ಸೋಮವಾರ, ಏಪ್ರಿಲ್ 6, 2020
19 °C

ಕೋವಿಡ್‌–19: ಜನತಾ ಕರ್ಪ್ಯೂ ಬೆಂಬಲಿಸಲು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ಈವರೆಗೆ 20 ಕೊರೊನಾ ಸೋಂಕು ಪ್ರಕರಣ ವರದಿಯಾಗಿವೆ. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಭಾನುವಾರದ (ಜ.22) ಜನತಾ ಕರ್ಪ್ಯೂ ಬೆಂಬಲಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಕೋವಿಡ್‌–19 ಸಂಬಂಧ ಇಲ್ಲಿ ಶನಿವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಶನಿವಾರ ಹೊಸದಾಗಿ 5 ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿದರೆ ಕೋವಿಡ್‌–19 ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಬಹುದು’ ಎಂದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 195 ಹಾಸಿಗೆ ಸಾಮರ್ಥ್ಯದ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ತಾಲ್ಲೂಕು ಮಟ್ಟದ 12 ಸರ್ಕಾರಿ ಆಸ್ಪತ್ರೆಗಳಲ್ಲಿ, 2 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ದೇಶದಲ್ಲಿ ಹುಟ್ಟಿದ ವೈರಾಣುವಲ್ಲ. ಬದಲಿಗೆ ಇದು ಚೀನಾದಿಂದ ಬಂದದ್ದು. ಈ ವೈರಾಣು ತಡೆಗೆ 15 ದಿನದ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್‌–19ನಿಂದ ಚೀನಾ ಮತ್ತು ಇಟಲಿಯಲ್ಲಿ ದಿನಕ್ಕೆ 300 ಸಾವು ಸಂಭವಿಸುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ರಾಜ್ಯದ ಜನ ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಹೊರ ದೇಶಗಳಿಂದ ಬಂದವರೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗಿದ್ದಾರೆ’ ಎಂದು ವಿವರಿಸಿದರು.

‘ಪ್ರಧಾನಮಂತ್ರಿಯವರ ಸೂಚನೆಯಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಭಾನುವಾರ (ಮಾರ್ಚ್‌ 22) ಜನತಾ ಕರ್ಪ್ಯೂ ಪಾಲಿಸೋಣ. ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಬಾರದು. ಕೋವಿಡ್-19 ಮೂರನೇ ಹಂತ ತಲುಪಬಾರದು. ಇದಕ್ಕಾಗಿ ಜನರು ಸ್ವಯಂಪ್ರೇರಿತವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು’ ಎಂದು ಕೋರಿದರು.

‘ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಿ. ಚರಂಡಿಗಳನ್ನು ಸ್ವಚ್ಛವಾಗಿ ಇಡಬೇಕು. ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಮೀಸಲಿಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಕೇಂದ್ರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಗಡಿ ಭಾಗದಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯನ್ನು ಪ್ರವೇಶಿಸುವ ಪ್ರತಿ ಪ್ರಯಾಣಿಕರ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಸೋಂಕು ಪತ್ತೆಯಾಗಿಲ್ಲ: ‘ಹೊರ ದೇಶಗಳಿಂದ ಜಿಲ್ಲೆಗೆ 91 ಮಂದಿ ಆಗಮಿಸಿದ್ದು, ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ವೈದ್ಯಕೀಯ ನಿಗಾದಲ್ಲಿರುವ ವ್ಯಕ್ತಿಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ. ಅಲ್ಲದೇ, ಪ್ರತಿನಿತ್ಯ ಕಾರ್ಯಪಡೆ ಸಭೆ ನಡೆಸಲಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್‌.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ, ಮಹಮ್ಮದ್‌ ಸುಜಿತಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು