ಎಕ್ಸ್‌ಪ್ರೆಸ್ ಕಾರಿಡಾರ್: ಭೂಪರಿಹಾರಕ್ಕೆ ಒತ್ತಾಯ

ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಸ್ವಾಧೀನಪಡಿಸಿಕೊಳ್ಳುವ ಕೃಷಿ ಜಮೀನಿಗೆ ಪರಿಹಾರ ನೀಡದೆ ಕಾಮಗಾರಿ ನಡೆಸಬಾರದೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಎದುರು ಜಾನುವಾರುಗಳ ಸಮೇತ ಪ್ರತಿಭಟನೆ ಮಾಡಿದರು.
‘ಸರ್ಕಾರ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡು ರೈತರನ್ನು ಬೀದಿಪಾಲು ಮಾಡುತ್ತಿದೆ. ಭೂಮಿ ಕಳೆದುಕೊಂಡ ರೈತರು ಪರಿಹಾರದ ಹಣಕ್ಕಾಗಿ ವರ್ಷಗಟ್ಟಲೇ ಸರ್ಕಾರಿ ಕಚೇರಿಗೆ ಅಲೆಯುವಂತಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಜಮೀನು ಸ್ವಾಧೀನಕ್ಕೆ ಕಾನೂನಿನ ಅಸ್ತ್ರ ಬಳಸುತ್ತಿದೆ. ಮತ್ತೊಂದೆಡೆ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಸೃಷ್ಟಿಸಿ ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ಸರ್ಕಾರಿ ಜಮೀನಿಗೆ ಅಧಿಕಾರಿಗಳೇ ಪರಿಹಾರ ಪಡೆಯುತ್ತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯು ಅಧಿಕಾರಿಗಳಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಅಧಿಕಾರಿಗಳು ಕಾರಿಡಾರ್ ಮಾರ್ಗದಲ್ಲಿನ ಸರ್ಕಾರಿ ಜಮೀನನ್ನು ಅಕ್ರಮವಾಗಿ ಅನರ್ಹರಿಗೆ ಮಂಜೂರು ಮಾಡಿದ್ದಾರೆ. ನೂರಾರು ಎಕರೆ ಜಮೀನು ಹೊಂದಿರುವವರ ಸಹ ಕಾರಿಡಾರ್ ಮಾರ್ಗದಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ದೂರಿದರು.
ರೈತರಿಗೆ ಅನ್ಯಾಯ: ‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನಿಗೆ ಏಕರೂಪದ ಪರಿಹಾರ ನಿಗದಿಪಡಿಸಿಲ್ಲ. ಹೊಸಕೋಟೆ ಭಾಗದಲ್ಲಿ ಎಕರೆಗೆ ₹ 2 ಕೋಟಿ ಪರಿಹಾರ ನಿಗದಿಯಾಗಿದ್ದರೆ ಜಿಲ್ಲೆಯ ಮಾಲೂರು ಭಾಗದಲ್ಲಿ ₹ 1.50 ಕೋಟಿ ನಿಗದಿಪಡಿಸಲಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಪ್ರತಿಭಟಕಾರರು ಕಿಡಿಕಾರಿದರು.
‘ಕಾರಿಡಾರ್ ಮಾರ್ಗದಲ್ಲಿನ ಅಕ್ರಮ ಭೂ ಮಂಜೂರಾತಿ ಬಗ್ಗೆ ಉನ್ನತ ತನಿಖೆ ನಡೆಸಬೇಕು. ಕಾರಿಡಾರ್‌ಗೆ ಭೂಸ್ವಾಧೀನವಾದ ನಂತರ ರೈತರಿಗೆ ಶೀಘ್ರವೇ ಪರಿಹಾರ ಕೊಡಬೇಕು. ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಕೃಷಿ ಜಮೀನಿಗೆ ಏಕರೂಪದ ಪರಿಹಾರ ನಿಗದಿಪಡಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಚಾಂದ್‌ಪಾಷಾ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ನಾಗರಾಜಗೌಡ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.