ಶನಿವಾರ, ಏಪ್ರಿಲ್ 17, 2021
27 °C

ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ವಿತರಣೆ, 6 ಕೇಂದ್ರಗಳಲ್ಲಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಶನಿವಾರ (ಜ.16) ಕೋವಿಡ್‌ ಲಸಿಕೆ ವಿತರಣೆಗೆ ಚಾಲನೆ ಸಿಗಲಿದ್ದು, ಆರೋಗ್ಯ ಇಲಾಖೆಯು ಲಸಿಕೆ ನೀಡಿಕೆಗೆ ಸಕಲ ಸಿದ್ಧತೆ ಮಾಡಿದೆ.

ಆರೋಗ್ಯ ಇಲಾಖೆಯು ಲಸಿಕೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜ.8ರಂದು ಜಿಲ್ಲೆಯ 8 ಕಡೆ ಕೋವಿಡ್‌ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ (ಡ್ರೈ ರನ್‌) ನಡೆಸಿ ಸಿದ್ಧತೆ ಪರಿಶೀಲಿಸಿದೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 600 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ದಿನ ಲಸಿಕೆ ಪಡೆಯಲಿದ್ದಾರೆ. ಇವರ ಹೆಸರನ್ನು ಕೋ–ವಿನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿ ಲಸಿಕೆ ನೀಡಿಕೆ ಸಂಬಂಧ ಮೊಬೈಲ್‌ಗೆ ಎಸ್‌ಎಂಎಸ್‌ ಕಳುಹಿಸಲಾಗಿದೆ.

ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಮಾಲೂರು, ಬಂಗಾರಪೇಟೆ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಗುತ್ತದೆ.

ಗರ್ಭಿಣಿ ಹಾಗೂ ಬಾಣಂತಿಯರಾಗಿರುವ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಪ್ರತಿ ವ್ಯಕ್ತಿಗೆ ತಲಾ 0.5 ಎಂಎಲ್‌ನ ಒಂದು ಡೋಸ್ ನೀಡಲಾಗುತ್ತದೆ. 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುತ್ತದೆ.

8 ಸಾವಿರ ಡೋಸ್‌: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಸೇರಿದಂತೆ ಮೊದಲ ಹಂತದಲ್ಲಿ 13,180 ಮಂದಿಗೆ ಲಸಿಕೆ ಕೊಡುವ ಗುರಿಯಿದೆ.

ಬೆಂಗಳೂರಿನಿಂದ ಜಿಲ್ಲೆಗೆ ‘ಕೋವಿಶೀಲ್ಡ್‌’ ಲಸಿಕೆಯ 8 ಸಾವಿರ ಡೋಸ್‌ ಪೂರೈಕೆಯಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ಲಸಿಕೆ ದಾಸ್ತಾನು ಕೇಂದ್ರದಲ್ಲಿ ಲಸಿಕೆ ದಾಸ್ತಾನು ಮಾಡಲಾಗಿದೆ. ಶನಿವಾರಕ್ಕೆ ಅಗತ್ಯವಿರುವಷ್ಟು ಲಸಿಕೆಯನ್ನು ಆಯಾ ಕೇಂದ್ರಗಳಿಗೆ ಶುಕ್ರವಾರ ಸಂಜೆ ಪೊಲೀಸ್‌ ಬೆಂಗಾವಲಲ್ಲಿ ಕೊಂಡೊಯ್ಯಲಾಯಿತು.

ಕೇಂದ್ರಗಳ ಸಿದ್ಧತೆ: ಪ್ರತಿ ಲಸಿಕಾ ಕೇಂದ್ರದಲ್ಲಿ 3 ಕೊಠಡಿ ಮೀಸಲಿಡಲಾಗಿದೆ. ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಇದರಲ್ಲಿ ಸೇರಿವೆ. ಪ್ರತಿ ಕೇಂದ್ರಕ್ಕೆ 5 ಮಂದಿ ಲಸಿಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಒಟ್ಟಾರೆ ಲಸಿಕೆ ಪ್ರಕ್ರಿಯೆ 3 ಕೊಠಡಿಗಳಲ್ಲಿ ನಡೆಯಲಿದೆ. ಮೊದಲನೇ ಕೊಠಡಿಯಲ್ಲಿ, ಕಾರ್ಯಾಚರಣೆಯಲ್ಲಿ ಭಾಗವಹಿಸಲು ಹೆಸರು ನೋಂದಣಿ ಮಾಡಿಕೊಂಡ ವ್ಯಕ್ತಿಯ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕೋ–ವಿನ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಆ ಕೊಠಡಿಯಲ್ಲಿ ಪೊಲೀಸ್ ಸೇರಿದಂತೆ ಇತರ ಭದ್ರತಾ ವ್ಯವಸ್ಥೆ ಇರುತ್ತದೆ. 2ನೇ ಕೊಠಡಿಯಲ್ಲಿ ಲಸಿಕೆ ನೀಡಲಾಗುತ್ತದೆ. ಬಳಿಕ ಆ ವ್ಯಕ್ತಿಯನ್ನು ಮೂರನೇ ಕೊಠಡಿಗೆ ಕಳುಹಿಸಿ, ಆರೋಗ್ಯದ ಮೇಲೆ ಅರ್ಧ ಗಂಟೆ ನಿಗಾ ವಹಿಸಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು