ಶನಿವಾರ, ಸೆಪ್ಟೆಂಬರ್ 25, 2021
22 °C
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರವಿಚಂದ್ರ ಅಭಿಪ್ರಾಯ

ಉದ್ದಿಮೆದಾರರಿಗೆ ಶಿಸ್ತು–ಧೈರ್ಯ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶಿಕ್ಷಣ ಮತ್ತು ಅನುಭವ ಕೌಶಲಕ್ಕೆ ತಕ್ಕಂತೆ ಉದ್ದಿಮೆ ಆರಂಭಿಸಲು ವಿಪುಲ ಅವಕಾಶಗಳಿದ್ದು, ತರಬೇತಿ ಹಾಗೂ ಮಾಹಿತಿಗಾಗಿ ಸರ್ಕಾರಿ ಸಂಸ್ಥೆಗಳ ನೆರವು ಪಡೆಯಿರಿ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ಎನ್.ರವಿಚಂದ್ರ ಸಲಹೆ ನೀಡಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಜ್ಞಾನ ಮತ್ತು ನೈಪುಣ್ಯತೆಗೆ ತಕ್ಕಂತೆ ಉದ್ದಿಮೆ ಚಟುವಟಿಕೆ ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಣದೊಂದಿಗೆ ಶಿಸ್ತು ಸಂಸ್ಕಾರ ಬೆಳೆಸಿಕೊಂಡು ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಲ ಸೌಲಭ್ಯಕ್ಕೆ ಮುಖ್ಯಮಂತ್ರಿಗಳ ಮತ್ತು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ನೆರವು ಪಡೆದುಕೊಳ್ಳಿ’ ಎಂದು ಹೇಳಿದರು.

‘ಉದ್ದಿಮೆದಾರರಾಗಲು ಶಿಕ್ಷಣ, ಸಂಸ್ಕಾರ, ಶಿಸ್ತು, ಧೈರ್ಯ ಮುಖ್ಯವಾಗಿ ಬೇಕು. ಉದ್ದಿಮೆ ಯಶಸ್ವಿಯಾಗಿ ಮುನ್ನಡೆಸಲು ಸೂಕ್ತ ಜಾಗ, ಉದ್ದಿಮೆಯ ಚಟುವಟಿಕೆ, ಮಾರುಕಟ್ಟೆ, ಕಚ್ಚಾ ವಸ್ತುಗಳ ಲಭ್ಯತೆ, ಉತ್ಪಾದನಾ ಗುಣಮಟ್ಟ ಮತ್ತು ಮಾರಾಟ ವ್ಯವಸ್ಥೆ ಅರಿಯಬೇಕು. ಉದ್ದಿಮೆದಾರರು ಯಾವುದೇ ಮಾಹಿತಿಗೆ ಕೈಗಾರಿಕಾ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದರು.

ಉದ್ಯಮಶೀಲತೆ ಅಗತ್ಯ: ‘ಸರ್ಕಾರದಿಂದಲೇ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗದ ಕಾರಣ ದೇಶಕ್ಕೆ ಉದ್ಯಮಶೀಲತೆ ಅಗತ್ಯವಾಗಿದೆ. ಉದ್ಯಮ ಆರಂಭಿಸುವ ಮುನ್ನ ತರಬೇತಿ, ಮಾಹಿತಿ, ತಿಳಿವಳಿಕೆ ಅಗತ್ಯ. ಸಹಾಯಧನದ ಆಸೆಗಾಗಿ ಉದ್ದಿಮೆ ಆರಂಭಿಸಲು ಬರಬೇಡಿ. ಬ್ಯಾಂಕ್‌ ಸಾಲ ಪಡೆಯುವಾಗ ಆರಂಭಿಸುವ ಉದ್ದಿಮೆ ಕುರಿತು ಸ್ವಯಂ ಜ್ಞಾನ ಹೊಂದಿ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯರಾಪುರಿ ಕಿವಿಮಾತು ಹೇಳಿದರು.

‘₹ 10 ಲಕ್ಷದೊಳಗೆ ಮುದ್ರಾ ಯೋಜನೆಯಡಿ ಅಡಮಾನವಿಲ್ಲದೆ ಸಾಲ ಪಡೆಯಬಹುದು. ಸ್ಟ್ಯಾಂಡ್‍ಅಪ್ ಮತ್ತು ಇತರೆ ಯೋಜನೆಗಳಡಿ ₹ 2 ಕೋಟಿವರೆಗೆ ಸಾಲ ಪಡೆಯಲು ಅವಕಾಶವಿದೆ’ ಎಂದು ವಿವರಿಸಿದರು.

‘ಯಾವುದೇ ಬ್ಯಾಂಕ್‌ ಅಡಮಾನ ಇಟ್ಟುಕೊಳ್ಳದೆ ಮೊದಲ ಬಾರಿಗೆ ಸಾಲ ನೀಡುವುದಿಲ್ಲ. ಸಾಲ ಪಡೆದು ನಿಗದಿತ ಅವಧಿಯಲ್ಲಿ ಪಾವತಿ ಮಾಡಿ ಬ್ಯಾಂಕ್‌ಗಳ ನಂಬಿಕೆ ಗಳಿಸಿದರೆ ಅಡಮಾನವಿಲ್ಲದೆ ಸಾಲ ಪಡೆಯಬಹುದು. ಬಂಡವಾಳ ಹೂಡಿಕೆ ನಂತರ ಎಚ್ಚರಿಕೆ ಅಗತ್ಯ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು.

ಕ್ಷೇತ್ರ ಅಧ್ಯಯನ: ‘ಉದ್ದಿಮೆದಾರರು ಆಗಬೇಕೆಂಬ ಚಿಂತನೆ ಮಾತ್ರ ಸಾಲದು. ಉದ್ದಿಮೆ ಬ್ಯಾಂಕ್‌ ವ್ಯವಹಾರ ಕುರಿತಂತೆ ಮಾಹಿತಿ ಅಗತ್ಯ. ಕ್ಷೇತ್ರ ಅಧ್ಯಯನ ಅನಿವಾರ್ಯ. ಬ್ಯಾಂಕ್ ಸಾಲ ಅಥವಾ ಸ್ವಂತ ಬಂಡವಾಳವೇ ಇರಲಿ ಯೋಜನಾಬದ್ಧವಾಗಿ ಖರ್ಚು ಮಾಡಬೇಕು’ ಎಂದು ಆರ್ಥಿಕ ಸಾಕ್ಷರತಾ ಸಲಹೆಗಾರರಾದ ವಿಶಾಲಾಕ್ಷಿ ಹೇಳಿದರು.

ಸಿಡಾಕ್ ಸಂಸ್ಥೆ ಜಂಟಿ ನಿರ್ದೇಶಕ ಎಂ.ಎಸ್.ಮಧು, ತರಬೇತುದಾರ ಆರ್.ಕಲ್ಯಾಣ್‌ಕುಮಾರ್‌ ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು