ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಯೋಜನೆಯಿಂದ ಉದ್ಯೋಗ ಕ್ರಾಂತಿ

ಮಹಿಳಾ ಸಬಲೀಕರಣಕ್ಕೆ ಆರ್ಥಿಕ ನೆರವು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 2 ಜನವರಿ 2021, 13:30 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಮಹತ್ವಾಕಾಂಕ್ಷೆಯ ಕಾಯಕ ಯೋಜನೆ ಮೂಲಕ ಮಹಿಳಾ ಸಬಲೀಕರಣ, ಉದ್ಯಮಶೀಲತೆ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ದುಡಿಯುವ ಕೈಗೆ ಆರ್ಥಿಕ ಶಕ್ತಿ ತುಂಬುವ ಉದ್ಯೋಗ ಕ್ರಾಂತಿಗೆ ಬ್ಯಾಂಕ್ ಮುಂದಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಕಾಯಕ ಯೋಜನೆ ಅನುಷ್ಠಾನ ಸಂಬಂಧ ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘10 ಮಂದಿ ಸದಸ್ಯರಿರುವ ಪ್ರತಿ ಮಹಿಳಾ ಸ್ವಸಹಾಯ ಸಂಘಗಳಿಗೆ ಕಾಯಕ ಯೋಜನೆಯಡಿ ₹ 10 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುವುದು’ ಎಂದರು.

‘ಸಾಲದಲ್ಲಿ ₹ 5 ಲಕ್ಷವು ಶೂನ್ಯ ಬಡ್ಡಿ ಸಾಲವಾಗಿದೆ. ಉಳಿದ ₹ 5 ಲಕ್ಷಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಾಲದ ಹಣದಿಂದ ಉದ್ಯಮ ಕಟ್ಟಿಕೊಳ್ಳುವ ಮಹಿಳಾ ಸಂಘಗಳು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಚಿಂತನೆಯಿದೆ’ ಎಂದು ಮಾಹಿತಿ ನೀಡಿದರು.

‘ಮಹಿಳಾ ಸಬಲೀಕರಣಕ್ಕೆ ಕೆಲ ಯೋಜನೆಗಳನ್ನು ಗುರುತಿಸಿ ಸಂಘಗಳಿಗೆ ಸೂಚಿಸಲಾಗುವುದು. ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಬದಲು ಲಾಭವನ್ನು ಸಂಘದ ಶ್ರಮಿಕ ಸದಸ್ಯರೇ ಪಡೆಯುವಂತಾಗಲು ಡಿಸಿಸಿ ಬ್ಯಾಂಕ್‌ನಿಂದ ಕಾಯಕ ಯೋಜನೆ ಪರಿಚಯಿಸಲಾಗುತ್ತಿದೆ’ ಎಂದು ವಿವರಿಸಿದರು.

ನಬಾರ್ಡ್ ಸಹಕಾರ: ‘ದುಡಿಮೆಯೂ ನಮ್ಮದೇ ಲಾಭವೂ ನಮ್ಮದೇ ಎಂಬ ಧ್ಯೇಯದೊಂದಿಗೆ ಕಾಯಕ ಯೋಜನೆ ಲೋಕಾರ್ಪಣೆ ಮಾಡಲಾಗುವುದು. ತರಬೇತಿ, ಬಂಡವಾಳ, ಮಾರುಕಟ್ಟೆಯ ಜವಾಬ್ದಾರಿ ಬ್ಯಾಂಕ್‌ನದು. ದುಡಿಮೆಯ ಶ್ರಮ ಹಾಗೂ ಲಾಭ ಮಹಿಳಾ ಸಂಘಗಳದು. ರಾಜ್ಯದಲ್ಲಿ ಇದೊಂದು ವಿನೂತನ ಯೋಜನೆ. ಇದಕ್ಕೆ ನಬಾರ್ಡ್ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಹೇಳಿದರು.

‘ಕಾಯಕ ಯೋಜನೆಯು ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕ ಯೋಜನೆಯಾಗಿದೆ. ಬಂಡವಾಳ ಇಲ್ಲದೆ ಬಹಳಷ್ಟು ಮಂದಿ ಉತ್ಪಾದನೆಗೆ ಮುಂದಾಗುತ್ತಿಲ್ಲ. ಶೂನ್ಯ ಬಡ್ಡಿ ಸಾಲ ಸದ್ಬಳಕೆ ಮಾಡಿಕೊಂಡರೆ ಜೀವನ ನಿರ್ವಹಣೆ ಸುಲಭ ಮತ್ತು ನಿರುದ್ಯೋಗ ಸಮಸ್ಯೆ ಕೊನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎನ್‌ಪಿಎ ಇಳಿಕೆ: ‘ಈ ಹಿಂದೆ ₹ 15 ಕೋಟಿ ಇದ್ದ ಬ್ಯಾಂಕ್‌ನ ಠೇವಣಿಯನ್ನು ₹ 325 ಕೋಟಿಗೆ ಏರಿಸಿದ್ದೇವೆ. ಶೇ 95ರಷ್ಟಿದ್ದ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವನ್ನು ಶೇ 2.5ಕ್ಕೆ ಇಳಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ ಎನ್‌ಪಿಎ ಪ್ರಮಾಣವನ್ನು ಶೇ 2ಕ್ಕಿಂತ ಕಡಿಮೆ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಾರ್ವಜನಿಕರ ನಂಬಿಕೆ ಹೆಚ್ಚಿಸಿಕೊಂಡಿರುವ ಬ್ಯಾಂಕ್‌ ಎಟಿಎಂ ಕಾರ್ಡ್‌, ಮೈಕ್ರೊ ಎಟಿಎಂ ಸೇವೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಫೋನ್‌–ಪೇ ಸೇವೆ ನೀಡುತ್ತೇವೆ. ಡಿಸಿಸಿ ಬ್ಯಾಂಕ್‌ ಸಾಲ ನೀಡಿಕೆ ಜತೆಗೆ ಠೇವಣಿ ಇಡುವುದಕ್ಕೂ ಅರ್ಹವಾಗಿದೆ. ಠೇವಣಿಗೆ ಇತರೆ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ನೀಡುತ್ತದೆ’ ಎಂದರು.

ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಕೆ.ವಿ.ದಯಾನಂದ್, ಚನ್ನರಾಯಪ್ಪ, ವೇದಾವತಿ, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಕಾರ ಸಂಘಗಳ ಉಪ ನಿಬಂಧಕ ಸಿದ್ದನಗೌಡ ನೀಲಪ್ಪನವರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT