ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯವು ಸಾಧನೆಗೆ ಅಡ್ಡಿಯಲ್ಲ

ದ್ವಿಚಕ್ರ ವಾಹನ ವಿತರಣೆ: ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ
Last Updated 13 ಆಗಸ್ಟ್ 2020, 16:12 IST
ಅಕ್ಷರ ಗಾತ್ರ

ಕೋಲಾರ: ‘ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಕಿವಿಮಾತು ಹೇಳಿದರು.

ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿ, ‘ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಪ್ರತಿ ಇಲಾಖೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಅನುದಾನ ಮೀಸಲಿದ್ದು, ಈ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು’ ಎಂದರು.

‘ಅಂಗವೈಕಲ್ಯ ಶಾಪವಲ್ಲ. ಮಗು ಅಂಗವಿಕಲವಾಗಿ ಹುಟ್ಟುವುದರಲ್ಲಿ ಪೋಷಕರ ಪಾತ್ರ ಇರುವುದಿಲ್ಲ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವವರಿಗೆ ಮೋಸ ಮಾಡಬಾರದು. ಅಂಗವಿಕಲರ ಸಮಸ್ಯೆ ನಿವಾರಣೆಯ ಜವಾಬ್ದಾರಿ ನಮ್ಮದು. ಅಂಗವೈಕಲ್ಯ ತಡೆಗೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

‘ಅಂಗವಿಕಲರಿಗೆ ಸಮಾಜದ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸುತ್ತಿದೆ. ಅಂಗವೈಕಲ್ಯವು ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ಅಂಗವಿಕಲರು ಸೃಷ್ಟಿಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ವಾವಲಂಬಿ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಯ 18 ಮಂದಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜಿ.ಪಂ ಉಪಾಧ್ಯಕ್ಷೆ ಯಶೋಧಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಜಿ.ಪಂ ಪ್ರಭಾರ ಸಿಇಒ ಸಿ.ಸತ್ಯಭಾಮ, ಉಪ ಕಾರ್ಯದರ್ಶಿ ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT