ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯ 6 ಗ್ರಾ.ಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಅಭಿವೃದ್ಧಿ ಕಾಮಗಾರಿ– ಆಡಳಿತಾತ್ಮಕ ಸುಧಾರಣೆಯ ಮಾನದಂಡ
Last Updated 8 ಅಕ್ಟೋಬರ್ 2020, 15:32 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಸರ್ಕಾರ 2019–20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟಿಸಿದ್ದು, ಜಿಲ್ಲೆಯ 6 ಗ್ರಾಮ ಪಂಚಾಯಿತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಬಂಗಾರಪೇಟೆ ತಾಲ್ಲೂಕಿನ ಹುಲಿಬೆಲೆ, ಕೋಲಾರ ತಾಲ್ಲೂಕಿನ ದೊಡ್ಡಹಸಾಳ, ಮಾಲೂರು ತಾಲ್ಲೂಕಿನ ಕೆ.ಜಿ ಹಳ್ಳಿ, ಮುಳಬಾಗಿಲು ತಾಲ್ಲೂಕಿನ ಉತ್ತನೂರು, ಶ್ರೀನಿವಾಸಪುರ ತಾಲ್ಲೂಕಿನ ಮಾಸ್ತೇನಹಳ್ಳಿ ಹಾಗೂ ಕೆಜಿಎಫ್‌ ತಾಲ್ಲೂಕಿನ ಶ್ರೀನಿವಾಸಸಂದ್ರ ಗ್ರಾ.ಪಂಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ಮತ್ತು ಆರ್ಥಿಕ ಸಾಧನೆ ಮಾಡಿದ ಗ್ರಾ.ಪಂಗಳನ್ನು ಗುರುತಿಸಿ ಪ್ರತಿ ವರ್ಷ ಈ ಪುರಸ್ಕಾರ ನೀಡುತ್ತಿದೆ. ಪಂಚಾಯಿತಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸುವುದು ಪುರಸ್ಕಾರದ ಮೂಲ ಉದ್ದೇಶ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಕ್ಟೋಬರ್‌ ಅಂತ್ಯದಲ್ಲಿ ಅಥವಾ ನವೆಂಬರ್‌ ಮೊದಲ ವಾರದಲ್ಲಿ ನಡೆಸುವ ಸಮಾರಂಭದಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ತಲಾ ₹ 5 ಲಕ್ಷ ಮೊತ್ತದ ಚೆಕ್, ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಗುತ್ತದೆ.

ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೈರ್ಮಲ್ಯ, ಚರಂಡಿ ಸ್ವಚ್ಛತೆ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ನಿರ್ವಹಣೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರಮುಖ ಮಾನದಂಡಗಳು. ಜತೆಗೆ ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತಾತ್ಮಕ ಸುಧಾರಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ, ವೈಯಕ್ತಿಕ ಶೌಚಾಲಯ ನಿರ್ಮಾಣ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅನುಷ್ಠಾನ, ರಸ್ತೆ ಮತ್ತು ಸೇತುವೆ ಸೌಲಭ್ಯ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯದ ಆಂಶ ಗಮನಿಸಲಾಗುತ್ತದೆ.

ಪ್ರಮುಖ ಮಾನದಂಡ: ವಸತಿರಹಿತರಿಗೆ ವಿವಿಧ ಯೋಜನೆಗಳಡಿ ವಸತಿ ಸೌಕರ್ಯ ಕಲ್ಪಿಸಿರುವುದು, ಗ್ರಾಮಗಳಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ, ಚರಂಡಿಗಳ ನಿರ್ಮಾಣ, ಶಾಸನಬದ್ಧ ಅನುದಾನಗಳ ಸಮರ್ಪಕ ಬಳಕೆ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಜಾರಿ ಸಹ ಪುರಸ್ಕಾರಕ್ಕೆ ಪ್ರಮುಖ ಮಾನದಂಡಗಳಾಗಿವೆ. ಜತೆಗೆ ಕಾಲಕಾಲಕ್ಕೆ ಗ್ರಾಮ ಸಭೆ ನಡೆಸುವುದು, ಹಣಕಾಸು ವ್ಯವಹಾರದ ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ಲೆಕ್ಕ ಪರಿಶೋಧನೆ, ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ, ತೆರಿಗೆ ವಸೂಲಿ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ರಚನೆಯಂತಹ ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ಇ–ಆಡಳಿತ ವ್ಯವಸ್ಥೆಯ ಅಳವಡಿಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಮೀಸಲಾದ ವಿಶೇಷ ಅನುದಾನದ ಸದ್ಬಳಕೆ, ಸಕಾಲ ಸೇವೆ, ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು, ಸರ್ಕಾರಿ ಆಸ್ತಿಗಳ ರಕ್ಷಣೆ, ಕೆರೆ ಮತ್ತು ಕಲ್ಯಾಣಿಗಳ ಸಮರ್ಪಕ ನಿರ್ವಹಣೆ ಸಹ ಪುರಸ್ಕಾರಕ್ಕೆ ಪ್ರಮುಖ ಅರ್ಹತೆಗಳು.

ಈ ಎಲ್ಲಾ ಅಂಶಗಳಿಗೆ ಪ್ರತ್ಯೇಕ ಅಂಕ ನಿಗದಿಪಡಿಸಿ, ಗ್ರಾಮ ಪಂಚಾಯಿತಿಗಳು ಇ–ಆಡಳಿತ ವ್ಯವಸ್ಥೆಯಲ್ಲಿ ದಾಖಲಿಸಿರುವ ಮಾಹಿತಿ ಮತ್ತು ಸಲ್ಲಿಸಿದ ದಾಖಲೆ ಪತ್ರಗಳಲ್ಲಿನ ವಿವರ ಸಮಗ್ರವಾಗಿ ಪರಿಶೀಲಿಸಿ ಅಂಕ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾ.ಪಂಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾ.ಪಂಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದರಿಂದ ಪಂಚಾಯಿತಿಗಳ ನಡುವೆ ಪೈಪೋಟಿ ಹೆಚ್ಚುತ್ತದೆ. ಇದರಿಂದ ಇತರೆ ಗ್ರಾ.ಪಂಗಳು ಅಭಿವೃದ್ಧಿ ಕಾರ್ಯಕ್ರಮಗಳ ಕಡೆ ಗಮನಹರಿಸಲು ಸಹಕಾರಿಯಾಗುತ್ತದೆ. ಈ ಪುರಸ್ಕಾರವು ಮತ್ತಷ್ಟು ಜನಪರ ಕಾರ್ಯ ಹಾಗೂ ಉತ್ತಮ ಆಡಳಿತ ನಿರ್ವಹಣೆಗೆ ಪ್ರೇರಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT