ಕೋಲಾರ: ನೆತ್ತಿ ಮೇಲೆ ಸುಡು ಬಿಸಿಲು... ಸೂರ್ಯನ ಪ್ರಖರತೆಗೆ ಕಾದ ಹೆಂಚಾಗಿರುವ ಇಳೆ... ಎಲ್ಲೆಲ್ಲೂ ಬಿಸಿಲ ಧಗೆ... ಜೀವಜಲಕ್ಕಾಗಿ ದಿನ ಬೆಳಗಾದರೆ ಕಾದಾಟ... ಕೊಳಾಯಿ– ಕೊಳವೆ ಬಾವಿ ಮುಂದೆ ಬಿಂದಿಗೆಗಳ ಸಾಲು ಸಾಲು ನೋಟ...

ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಹಾಲಿಗೆ ಬರವಿಲ್ಲ. ಆದರೆ, ಜೀವಜಲಕ್ಕೆ ಬರ. ಹೈನುಗಾರಿಕೆ, ರೇಷ್ಮೆ ಹಾಗೂ ಮಾವು ಬೆಳೆಗೆ ಹೆಸರಾಗಿರುವ ಜಿಲ್ಲೆಯಲ್ಲಿ ಬರ ಒದ್ದು ಮಲಗಿದೆ. 2011–12ರಿಂದಲೂ ಜಿಲ್ಲೆಯು ಸತತ ಬರಕ್ಕೆ ತುತ್ತಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಒಂದು ಕಾಲಕ್ಕೆ ಹಸಿರು ನಳ ನಳಿಸುತ್ತಿತ್ತು. ಆದರೆ, ಈಗ ಕಣ್ಣು ಹಾಯಿಸಿದಲ್ಲೆಲ್ಲಾ ಬರದ ಛಾಯೆ. ಬಹುಪಾಲು ಕೆರೆಗಳಲ್ಲಿ ನೀರು ಬತ್ತಿದ್ದು, 5 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ಜಿಲ್ಲೆಯಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಇಲ್ಲಿ ಕೊಳವೆ ಬಾವಿ, ಕೆರೆ ಕುಂಟೆಗಳೇ ನೀರಿಗೆ ಆಧಾರ. ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತುತ್ತಿದ್ದು, ಹಲವೆಡೆ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ 1,068 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶದಲ್ಲೂ ಘಟಕಗಳನ್ನು ತೆರೆಯಲಾಗಿದೆ. ಕೋಲಾರ ಮತ್ತು ಕೆಜಿಎಫ್ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲೂ ಘಟಕ ನಿರ್ಮಾಣ ಪ್ರಕ್ರಿಯೆ ಮುಂದುವರಿದಿದೆ.

ಸಮಸ್ಯಾತ್ಮಕ ಗ್ರಾಮ: ಜಿಲ್ಲೆಯಾದ್ಯಂತ 10 ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಮಾಲೂರು ತಾಲ್ಲೂಕಿನ ಚಿಕ್ಕ ಸಬ್ಬೇನಹಳ್ಳಿ, ಸೋಮಸಂದ್ರ, ಎ.ಡಿ ಕಾಲೊನಿ, ಮಾಸ್ತಿ 3ನೇ ಬ್ಲಾಕ್, ಮುಳಬಾಗಿಲು ತಾಲ್ಲೂಕಿನ ಜೋಗಪಲ್ಲಿ, ಶ್ರೀನಿವಾಸಪುರ ತಾಲ್ಲೂಕಿನ ಜೋಡಿ ಲಕ್ಷ್ಮೀಸಾಗರ, ಲಕ್ಷ್ಮೀಪುರ ಕ್ರಾಸ್, ಮಾಲಪಂದಿವಾರಿಪಲ್ಲಿ, ಎಸ್.ಗೊಲ್ಲಪಲ್ಲಿ ಮತ್ತು ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮಾರ್ಚ್ ವೇಳೆಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದ್ದು, 185 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲಾ ಕೇಂದ್ರದ ಕೋಲಾರ ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ಗೂ ಟ್ಯಾಂಕರ್ ನೀರು ಪೂರೈಸುವಂತೆ ಚುನಾಯಿತ ಸದಸ್ಯರ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಜಿಲ್ಲಾ ಕೇಂದ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರಾಜ್ಯ ಹಣಕಾಸು ನಿಧಿಯಲ್ಲಿ (ಎಸ್ಎಫ್ಸಿ) ₹ 1.50 ಕೋಟಿ ಬಳಸಿಕೊಳ್ಳಲು ಜಿಲ್ಲಾಧಿಕಾರಿ ನಗರಸಭೆಗೆ ಅನುಮತಿ ನೀಡಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ (ಎನ್ಆರ್ಡಿಡಬ್ಲ್ಯೂಪಿ) ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ತಾಲ್ಲೂಕಿಗೆ ₹ 25 ಲಕ್ಷ ಬಿಡುಗಡೆಯಾಗಿದೆ. ಪ್ರತಿ ತಾಲ್ಲೂಕಿನಲ್ಲಿ ₹ 1 ಕೋಟಿ ಮೊತ್ತದ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸೌಕರ್ಯಕ್ಕೆ ನಗರೋತ್ಥಾನ 3 ಮತ್ತು ಎಸ್ಎಫ್ಸಿ ಅನುದಾನ ಬಳಸಿಕೊಳ್ಳಲಾಗುತ್ತಿದೆ.

ಮೇವಿನ ಲಭ್ಯತೆ: ಹೈನೋದ್ಯಮವು ಜಿಲ್ಲೆಯ ಜೀವನಾಡಿಯಾಗಿದ್ದು, ಜಿಲ್ಲೆಯಲ್ಲಿ 2,08,519 ಜಾನುವಾರುಗಳಿವೆ. 98 ಸಾವಿರ ಮೆಟ್ರಿಕ್ ಟನ್ ಮೇವು ದಾಸ್ತಾನಿದ್ದು, 13 ವಾರದವರೆಗೆ ಸಮಸ್ಯೆಯಿಲ್ಲ. ಜಿಲ್ಲಾಡಳಿತವು ರೈತರಿಗೆ 74 ಮಿನ್ ಕಿಟ್ ವಿತರಿಸಿದ್ದು, ಹೆಚ್ಚುವರಿಯಾಗಿ 25 ಸಾವಿರ ಮಿನ್ ಕಿಟ್ಗೆ ಬೇಡಿಕೆ ಸಲ್ಲಿಸಿದೆ.

ನೀರಿನ ಸೌಕರ್ಯವುಳ್ಳ ರೈತರ ಜಮೀನಿನಲ್ಲಿ ಹಾಗೂ ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಭರ್ತಿಯಾಗಿರುವ ಕೆರೆಗಳ ಅಕ್ಕಪಕ್ಕದ ಜಮೀನುಗಳಲ್ಲಿ ಮೇವು ಬೆಳೆಯಲು ರೈತರಿಗೆ ಪ್ರೋತ್ಸಾಹಧನವಾಗಿ ಕೋಚಿಮುಲ್ನಿಂದ ಎಕರೆಗೆ ₹ 2 ಸಾವಿರ ನೀಡಲಾಗುತ್ತಿದೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳಲ್ಲಿ ರೈತರನ್ನು ನೊಂದಾಯಿಸಿಕೊಂಡು ಮೇವಿನ ಕಿಟ್ ವಿತರಿಸಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ತಾಲ್ಲೂಕಿಗೆ ಒಂದರಂತೆ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಡಳಿತವು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಬರ ಪರಿಸ್ಥಿತಿ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿಯು ಪ್ರತಿ ವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.

ಬೆಳೆ ಹಾನಿ: ಮುಂಗಾರು ಹಂಗಾಮಿನಲ್ಲಿ 1.01 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿತ್ತು. ಆದರೆ, ಅನಾವೃಷ್ಟಿ ಕಾರಣಕ್ಕೆ 71,063 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಯಿತು. ನಂತರ ಮಳೆ ಬಾರದೆ ಬೀಜಗಳು ಮೊಳಕೆಯೊಡೆಯಲೇ ಇಲ್ಲ. ಅಲ್ಪಸ್ವಲ್ಪ ಬೆಳೆದಿದ್ದ ಬೆಳೆಗಳು ಒಣಗಿದವು. ಮುಂಗಾರು ಮಳೆ ವೈಫಲ್ಯದಿಂದ ಶೇ 80 ಹಾಗೂ ಹಿಂಗಾರು ಮಳೆ ಕೊರತೆಯಿಂದ ಶೇ 100ರಷ್ಟು ಬೆಳೆ ನಾಶವಾಗಿದೆ.

ಒಟ್ಟಾರೆ 52,320 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 39,438 ಹೆಕ್ಟೇರ್ ಪ್ರದೇಶದಲ್ಲಿ ಶೇ 33ರಷ್ಟು ಬೆಳೆ ನಾಶವಾಗಿದೆ. ಬೆಳೆ ನಷ್ಟ ಸಂಬಂಧ ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ನಡೆಸಿದ್ದು, ರೈತರಿಗೆ ಇನ್ಪುಟ್ ಸಬ್ಸಿಡಿ ನೀಡಲು ₹ 26.75 ಕೋಟಿ ಅಗತ್ಯವೆಂದು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಜಿಲ್ಲಾಡಳಿತದ ಸಿದ್ಧತೆ: ಬರ ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತವು ನರೇಗಾ ಅಡಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸುತ್ತಿದೆ. ರೈತರ ಗುಳೆ ತಪ್ಪಿಸಲು ಪ್ರತಿ ಹಳ್ಳಿಯಲ್ಲೂ ಕೆಲಸ ಗುರುತಿಸಲಾಗಿದೆ. ಕೆರೆಗಳ ಹೂಳು ತೆಗೆಯುವುದು, ಚೆಕ್ಡ್ಯಾಂ ನಿರ್ಮಾಣ, ಸರ್ಕಾರಿ ಶಾಲೆಗಳ ಸುತ್ತ ಕಾಂಪೌಂಡ್ ನಿರ್ಮಾಣ, ಕಲ್ಯಾಣಿ ಮತ್ತು ಗೋಕುಂಟೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೂಲಿ ಕಾರ್ಮಿಕರಿಗೆ ದಿನಕ್ಕೆ ತಲಾ ₹ 249 ಕೂಲಿ ನೀಡಲಾಗುತ್ತಿದೆ.

ನರೇಗಾ ಮಾನವ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಅನ್ನದಾತರ ವಲಸೆ ತಪ್ಪಿಸಲು ನರೇಗಾದಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ನರೇಗಾ ಅಡಿ 22 ಲಕ್ಷ ಮಾನವ ದಿನ ಸೃಜಿಸುವ ಗುರಿಯಿತ್ತು. ಈಗಾಗಲೇ ಈ ಗುರಿ ಸಾಧನೆಯಾಗಿದ್ದು, 33 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯಕ್ಕೆ 40 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದೆ. ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಬರ ಪರಿಸ್ಥಿತಿ ಕಾರಣಕ್ಕೆ ರೈತರು ಕೆಲಸಕ್ಕಾಗಿ ಗುಳೆ ಹೋಗುವ ಸನ್ನಿವೇಶವೇ ಸೃಷ್ಟಿಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಮುಖ್ಯವಾಗಿ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ನರೇಗಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
–ಜಿ.ಜಗದೀಶ್, ಜಿ.ಪಂ ಸಿಇಒ

ಬರದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ತಾಲ್ಲೂಕು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಬರ ಪರಿಹಾರ ಕಾಮಗಾರಿ ಮೇಲ್ವಿಚಾರಣೆಗಾಗಿ 27 ಹೋಬಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
–ಜೆ.ಮಂಜುನಾಥ್, ಜಿಲ್ಲಾಧಿಕಾರಿ

ಮನೆಯ ಕೊಳಾಯಿಯಲ್ಲಿ ನೀರು ಬಂದು ಏಳೆಂಟು ತಿಂಗಳಾಗಿದೆ. ನಗರಸಭೆಯಿಂದಲೂ ಟ್ಯಾಂಕರ್ ಮೂಲಕ ನೀರು ಕೊಡುತ್ತಿಲ್ಲ. ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುತ್ತಿದ್ದೇವೆ.
–ವೇದಶ್ರೀ, ಕೋಲಾರ ನಿವಾಸಿ

ಬೇಸಿಗೆ ಆರಂಭಕ್ಕೂ ಮುನ್ನವೇ ಗ್ರಾಮದಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ಕೆರೆ ಕುಂಟೆಗಳಲ್ಲಿ ನೀರು ಬತ್ತಿದ್ದು, ಜಾನುವಾರುಗಳನ್ನು ಸಾಕುವುದೇ ದೊಡ್ಡ ಚಿಂತೆಯಾಗಿದೆ. ಮಳೆ– ಬೆಳೆ ಇಲ್ಲದೆ ಬದುಕು ದುಸ್ತರವಾಗಿದೆ.
–ಶಾಂತಮ್ಮ, ಕಲ್ಲಮಂಜಲಿ ಗ್ರಾಮದ ರೈತ ಮಹಿಳೆ

ತಾಲ್ಲೂಕು ಶುದ್ಧ ಕುಡಿಯುವ ನೀರಿನ ಘಟಕ
ಕೋಲಾರ 257
ಮಾಲೂರು 148
ಬಂಗಾರಪೇಟೆ 234
ಮುಳಬಾಗಿಲು 191
ಶ್ರೀನಿವಾಸಪುರ 238

ಮಾರ್ಚ್ ವೇಳೆಗೆ ನೀರಿನ ಸಮಸ್ಯೆ ಸಾಧ್ಯತೆ
ತಾಲ್ಲೂಕು ಗ್ರಾಮಗಳು
ಕೋಲಾರ 41
ಮಾಲೂರು 21
ಬಂಗಾರಪೇಟೆ 18
ಮುಳಬಾಗಿಲು 60
ಶ್ರೀನಿವಾಸಪುರ 45

ಜಿಲ್ಲೆಯಲ್ಲಿ ಕೊಳವೆ ಬಾವಿ ವಿವರ
ನೀರು ಬತ್ತಿರುವುದು:1,927
ಸುಸ್ಥಿತಿಯಲ್ಲಿರುವುದು:3,519
ವಿಫಲವಾಗಿರುವುದು:1,715
ಒಟ್ಟು:7,161

ಅಂಕಿ ಅಂಶ.....
* 4,012 ಚದರ ಕಿ.ಮೀ ಜಿಲ್ಲೆಯ ವಿಸ್ತಾರ
* 17 ಲಕ್ಷ ದಾಟಿದ ಜಿಲ್ಲೆಯ ಜನಸಂಖ್ಯೆ
* 2,08,519 ಜಾನುವಾರು
* 98 ಸಾವಿರ ಮೆಟ್ರಿಕ್ ಟನ್ ಮೇವು ದಾಸ್ತಾನು
* 52,320 ಹೆಕ್ಟೇರ್ ಬೆಳೆ ನಾಶ
* ₹ 32.21 ಕೋಟಿ ಬೆಳೆ ಪರಿಹಾರ ಬೇಡಿಕೆ
* ₹ 9.44 ಕೋಟಿ ನೀರು ಸೌಕರ್ಯಕ್ಕೆ ಅಗತ್ಯ
* ₹ 21.26 ಕೋಟಿ ಮೇವು– ಲಸಿಕೆಗೆ ಅವಶ್ಯಕ
* 10 ನೀರಿನ ಸಮಸ್ಯಾತ್ಮಕ ಗ್ರಾಮಗಳು
* ₹ 6.20 ಕೋಟಿ ಜಿಲ್ಲಾಧಿಕಾರಿ ವೈಯಕ್ತಿಕ ಖಾತೆಯಲ್ಲಿದೆ
* 1,068 ಶುದ್ಧ ಕುಡಿಯುವ ನೀರಿನ ಘಟಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.