ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ಬಾರದ ಮಳೆ: ಒಣಗಿದ ಬೆಳೆ...

ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತ ಈಗ ಸಂಕಷ್ಟದಲ್ಲಿ
ಮಂಜುನಾಥ ಎಸ್
Published : 20 ಸೆಪ್ಟೆಂಬರ್ 2024, 6:44 IST
Last Updated : 20 ಸೆಪ್ಟೆಂಬರ್ 2024, 6:44 IST
ಫಾಲೋ ಮಾಡಿ
Comments

ಬಂಗಾರಪೇಟೆ: ಧಾರಾಕಾರ ಮಳೆಯಿಂದಾಗಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ನೆರೆ ಉಂಟಾಗಿದ್ದರೆ, ಕೋಲಾರದ ಬಂಗಾರಪೇಟೆಯಲ್ಲಿ ಮಾತ್ರ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಒಂದು ಹನಿಯೂ ಮಳೆಯಾಗದ ಕಾರಣ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. 

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು ಸಾಲ–ಸೋಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಆಗ ಸ್ವಲ್ಪ ಮಳೆಯಾಗಿದ್ದರಿಂದಾಗಿ ಉತ್ತಮ ಫಸಲು ಬರಲಿ ಎಂಬ ಕಾರಣಕ್ಕಾಗಿ ಗೊಬ್ಬರ, ಕೀಟಗಳು ವ್ಯಾಪಿಸದಂತೆ ಕೀಟನಾಶಕಗಳನ್ನು ಸಿಂಪಡಿಸಿದ್ದರು. ಆದರೆ, ಆ ಬಳಿಕ ಮಳೆಯೇ ಬಾರದ ಕಾರಣ ಈ ಎಲ್ಲ ಬೆಳೆಗಳು ನೆಲಕಚ್ಚುವ ಹಂತದಲ್ಲಿವೆ. ಮಳೆ ಸುರಿಯದ ಪರಿಣಾಮ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ನೆಲಗಡಲೆ, ರಾಗಿ, ತೊಗರಿ, ಅವರೆ, ಅಲಸಂದೆ ಸೇರಿದಂತೆ ಇನ್ನಿತರ ಬೆಳೆಯ ಸಸಿಗಳು ಬಾಡುತ್ತಿವೆ. ಬಿತ್ತನೆ ಮಾಡಿ ಉತ್ತಮ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಆತಂಕದಲ್ಲಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಕಂತೆಪುರಮಠದ ರೈತ ಶಿವಕುಮಾರ, ‘ಸತತ ಮೂರು ವರ್ಷಗಳಿಂದ ಬರಗಾಲ ಆವರಿಸಿದೆ. ಈ ಸಲ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಈವರೆಗೆ ಮಳೆಯೇ ಆಗಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ’ ಎಂದು ಕಣ್ಣೀರಾದರು. 

ಉಳುಮೆ, ಬಿತ್ತನೆಗೆ ಬೇಕಾದ ಬೀಜ–ಗೊಬ್ಬರವನ್ನು ಈಗಾಗಲೇ ಖರೀದಿಸಿದ್ದೇವೆ. ಅಲ್ಲದೆ, ಈಗಾಗಲೇ ಎಕರೆಗೆ ₹10 ಸಾವಿರದಿಂದ ₹12 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಮಳೆ ಆಗದೆ ಇರುವುದು ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಗಿದೆ ಎಂದು ಬಲಮಂದೆ ಗ್ರಾಮದ ರೈತ ಕೋಡ್ಯಪ್ಪ ಆಕಾಶದತ್ತ ಮುಖ ಮಾಡಿದರು. 

‘ಬಂಗಾರಪೇಟೆ ತಾಲ್ಲೂಕನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು. ಜೊತೆಗೆ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಮರಗಲ್ ಶ್ರೀನಿವಾಸ ಆಗ್ರಹಿಸಿದರು.

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕುಂದರಸನಹಳ್ಳಿ ಗ್ರಾಮದ ಹೊಲದಲ್ಲಿ ಒಣಗುತ್ತಿರುವ ರಾಗಿಬೆಳೆ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕುಂದರಸನಹಳ್ಳಿ ಗ್ರಾಮದ ಹೊಲದಲ್ಲಿ ಒಣಗುತ್ತಿರುವ ರಾಗಿಬೆಳೆ

ಬೆಳೆ ಬರುವುದೇ ಖಾತ್ರಿ ಇಲ್ಲ

ಬಿತ್ತನೆ ಸಂದರ್ಭದಲ್ಲಿ ಒಂದು ಕ್ವಿಂಟಲ್ ನೆಲಗಡಲೆಗೆ ₹6900 ದರ ಇತ್ತು. ಉತ್ತಮ ಲಾಭದ ನಿರೀಕ್ಷೆಯಲ್ಲಿ ಸಾಲ–ಸೋಲ ಮಾಡಿ ನೆಲಗಡಲೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಕಳೆ ತೆಗೆಸುವುದು ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ಕೂಲಿ ಕೊಡಲು ಹೆಚ್ಚು ಹಣ ಖರ್ಚಾಗಿದೆ. ಆದರೆ ಇದೀಗ ಮಳೆಯೇ ಇಲ್ಲದ್ದರಿಂದ ಬೆಳೆ ಬರುವುದೇ ಖಾತ್ರಿ ಇಲ್ಲದಂತಾಗಿದೆ.

-ಶ್ರೀನಿವಾಸ ರೈತ

ತೇವಾಂಶದ ಕೊರತೆ

ಮಳೆಯಾಶ್ರಿತ ಭೂಮಿಯಲ್ಲಿ ಈ ಸಲ ರೈತರು ಹೆಚ್ಚಾಗಿ ಸಿರಿಧಾನ್ಯಗಳು, ನೆಲಗಡಲೆ, ರಾಗಿ, ತೊಗರಿ, ಅವರೆ, ಅಲಸಂದೆ ಬಿತ್ತನೆ ಮಾಡಿದ್ದಾರೆ. ಆದರೆ, ತೇವಾಂಶ ಕೊರತೆಯ ಕಾರಣದಿಂದಾಗಿ ಈ ಎಲ್ಲ ಬೆಳೆಗಳು ಒಣಗುತ್ತಿವೆ. ಅಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಬಾಡುವಂತೆ ಗೋಚರಿಸುತ್ತಿವೆ. ವಾರದಲ್ಲಿ ಮಳೆ ಬಾರದೆ ಇದ್ದರೆ ನೆಲಗಡಲೆ ಸಂಪೂರ್ಣವಾಗಿ ಒಣಗಲಿದೆ

-ವಿಜಯ ಕುಮಾರ, ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT