ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಚಿನ್ನದ ಗಣಿ ಪುನರಾರಂಭಕ್ಕೆ ಕೇಂದ್ರದ ಒಪ್ಪಿಗೆ: ಸಂಸದ ಮುನಿಸ್ವಾಮಿ

ವಿಚಾರ ಸಂಕಿರಣದಲ್ಲಿ ಸಂಸದ ಮುನಿಸ್ವಾಮಿ ಹೇಳಿಕೆ
Last Updated 7 ಮಾರ್ಚ್ 2020, 13:10 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪುನರಾರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಟಲ್ ಭೂಜಲ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಕೇಂದ್ರದ ಸೂಚನೆಯಂತೆ ಅಧಿಕಾರಿಗಳ ತಂಡವು ಕೆಜಿಎಫ್‌ನ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡವು ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಸಾಧ್ಯವಾದಷ್ಟು ಬೇಗನೆ ಗಣಿಗಾರಿಕೆ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಗತಗೊಳಿಸಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜಕಾರಣಿಗಳು ಶಿಫಾರಸು ಮಾಡಿದ ವ್ಯಕ್ತಿಗಳನ್ನು ಬಿಟ್ಟು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಕರ್ಯ ತಲುಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದೆ. ಕೋಲಾರ ಲೋಕಸಭಾ ಕ್ಷೇತ್ರದ ಎಲ್ಲಾ ತಾಲ್ಲೂಕುಗಳು ಈ ಯೋಜನೆ ವ್ಯಾಪ್ತಿಗೆ ಸೇರಿವೆ. ಈ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ರೈತರ ಸಹಕಾರವಿಲ್ಲದೆ ಯಾವುದೇ ಯೋಜನೆ ಜಾರಿ ಸಾಧ್ಯವಿಲ್ಲ. ರಾಜಕೀಯ ಮುಖಂಡರು ಶಿಫಾರಸ್ಸು ಮಾಡಿದವರಿಗೆ ಸೌಕರ್ಯ ಕಲ್ಪಿಸುವುದನ್ನು ಅಧಿಕಾರಿಗಳು ಬಿಡಬೇಕು. ರೈತ ವಿರೋಧಿಗಳು ಕೆ.ಸಿ ವ್ಯಾಲಿ ಯೋಜನೆ ವಿರೋಧಿಸಿ ಜಿಲ್ಲೆಗೆ ಅವಮಾನ ಎಸಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ರೈತರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಕೆರೆ, ಕಾಲುವೆ ಒತ್ತುವರಿಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಉತ್ತಮ ಪರಿಸರ ನಿರ್ಮಾಣಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕರ ಕಳವಳ: ‘ಜಿಲ್ಲೆಯಲ್ಲಿ ಸತತ ಬರಗಾಲ ಎದುರಾಗಿದ್ದು, ಮನುಷ್ಯನ ದುರಾಸೆಯ ಫಲವಾಗಿ ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಅರಣ್ಯ ಸಂಪತ್ತು ನಾಶವಾಗಿ ಮಳೆ ಪ್ರಮಾಣ ಕ್ಷೀಣಿಸಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಳವಳ ವ್ಯಕ್ತಪಡಿಸಿದರು.

‘ಈ ಹಿಂದೆ ಹಿರಿಯರು ಮುಂದಾಲೋಚನೆಯಿಂದ ಕೆರೆ, ರಾಜಕಾಲುವೆ ನಿರ್ಮಾಣ ಮಾಡಿದರು. ಆದರೆ, ಜನರು ದುರಾಸೆಯಿಂದ ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಒತ್ತುವರಿ ತೆರವುಗೊಳಿಸದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

‘ಜಿಲ್ಲೆಯ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಯರಗೋಳ್ ಯೋಜನೆ ಜಾರಿಗೊಳಿಸಲಾಯಿತು. ಆದರೆ, ಆಗಿನ ಶಾಸಕನಿಗೆ ಪೈಪ್‌ಲೈನ್ ಕಾಮಗಾರಿ ಮಾಡುವುದು ಅವಸರವಾಗಿತ್ತು. ಸಕಾಲಕ್ಕೆ ಡ್ಯಾಂ ನಿರ್ಮಿಸಿದ್ದರೆ ಈ ವೇಳೆಗಾಗಲೇ ನೀರು ಹರಿಯುತ್ತಿತ್ತು. ಆ ಮಾಜಿ ಶಾಸಕನಿಗೆ ಪೈಪ್‌ಲೈನ್‌ನಲ್ಲಿ ಹಣ ಮಾಡುವುದು ಮುಖ್ಯವಾಗಿತ್ತು’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಕಿಡಿಕಾರಿದರು.

ಶಾಸಕರಿಗೆ ತಿರುಗೇಟು: ‘ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸದ ಕಡೆ ಹೆಚ್ಚು ಗಮನ ಇರಬೇಕು. ಹಿಂದಿನ ಶಾಸಕರು ಕ್ಷೇತ್ರದಲ್ಲಿ ಮಾಡಿದ ಕೆಲಸ ಶಾಶ್ವತವಾಗಿ ಉಳಿದಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಶಾಸಕ ಶ್ರೀನಿವಾಸಗೌಡರ ಮಾತಿಗೆ ತಿರುಗೇಟು ನೀಡಿದರು.

‘ಜಿಲ್ಲೆಯಲ್ಲಿ ಪಕ್ಷ, ಜಾತಿ ಭೇದಭಾವ ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆಯಿದ್ದು, ಶಾಸಕರು ಹಾಗೂ ಸಂಸದರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರು ಮಾಡಿಸಬೇಕು’ ಎಂದು ಒತ್ತಾಯಿಸಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯ ಕೃಷ್ಣಪ್ಪ, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಬಿ.ಟಿ.ಕಾಂತರಾಜ್, ಸಣ್ಣ ನೀರಾವರಿ ಮತ್ತು ಅಂತರ್ಜಲ ವೃತ್ತದ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಎನ್.ನಾಗರಾಜ್, ಹಿರಿಯ ಭೂವಿಜ್ಞಾನಿ ಎ.ತಿಪ್ಪೇಸ್ವಾಮಿ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಪ್ರಗತಿಪರ ರೈತ ಅಶೋಕ್‌ ರಾಂಪುರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT