ಸೋಮವಾರ, ಜೂನ್ 21, 2021
27 °C

ಕೊರೊನಾ ತಂದ ಸಂಕಷ್ಟ: ಕುಶಲಕರ್ಮಿಗಳ ತುತ್ತಿನ ಚೀಲಕ್ಕೆ ಕುತ್ತು

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೊರೊನಾ ಸಂಕಷ್ಟದ ನಡುವೆ, ಹೊರ ರಾಜ್ಯಗಳ ಕುಶಲ ಕರ್ಮಿಗಳು ಹೊಟ್ಟೆಪಾಡಿಗಾಗಿ ಹೆಣಗಾಡುತ್ತಿದ್ದಾರೆ. ಕರ ಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವುದರ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಈಚಲು ಮರಗಳು ದೊಡ್ಡ ಸಂಖ್ಯೆಯಲ್ಲಿ ಬೆಳೆದು ನಿಂತಿವೆ. ಹಿಂದೆ ಸೇಂದಿ ತೆಗೆಯುತ್ತಿದ್ದ ಕಾಲದಲ್ಲಿ ಖಾಸಗಿಯಾಗಿ ಈಚಲು ತೊಪುಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಅವು ಸರ್ಕಾರಿ ಜಮೀನಿಗೆ ಮಾತ್ರ ಮೀಸಲಾಗಿವೆ. ಮಾವಿನ ತೋಟಗಳ ಬೇಲಿಗಳು ಹಾಗೂ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿವೆ. ಹಾಗಾಗಿ ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಕುಶಲ ಕರ್ಮಿಗಳು, ಈಚಲು ಗರಿಗಳನ್ನು ಕೊಯ್ದು ತಂದು ಸಂಸ್ಕರಿಸಿ ಪೊರಕೆ ಹಾಗೂ ಬುಟ್ಟಿಗಳನ್ನು ತಯಾರಿಸುತ್ತಿದ್ದಾರೆ.

‘ನಮಗೆ ಹೊತ್ತಿರುವುದು ಬುಟ್ಟಿ ಹೆಣಿಗೆ ಮಾತ್ರ. ಬಿದಿರಿನ ಬುಟ್ಟಿ ತಯಾರಿಕೆ ವೆಚ್ಚದಾಯಕ. ಆದ್ದರಿಂದ ಉಚಿತವಾಗಿ ದೊರೆಯುವ ಈಚಲು ಗರಿಗಳಿಂದ ವಿವಿಧ ವಸ್ತುಗಳನ್ನು ತಯಾರಿಸುತ್ತೇವೆ. ಸಮೀಪದ ಪೇಟೆಗೆ ಹೊತ್ತೊಯ್ದು ಮಾರಿ ಜೀವನ ಮಾಡುತ್ತೇವೆ. ಆಂಧ್ರಪ್ರದೇಶದಲ್ಲಿ ಈಚಲು ಮರಗಳು ಇಲ್ಲ. ಈ ತಾಲ್ಲೂಕಿನಲ್ಲಿ ಅವುಗಳಿಗೆ ಕೊರತೆ ಇಲ್ಲ. ಆದ್ದರಿಂದಲೆ ಇಲ್ಲಿ ತಾತ್ಕಾಲಿಕವಾಗಿ ನೆಲೆಸಿ ಹೆಣಿಗೆ ಕಾಯಕ ಕೈಗೊಂಡಿದ್ದೇವೆ’ ಎಂದು ಕುಶಲ ಕರ್ಮಿ ಮಲ್ಲಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಳಿ ಬುಟ್ಟಿ, ಹೂ ಬುಟ್ಟಿ, ಅಲಂಕಾರಿಕ ಬುಟ್ಟಿ, ಗರಿ ಪೊರಕೆ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ತಾವು ಹೆಣಿಗೆ ನಡೆಸುವ ಪಕ್ಕದ ರಸ್ತೆ ಬದಿಯಲ್ಲಿ ಪ್ರದರ್ಶಿಸಿ ದಾರಿಹೋಕರ ಗಮನ ಸೆಳೆಯುತ್ತಾರೆ. ಆದರೆ ಈಗ ಜನತಾ ಕರ್ಫ್ಯೂ ಇರುವುದರಿಂದ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ತಯಾರಿಸಿದ ವಸ್ತುಗಳು ಮಾರಾಟವಾಗುತ್ತಿಲ್ಲ. ಇದು ಅವರ ಕಳವಳಕ್ಕೆ ಕಾರಣವಾಗಿದೆ.

ವ್ಯಾಪಾರವಿಲ್ಲದೆ ಬಸವಳಿದಿರುವ ಈ ಕಲಾವಿದರು, ಅಕ್ಕಿ ಹಾಗೂ ಊಟಕ್ಕಾಗಿ ಕಂಡ ಕಂಡವರ ಕಾಲು ಹಿಡಿಯುವುದನ್ನು ನೋಡಿದರೆ ಯಾರಿಗೇ ಆದರೂ ಅಯ್ಯೋ ಅನ್ನಿಸುತ್ತದೆ. ಮಕ್ಕಳು, ಮಹಿಳೆಯರು, ವಯಸ್ಸಾದವರು ಹೀಗೆ ಎಲ್ಲ ವಯೋಮಾನದ ವ್ಯಕ್ತಿಗಳೂ ಕೃತಕವಾಗಿ ನಿರ್ಮಿಸಿದ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಬಯಲಿನಲ್ಲೇ ಮಲಗುತ್ತಾರೆ. ಎಷ್ಟೋ ಸಲ ಹಸಿದು ಮಲಗುವುದುಂಟು. ರಾಜಾಸ್ಥಾನದ ಶಿಲ್ಪ ಕಲಾವಿದರು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ, ಹಳೆ ತಾಮ್ರ, ಕಂಚು ಹಾಗೂ ಅಲ್ಯುಮಿನಿಯಂ ಪಡೆದು, ಕುಲುಮೆಯೆಲ್ಲಿ ಕಾಯಿಸಿ ವಿವಿಧ ದೇವರನ್ನು ಎರಕು ಹೊಯ್ದು ಕೊಡುತ್ತಾರೆ. ಕುಟುಂಬಗಳೊಂದಿಗೆ ಬಂದಿರುವ ಇವರು, ತಾವು ಹೋದ ಗ್ರಾಮಕ್ಕೆ ಸಂಸಾರವನ್ನು ಸಾಗಿಸಿಕೊಂಡು ಹೋಗುತ್ತಾರೆ.

‘ನಮ್ಮ ರಾಜ್ಯದಲ್ಲಿ ಈ ಕೆಲಸಕ್ಕೆ ಬೇಡಿಕೆ ಇಲ್ಲದೆ ಈ ಕಡೆ ಬಂದಿದ್ದೇವೆ. ಆದರೆ ಕೊರೊನಾ ಭಯದಿಂದ ನಮ್ಮನ್ನು ಗ್ರಾಮ ಪ್ರವೇಶಿಸಲು ಬಿಡುತ್ತಿಲ್ಲ. ಇದರಿಂದ ಜೀವನ ದುಸ್ತರವಾಗಿದೆ’ ಎಂದು ರಾಮ್ ಸಿಂಗ್ ತಮ್ಮ ಅಳಲು ತೋಡಿಕೊಂಡರು.

‘ಹಗ್ಗ ಹೆಣೆದು ಬೆನ್ನಿಗೆ ಹಾಕಿಕೊಂಡು ಊರೂರು ಸುತ್ತಿದರೂ, ಕೇಳುವವರಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೊಸಬರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಹೊಸಬರಿಂದ ಯಾವುದೇ ವಸ್ತು ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ’ ಎಂಬುದು ಅಜ್ಜ ಮುನಿಯಪ್ಪ ಅವರ ನೋವಿನ ಮಾತು.

ಕೊರೊನಾ, ನಗರ ಪ್ರದೇಶದಲ್ಲಿನ ಕೆಲಸ ಕಸಿದರೆ, ಕುಶಲ ಕರ್ಮಿಗಳ ತುತ್ತಿಗೆ ಕಲ್ಲು ಹಾಕಿದೆ. ಸಂಕಷ್ಟ ಹಾಗೂ ಸಂಕಟವನ್ನು ಹೆಚ್ಚಿಸಿದೆ. ಎಲ್ಲರೂ ನೆಮ್ಮದಿಯ ನಾಳೆಗಾಗಿ ಕಾಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು