಿ, ಬೈರಾಗಿ, ಗಾರುಡಿ ಜನಾಂಗದವರಿದ್ದಾರೆ. ಇನ್ನುಳಿದ ಜನಾಂಗದವರು ಜಿಲ್ಲೆಯಲ್ಲಿ ಇಲ್ಲ. ನಿಗಮದ ವ್ಯಾಪ್ತಿಯ ಜಾತಿಗಳಿಗೆ ಜಾತಿ ಪ್ರಮಾಣಪತ್ರ ನೀಡಿಕೆಯಲ್ಲಿ ಗೊಂದಲವಿದ್ದು, ಈ ಬಗ್ಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾಡಿ ಸಮುದಾಯದವರ ಸುಮಾರು 150 ಎಕರೆ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆ ಸೌಲಭ್ಯಕ್ಕೆ ಪ್ರಸಕ್ತ ಸಾಲಿನಲ್ಲಿ ಈವರೆಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಯೋಜನೆ ಬಳಕೆಯಾಗಬೇಕು’ ಎಂದು ಸೂಚಿಸಿದರು.

₹ 4.47 ಕೋಟಿ: ‘ಸ್ವಯಂ ಉದ್ಯೋಗ ಸಾಲ, ಸ್ವ-ಸಹಾಯ ಸಂಘಗಳ ಸಾಲ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನ, ಅರಿವು ಶೈಕ್ಷಣಿಕ ಸಾಲ, ಭೂ ಖರೀದಿ, ಗಂಗಾ ಕಲ್ಯಾಣ ಯೋಜನೆಯಡಿ 2013–14ನೇ ಸಾಲಿನಿಂದ ಈವರೆಗೆ ₹ 4.47 ಕೋಟಿ ನೀಡಲಾಗಿದೆ. 2020–21ನೇ ಸಾಲಿನಲ್ಲಿ ₹ 66.65 ಲಕ್ಷ ಮಂಜೂರಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದಿಂದ ನಿಗಮಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಸಮುದಾಯಗಳಿಗೆ ಸಿಗುವ ಸರ್ಕಾರದ ಸವಲತ್ತುಗಳು ಸದ್ಬಳಕೆಯಾಗಬೇಕು’ ಎಂದರು.

‘ಹಿಂದಿನ ವರ್ಷ ಹಿಂದುಳಿದ ವರ್ಗಗಳಿಂದ ವಸತಿ ಸೌಲಭ್ಯಕ್ಕೆ 146 ಅರ್ಜಿ ಬಂದಿದ್ದು, 122 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌, ನಿಗಮದ ಜಿಲ್ಲಾ ವ್ಯವಸ್ಥಾಪಕ ಗಣೇಶ್, ಸಮುದಾಯದ ಮುಖಂಡ ಜಿ.ಶಂಕರ್‌ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.