ಬುಧವಾರ, ಡಿಸೆಂಬರ್ 1, 2021
21 °C

ಕೋಲಾರ: ದೇಶದ ಗಮನ ಸೆಳೆದ ವಿಜ್ಞಾನ ಪ್ರಾಜೆಕ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬೆಂಗಳೂರಿನ ಜಿಕೆವಿಕೆಯಲ್ಲಿ ಇತ್ತೀಚಿಗೆ ನಡೆದ ಅಂತರ ರಾಷ್ಟ್ರೀಯ ಮಟ್ಟದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಮಂಡಿಸಿದ ವಿಜ್ಞಾನ ಪ್ರಾಜೆಕ್ಟ್‌ ದೇಶದ ಗಮನ ಸೆಳೆದಿದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ’ ಎಂದು ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುಳಾ ಭೀಮರಾವ್ ಸಂತಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನವು ಗ್ರಾಮೀಣ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಘೋಷವಾಕ್ಯದಡಿ ಜರುಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ‘ಪ್ರಾಚೀನ ಬೀಜ ಸಂಸ್ಕರಣೆ ಹಾಗೂ ಕಸದಿಂದ ಸಂಪತ್ತು’ ಎಂಬ ವಿಷಯಗಳನ್ನು ಮಂಡಿಸಿದರು’ ಎಂದರು.

‘ದೇಶಾದ್ಯಂತ ೩೦೦ ಮಂದಿ ಪಾಲ್ಗೊಂಡಿದ್ದರು. ಆ ಪೈಕಿ ಜಿಲ್ಲೆಯಿಂದ ಮದನಹಳ್ಳಿ ಮೊರಾರ್ಜಿ ದೇಸಾಯಿ ವಸತಿಶಾಲೆಯ ಎನ್.ಚರಣ್ ಹಾಗೂ ಸುಂದರಪಾಳ್ಯದ ಶ್ರೀಶಾರದಾ ವಿದ್ಯಾ ಮಂದಿರದ ಎ.ಸಂತೋಷ್ ಭಾಗವಹಿಸಿ ವಿಷಯ ಮಂಡಿಸಿದ ವಿಜ್ಞಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಸಿ.ಕೆ.ಶಿವಣ್ಣ ಮಾತನಾಡಿ, ‘ಹಿಂದೆ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಬಳಸುತ್ತಿದ್ದರು. ವಿದ್ಯಾರ್ಥಿಗಳು ಪ್ರಾಚೀನ ಬೀಜ ಸಂಸ್ಕರಣೆ ಕುರಿತು ಹಾಗೂ ಕಸದಿಂದ ಸಂಪತ್ತು ಎಂಬ ವಿಷಯ ಮಂಡಿಸಿದ್ದಾರೆ ಎಂದು ಹೊಸ ಪದ್ದತಿ ಪರಿಚಯಿಸಿದ್ದಾರೆ’ ಎಂದು ವಿವರಿಸಿದರು.

‘ಮಣ್ಣಿನ ಮಡಕೆಯಲ್ಲಿ ಗಂಜಲ, ಸುಣ್ಣದಲ್ಲಿ ಅದ್ದಿದ ಬಟ್ಟೆಯನ್ನು ಮುಚ್ಚಿ ಸಂರಕ್ಷಿಸಲ್ಪಟ್ಟ ಬೀಜಗಳು ಕೆಡದಂತೆ ಸಂರಕ್ಷಿಸಬಹುದು. ಬೆಂಬಲ ಬೆಲೆ ದೊರೆಯದಿದ್ದಾಗ ತರಕಾರಿಗಳನ್ನು ಒಣಗಿಸಿಟ್ಟು ಪುಟ್ಟಚೂರುಗಳಾಗಿ ಸಂಗ್ರಹಿಸಿ ಅಗತ್ಯವಿದ್ದಾಗ ಪಶು ಆಹಾರವಾಗಿ ಬಳಸಬಹುದು ಎಂಬುದನ್ನು ಈ ಇಬ್ಬರೂ ವಿದ್ಯಾರ್ಥಿಗಳು ನಿರೂಪಿಸಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು