ಶನಿವಾರ, ಸೆಪ್ಟೆಂಬರ್ 25, 2021
24 °C
ವದಂತಿಗೆ ಕಿವಿಗೊಡಬೇಡಿ: ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ

ರೈತರು ಬೆಳೆ ವಿಮೆ ಮಾಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತೋಟಗಾರಿಕೆ ಬೆಳೆಗಳಿಗೆ ರೈತರು ವಿಮೆ ಮಾಡಿಸಿದರೆ ಒಂದು ಎಕರೆಗೆ ₹ 80 ಸಾವಿರ ಬೆಳೆ ಪರಿಹಾರ ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಗುರುವಾರ ನಡೆದ ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬೆಳೆಗಳ ಮೇಲೆ ವಿಮೆ ಪಾವತಿ ಮಾಡಿದರೆ ದುಡ್ಡು ಬರುವುದಿಲ್ಲ ಎಂಬ ವದಂತಿಗೆ ರೈತರು ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

‘ರೈತರು ತಪ್ಪದೇ ಸಮೀಪದ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆಗೆ ಹೆಸರು ನೋಂದಾಯಿಸಬೇಕು. ಪ್ರತಿ ಹೆಕ್ಟೇರ್ ಬೆಳೆಗೆ ವಿಮೆ ಕಂತು ₹ 3,500 ಇದೆ. ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚು ತೋಟಗಾರಿಕೆ ಬೆಳೆಗಾರರಿದ್ದಾರೆ. ಹೀಗಾಗಿ ಹೆಸರು ನೋಂದಾಯಿಸಿದರೆ ಅನುಕೂಲವಾಗುತ್ತದೆ. ಪ್ರಸಕ್ತ ವರ್ಷದಲ್ಲಿ 12 ಸಾವಿರಕ್ಕೂ ಹೆಚ್ಚು ರೈತರನ್ನು ನೋಂದಣಿ ಮಾಡಿಸುವ ಗುರಿಯಿದೆ’ ಎಂದರು.

‘2016ನೇ ಸಾಲಿನಿಂದ ವಿಮೆ ಸೌಲಭ್ಯವನ್ನು ತೋಟಗಾರಿಕೆ ಬೆಳೆಗಳಿಗೆ ಕಲ್ಪಿಸಲಾಗಿದೆ. 2016–17ನೇ ಸಾಲಿನಲ್ಲಿ 3,599 ಮಂದಿ, 2017–18ನೇ ಸಾಲಿನಲ್ಲಿ 1,500 ರೈತರು, 2018–19ನೇ ಸಾಲಿನಲ್ಲಿ 2,100 ಮಂದಿ ಮಾತ್ರ ಹೆಸರು ನೋಂದಣಿ ಮಾಡಿಸಿ ಪರಿಹಾರ ಪಡೆದಿದ್ದಾರೆ’ ಎಂದು ವಿವರಿಸಿದರು.

‘ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟವಾದರೆ ವಿಮೆ ಯೋಜನೆ ಮೂಲಕ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ 4 ರೀತಿಯಲ್ಲಿ ಬೆಳೆ ಹಾನಿ ಪರಿಗಣಿಸಲಾಗುತ್ತದೆ. ಇದು ಹೆಚ್ಚಾಗಿ ಮಾವು ಬೆಳೆಗೆ ಅನ್ವಯವಾಗಲಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಪ್ರಮಾಣದ ಮೂಲಕ ಪರಿಗಣಿಸಲಾಗುವುದು. ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರೋಗಗಳ ಮೂಲಕ, ನಂತರ ಹೂವು ಬಿಡುವ ಸಂದರ್ಭದಲ್ಲಿ ಆಗುವ ಸಮಸ್ಯೆ ಮತ್ತು ಏಪ್ರಿಲ್ ತಿಂಗಳವರೆಗೆ ಮತ್ತೆ ಮಳೆ ಪ್ರಮಾಣ ಆಧರಿಸಿ ನಷ್ಟ ಪರಿಗಣಿಸಲಾಗುವುದು’ ಎಂದು ಮಾಹಿತಿ ನೀಡಿದರು.

₹ 80 ಸಾವಿರ ಪರಿಹಾರ: ‘ಹೆಸರು ನೋಂದಾಯಿಸದ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದ ನಾಶವಾದರೆ₹ 18 ಸಾವಿರ ಮಾತ್ರ ನೀಡಲಾಗುತ್ತದೆ. ₹ 3,500 ವಿಮೆ ಕಂತು ಪಾವತಿಸಿ ಹೆಸರು ನೋಂದಣಿ ಮಾಡಿಸಿದರೆ ಕನಿಷ್ಠ ₹ 20 ಸಾವಿರದಿಂದ ₹ 80 ಸಾವಿರದವರೆಗೆ ಪರಿಹಾರ ಪಡೆದುಕೊಳ್ಳಬಹುದು. ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಪರಿಹಾರ ಕೊಡುವುದಿಲ್ಲ: ‘ವಿಮೆ ಕಂತಿನ ಮೊತ್ತ ಪಾವತಿಸಲು ರೈತರಿಗೆ ಕಷ್ಟವಾಗುತ್ತಿದೆ. ಬೆಳೆ ವಿಮೆ ಯೋಜನೆಯ ಆರಂಭದಲ್ಲಿ ಅಧಿಕಾರಿಗಳು ರೈತರಿಗೆ ಇಲ್ಲಸಲ್ಲದ ಆಸೆ ತೋರಿಸುತ್ತಾರೆ. ವಿಮೆ ಕಂತು ಕಟ್ಟಿ ಬೆಳೆ ನಾಶವಾದ ನಂತರ ಪರಿಹಾರ ಕೊಡುವುದಿಲ್ಲ’ ಎಂದು ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ವಿಮೆ ಯೋಜನೆಯ ಪ್ರಯೋಜನ ಕುರಿತು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಪಾಲ್ಗೊಂಡಿದ್ದರು.

**
ಅಧಿಕಾರಿಗಳು ಬೆಳೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ರೈತರಿಗೆ ಯಾವುದೇ ರೀತಿಯಲ್ಲದಾದರೂ ಸರಿಯಾಗಿ ಪರಿಹಾರ ಕಲ್ಪಿಸಬೇಕು.
–ನೆನುಮನಹಳ್ಳಿ ಚಂದ್ರಶೇಖರ್, ಪ್ರಗತಿಪರ ರೈತ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು