ಅಭಿವೃದ್ಧಿ ದೃಷ್ಟಿಯಲ್ಲಿ ಕರ್ತವ್ಯ ನಿರ್ವಹಿಸಿ

7
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಅಧ್ಯಕ್ಷ ಶ್ರೀನಾಥ್ ಕಿವಿಮಾತು

ಅಭಿವೃದ್ಧಿ ದೃಷ್ಟಿಯಲ್ಲಿ ಕರ್ತವ್ಯ ನಿರ್ವಹಿಸಿ

Published:
Updated:
Prajavani

ಕೋಲಾರ: ‘ಬ್ಯಾಂಕ್ ಅಧಿಕಾರಿಗಳು ಸಮಾಜ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು’ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಅಧ್ಯಕ್ಷ ಶ್ರೀನಾಥ್ ಎಚ್.ಜೋಶಿ ಕಿವಿಮಾತು ಹೇಳಿದರು.

ಇಲ್ಲಿನ ಜಯನಗರದಲ್ಲಿ ಗುರುವಾರ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ‘ಬ್ಯಾಂಕ್‌ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ. ಬ್ಯಾಂಕ್‌ನಿಂದ ಗ್ರಾಹಕರಿಗೆ ದೊರೆಯುವ ಸೌಕರ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ 3 ಗ್ರಾಮೀಣ ಬ್ಯಾಂಕ್‌ಗಳಿದ್ದು, ಕಾವೇರಿ ಗ್ರಾಮೀಣ ಮತ್ತು ಪ್ರಗತಿ ಕೃಷ್ಣಾ ಬ್ಯಾಂಕ್‌ಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಈ ಎರಡು ಬ್ಯಾಂಕ್‌ಗಳು ಏ.1ರಿಂದ ಒಟ್ಟಿಗೆ ಕಾರ್ಯ ನಿರ್ವಹಿಸಲಿವೆ. ಇದರಿಂದ ಬ್ಯಾಂಕ್‌ನ ಅಭಿವೃದ್ಧಿ ಜತೆಗೆ ಸ್ಥಳೀಯ ಅಭಿವೃದ್ಧಿಗೂ ಸಹಾಯವಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಬ್ಯಾಂಕ್‌ ₹ 30 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ₹ 14,500 ಕೋಟಿ ಠೇವಣಿ ಹೊಂದಿದೆ. 11 ಜಿಲ್ಲೆಗಳಲ್ಲಿ 280 ಎಟಿಎಂ ಘಟಕಗಳಿವೆ. ಗ್ರಾಮೀಣ ಭಾಗದ ಅಭಿವೃದ್ಧಿಯೇ ಬ್ಯಾಂಕ್‌ನ ಧ್ಯೇಯ’ ಎಂದು ವಿವರಿಸಿದರು.

‘ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನೀಡುವ ಸೂಚನೆಯನ್ನು ಪಾಲಿಸುವುದು ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜವಾಬ್ದಾರಿ. ಸರ್ಕಾರದ ಸೂಚನೆಗಳನ್ನು ಕರ್ತವ್ಯವೆಂದು ಭಾವಿಸಿ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಸಹಕರಿಸಬೇಕು: ‘ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಬಂದಿದೆ. ಅದೇ ರೀತಿ ಗ್ರಾಹಕರು ಬ್ಯಾಂಕ್‌ನ ಸೌಕರ್ಯ ಪಡೆದು ಅಭಿವೃದ್ಧಿಗೆ ಸಹಕರಿಸಬೇಕು. ಬ್ಯಾಂಕ್‌ನಿಂದ ನೂತನ ಠೇವಣಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು. ಮನೆ, ಆಭರಣ, ಬೆಳೆ ಸಾಲ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸೇವೆ ಅಗತ್ಯ: ‘ದೇಶದ ಪಂಚವಾರ್ಷಿಕ ಯೋಜನೆ ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯುತ್ತದೆ. ಶಿಕ್ಷಣ, ಸಂಶೋಧನೆ, ಕೃಷಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಆರ್ಥಿಕ ಸೇವೆ ಅಗತ್ಯವಾಗಿದ್ದು, ನೆರವು ಕಲ್ಪಿಸುವ ಜವಾಬ್ದಾರಿ ಬ್ಯಾಂಕ್‌ಗಳ ಮೇಲಿದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಅಭಿಪ್ರಾಯಪಟ್ಟರು.

‘ಕೆಲ ಸಂದರ್ಭದಲ್ಲಿ ಘೋಷಣೆ ಕೇಳಿದರೆ ಅಘಾತವಾಗುತ್ತದೆ. ವಾಹನ, ಮನೆ ಮೇಲೆ ಸಾಲ ನೀಡುತ್ತಾರೆ. ಜನರಿಗೆ ಸಾಲದ ಕಂತು ಕಟ್ಟಲು ಸಾಧ್ಯವಾಗದೆ ಮಾಲನ್ನು ಕಳೆದುಕೊಳ್ಳುತ್ತಿರುವುದು ವಿಷಾದ. ವಿದ್ಯಾವಂತ ನಿರುದ್ಯೋಗಿಗಳ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್‌ಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಎಚ್.ಚಂದ್ರಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !