ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್‌ ಅಭಿಪ್ರಾಯ
Last Updated 3 ಡಿಸೆಂಬರ್ 2020, 14:47 IST
ಅಕ್ಷರ ಗಾತ್ರ

ಕೋಲಾರ: ‘ಅಂಗವೈಕಲ್ಯ ಶಾಪವಲ್ಲ. ಅಂಗವಿಕಲರ ಬಗ್ಗೆ ಕೀಳರಿಮೆ ಬೇಡ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವವರಿಗೆ ಮೋಸ ಮಾಡಬಾರದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.

‘ಅಂಗವಿಕಲರಿಗೆ ಸಮಾಜದ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಅಂಗವೈಕಲ್ಯವು ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ಅಂಗವಿಕಲರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.

‘ಅಂಗವಿಕಲರಿಗೆ ಅವಕಾಶ ನೀಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಬಲ್ಲರು. ಅಂಗವಿಕಲರು ಅಂಗವೈಕಲ್ಯ ಹೊಂದಿದ್ದರೂ ಬುದ್ಧಿಶಕ್ತಿಯಲ್ಲಿ ಮೇಧಾವಿಗಳಾಗಿರುತ್ತಾರೆ. ಅಂಗವಿಕಲರಲ್ಲೂ ಸಾಧನೆಯ ಛಲವಿದೆ ಎಂಬುದನ್ನು ಹಲವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಂಗವಿಕಲರು ಸಾಮಾನ್ಯ ವ್ಯಕ್ತಿಗಿಂತ ಪ್ರತಿಭಾವಂತರಾಗಿರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಅನುದಾನ ಮೀಸಲಾಗಿದ್ದರೂ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಯು ಅಂಗವಿಕಲ ಮಕ್ಕಳನ್ನು ಕಡೆಗಣಿಸದೆ ಅವರ ಕೆಲಸ ಮಾಡಿಕೊಡಬೇಕು. ಅರ್ಹರಿಗೆ ಸೌಕರ್ಯ ಕಲ್ಪಿಸಲು ಅಸಡ್ಡೆ ತೋರಬಾರದು’ ಎಂದರು.

ಮುಖ್ಯವಾಹಿನಿಗೆ ಬನ್ನಿ: ‘ಅಂಗವಿಕಲರು ತಮಗೆ ಅಂಗವಿಕಲತೆ ಇದೆ ಎಂಬ ಕೊರಗಿನಿಂದ ಹೊರ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಮಾನಸಿಕವಾಗಿ ಸದೃಢರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅನ್ಯಾಯ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ ಹೇಳಿದರು.

‘ಅಂಗವಿಕಲರಲ್ಲಿ ಕೀಳರಿಮೆ ಬಾರದಂತೆ ಮುನ್ನಡೆಸಬೇಕು. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಮನಸ್ಸಿಗೆ ನೋವುಂಟು ಮಾಡಬಾರದು. ಸರ್ಕಾರ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಉಚಿತ ಶಿಕ್ಷಣದ ಜತೆಗೆ ಅಗತ್ಯ ಸಲಕರಣೆ ಒದಗಿಸುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಮನವಿ ಮಾಡಿದರು.

ಗುರುತಿನ ಚೀಟಿ: ‘ಅಂಗವಿಕಲರಿಗೆ ವಿವಿಧ ಸಮಸ್ಯೆಗಳಿವೆ. ಗುರುತಿನ ಚೀಟಿ ಪಡೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅಂಗವಿಲಕರಿಗೂ ಸಮಾನ ಅವಕಾಶವಿದೆ. ಸರ್ಕಾರದ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವುದು ಎಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣಾಧಿಕಾರಿ ಎಂ.ಮುನಿರಾಜಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ವಕೀಲ ಕೆ.ಆರ್ ಧನರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT