ಸೋಮವಾರ, ಜನವರಿ 20, 2020
18 °C
ಬೆಸ್ಕಾಂ ಸಿಬ್ಬಂದಿಗೆ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಗುರುಸ್ವಾಮಿ ಸಲಹೆ

ವಿದ್ಯುತ್ ಅಪಘಡ: ಎಚ್ಚರ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನೌಕರರು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆ ಜತೆಗೆ ತಮ್ಮ ಸುರಕ್ಷತೆಗೂ ಗಮನ ಹರಿಸಬೇಕು’ ಎಂದು ಬೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಕೆ.ಎಚ್.ಗುರುಸ್ವಾಮಿ ಸಲಹೆ ನೀಡಿದರು.

ಇಲ್ಲಿ ಶನಿವಾರ ನಡೆದ ಬೆಸ್ಕಾಂ ಕೋಲಾರ ವೃತ್ತದ ನೌಕರರ ಸುರಕ್ಷತಾ ಜಾಗೃತಿ ಮಾಸಾಚರಣೆ ಸಮಾರಂಭದಲ್ಲಿ ಮಾತನಾಡಿ, ‘ಸಿಬ್ಬಂದಿಯು ಸುರಕ್ಷತಾ ಕ್ರಮ ಪಾಲಿಸುವ ಜತೆಗೆ ವಿದ್ಯುತ್ ಅಪಘಡ ಸಂಭವಿಸದಂತೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಲೈನ್‌ಮನ್‌ಗಳು ಕಾರ್ಯ ಸ್ಥಳದಲ್ಲಿ ವಿದ್ಯುತ್ ಪ್ರವಹಿಸದಂತೆ ಸೂಕ್ತವಾದ ಗ್ರೌಂಡಿಂಗ್ ಮತ್ತು ಸುರಕ್ಷತಾ ಕ್ರಮ ಅನುಸರಿಸಬೇಕು. ವಿದ್ಯುತ್ ಬಗ್ಗೆ ಜಾಗ್ರತೆ ಇರಬೇಕು. ಸಾಧ್ಯವಾದಷ್ಟು ವಿದ್ಯುತ್ ತಂತಿಗಳಿಂದ ದೂರವಿದ್ದು ಕೆಲಸ ಮಾಡಬೇಕು. ಮನೆಗಳ ಮಹಡಿ ಬಳಿ ವಿದ್ಯುತ್‌ ತಂತಿ ಹಾದು ಹೋಗಿದ್ದರೆ ಆ ಬಗ್ಗೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಬೇಕು’ ಎಂದು ತಿಳಿಸಿದರು.

‘ಬೆಸ್ಕಾಂ ಸಿಬ್ಬಂದಿ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಸಾಕಷ್ಟು ವಿದ್ಯುತ್‌ ಅವಘಡ ಸಂಭವಿಸುತ್ತವೆ. ಆದ್ದರಿಂದ ಸಿಬ್ಬಂದಿ ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು’ ಎಂದು ಬೆಸ್ಕಾಂ ಗುಪ್ತಚರ ಇಲಾಖೆ ಡಿವೈಎಸ್‍ಪಿ ನಾಗರಾಜ್ ಹೇಳಿದರು.

ಅಪಘಡ ಕಡಿಮೆ

‘ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ವಿದ್ಯುತ್ ಅಪಘಡಗಳ ಪ್ರಮಾಣ ಕಡಿಮೆಯಿದೆ. ಅನಗತ್ಯವಾಗಿ ವಿದ್ಯುತ್‌ ಪೋಲು ಮಾಡಬಾರದು. ಜನ ಅವಶ್ಯಕತೆಗೆ ತಕ್ಕಂತೆ ವಿದ್ಯುತ್‌ ಬಳಸಬೇಕು. ವಿದ್ಯುತ್‌ ಕಳವಿನ ಬಗ್ಗೆ ಸಾರ್ವಜನಿಕರು ಸಿಬ್ಬಂದಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಗ್ರಾಹಕರು ಸಕಾಲಕ್ಕೆ ವಿದ್ಯುತ್‌ ಬಿಲ್‌ ಪಾವತಿಸಬೇಕು. ‘ವಿದ್ಯುತ್‌ ಸಂಪರ್ಕದ ಕೆಲಸವನ್ನು ಪರವಾನಗಿ ಪಡೆದ ಗುತ್ತಿಗೆದಾರರಿಂದ ಮಾತ್ರ ಮಾಡಿಸಬೇಕು. ಮನೆಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗ್ರೌಡಿಂಗ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ವಿದ್ಯುತ್ ಉಪಕರಣಗಳನ್ನು ಸುರಕ್ಷತೆಗಾಗಿ ಆಗಾಗ್ಗೆ ಪರೀಕ್ಷಿಸಬೇಕು. ವಿದ್ಯುತ್ ತಂತಿಗಳ ಸಮೀಪ ಕಟ್ಟಡ ನಿರ್ಮಿಸಬಾರದು’ ಎಂದರು.

‘ಸಾರ್ವಜನಿಕರು ತುಂಡಾಗಿ ಕೆಳಗೆ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ದೂರುಗಳದ್ದರೆ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಬೇಕು. ವಿದ್ಯುತ್ ಸ್ವಿಚ್‌ ಮತ್ತು ಉಪಕರಣಗಳನ್ನು ಒದ್ದೆಯಾದ ಕೈಗಳಿಂದ ಮುಟ್ಟಬಾರದು. ಜಮೀನುಗಳ ತಂತಿ ಬೇಲಿಗೆ ವಿದ್ಯುತ್ ಹಾಯಿಸಬಾರದು’ ಎಂದು ಬೆಸ್ಕಾಂ ಜಾಗೃತ ದಳದ ಎಂಜಿನಿಯರ್ ಕೆ.ಆರ್.ನರಹರಿ ತಿಳಿಸಿದರು.

ಬೆಸ್ಕಾಂ ಜಾಗೃತ ದಳ ಅಧಿಕಾರಿ ಎಸ್.ಎಸ್.ಹುಸೇನಿ, ಉಪ ಲೆಕ್ಕ ನಿಯಂತ್ರಣಾಧಿಕಾರಿ ಎ.ಷಫೀವುಲ್ಲಾ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು