ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ

Last Updated 19 ಜೂನ್ 2021, 14:48 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ ನಂತರ ಶಾಲೆಗಳು ಆರಂಭವಾಗಿದ್ದು, ಶಾಲಾ ಸ್ವಚ್ಛತೆಗೆ ಒತ್ತು ನೀಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ನಾಗರಾಜಗೌಡ ಶಿಕ್ಷಕರಿಗೆ ಸೂಚಿಸಿದರು.

ತಾಲ್ಲೂಕಿನ ಚಾಕರಸನಹಳ್ಳಿ ಶಾಲಾ ಆವರಣದಲ್ಲಿ ಶನಿವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿ, ‘ಕೋವಿಡ್ ಕಾರಣಕ್ಕೆ ಬಂದ್‌ ಆಗಿದ್ದ ಶಾಲೆಗಳು ಮತ್ತೆ ಆರಂಭವಾಗಿದ್ದು, ಮಕ್ಕಳ ಕಲರವ ಸನ್ನಿಹಿತವಾಗಿದೆ. ಜೂನ್‌ 15ರಿಂದಲೇ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ದೊರೆತಿದ್ದು, ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

‘ಕೊರೊನಾ ವಾರಿಯರ್ಸ್‌ಗಳು ಜೀವದ ಹಂಗು ತೊರೆದು ಕೆಲಸ ಮಾಡಿದಂತೆ ಶಿಕ್ಷಕರು ಕೆಲಸ ಮಾಡಬೇಕು. ಶಾಲೆಗಳ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಶ್ರಮ ವಹಿಸಬೇಕು. ಶಾಲಾ ಕೊಠಡಿಗಳು, ಶಾಲಾ ಆವರಣ, ಶೌಚಾಲಯ ಸ್ವಚ್ಛತೆಗೆ ಕ್ರಮ ವಹಿಸಿ. ಆವರಣದಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆರವು ಮಾಡಿಸಿ. ಮಕ್ಕಳು ಖುಷಿಯಿಂದ ಶಾಲೆಗೆ ಬರುವ ವಾತಾವರಣ ನಿರ್ಮಿಸಿ’ ಎಂದು ತಿಳಿಸಿದರು.

‘ಕೋವಿಡ್‌ನಿಂದ ಮಕ್ಕಳು ಈಗಾಗಲೇ ಕಲಿಕೆಯಿಂದ ವಂಚಿತರಾಗಿದ್ದಾರೆ. ಅವರಲ್ಲಿ ಮತ್ತೆ ಕಲಿಕಾಸಕ್ತಿ ಬೆಳೆಸುವ ಜವಾಬ್ದಾರಿ ಶಿಕ್ಷಕರದು. ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಮುಂದಾಗಿ. ಶಾಲೆಯಲ್ಲಿನ ಹಳೆಯ ವಸ್ತುಗಳು, ನಿರುಪಯುಕ್ತ ಸಾಮಗ್ರಿಗಳನ್ನು ಎಸ್‌ಡಿಎಂಸಿಯ ಅನುಮತಿ ಪಡೆದು ಹರಾಜು ಹಾಕಿ’ ಎಂದು ಹೇಳಿದರು.

ದಾಖಲಾತಿ ಆಂದೋಲನ: ‘ಮಕ್ಕಳನ್ನು ಶಾಲೆಗೆ ಸೆಳೆಯಲು ಶಾಲಾ ದಾಖಲಾತಿ ಆಂದೋಲನ ನಡೆಸಬೇಕು. ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಎಚ್ಚರ ವಹಿಸಿ. ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ, ಸ್ವಚ್ಛತಾ ಕಾರ್ಯಕ್ಕೆ ಗ್ರಾಮ ಪಂಚಾಯಿತಿಗಳ ಸಹಕಾರ ಪಡೆಯಿರಿ. ಆನ್‌ಲೈನ್, ಆಫ್‌ಲೈನ್‌ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಿ. ಇದಕ್ಕೆ ಅಗತ್ಯ ಕ್ರಿಯಾಯೋಜನೆ ರೂಪಿಸಿ’ ಎಂದರು.

ಬೆಳಮಾರನಹಳ್ಳಿ, ಚಾಕರಸನಹಳ್ಳಿ, ದಾನಹಳ್ಳಿ, ನರಸಾಪುರ, ಕಲ್ಕರೆ ಹಾಗೂ ಕ್ಯಾಲನೂರು ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT