ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ: ರಂಗಸ್ವಾಮಿ ಒತ್ತಾಯ

Last Updated 15 ಸೆಪ್ಟೆಂಬರ್ 2021, 14:04 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡಬೇಕು. ಜತೆಗೆ ಬಜೆಟ್‌ನಲ್ಲಿ ಶೇ 25ರಷ್ಟು ಅನುದಾನ ಮೀಸಲಿಡಬೇಕು’ ಎಂದು ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ರಂಗಸ್ವಾಮಿ ಒತ್ತಾಯಿಸಿದರು.

ಇಲ್ಲಿ ಬುಧವಾರ ನಡೆದ ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳನ್ನು ಮೂರನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿವೆ. ನಮ್ಮ ಬಗ್ಗೆ ಸರ್ಕಾರಗಳಿಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಸಂಘಟನೆಯ ನಿರಂತರ ಹೋರಾಟದ ಫಲವಾಗಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ ಅನೇಕ ಸೌಲಭ್ಯ ಕಲ್ಪಿಸಿದೆ. ವ್ಯಾಪಾರಿಗಳು ಈ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಅಸೂಯೆ, ಜಾತೀಯತೆ ಬಿಟ್ಟು ನಾವೆಲ್ಲಾ ದುಡಿಯುವ ಜಾತಿ ಎಂಬ ಭಾವನೆ ಬೆಳೆಸಿಕೊಳ್ಳಿ. ಸಂಘಟಿತರಾಗಿ ಸಂಘಟನೆಯೊಂದಿಗೆ ಕೈಜೋಡಿಸಿ. ಬೀದಿ ಬದಿ ವ್ಯಾಪಾರಿಗಳಲ್ಲಿ ಯಾರಿಗೆ ಕಷ್ಟ ಬಂದರೂ ಒಗ್ಗಟ್ಟಾಗಿ ಪರಿಹರಿಸೋಣ. ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಅಧಿಕಾರಿಗಳು ಅನರ್ಹರಿಗೆ ಸವಲತ್ತು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು. ಜತೆಗೆ ನಿವೇಶನ, ಮನೆ, ಮಕ್ಕಳಿಗೆ ಉಚಿತ ಶಿಕ್ಷಣ, ಪ್ರಧಾನಮಂತ್ರಿ ಜೀವನ ಜ್ಯೋತಿ, ಸುರಕ್ಷಾ ಭೀಮಾ ಯೋಜನೆಗಳನ್ನು ಉಚಿತವಾಗಿ ಜಾರಿಗೊಳಿಸಬೇಕು. ನಿಗಮ ಮಂಡಳಿ ರಚನೆ ಮಾಡಬೇಕು. ಉಚಿತ ಬಸ್‌ ಪಾಸ್ ನೀಡಬೇಕು. ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಆಯೋಜಿಸಬೇಕು’ ಎಂದು ಕೋರಿದರು.

ಸಭೆ ನಡೆಸಿ: ‘ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆ ಪ್ರಬಲವಾಗಿ ಬೆಳೆಯಲು ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು’ ಎಂದು ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ದೊಡ್ಡಣ್ಣ ಹೇಳಿದರು.

ಒಕ್ಕೂಟದ ಪದಾಧಿಕಾರಿಗಳಾದ ಜಗದೀಶ್, ಪುಷ್ಪಾ, ಕೇಶವಮೂರ್ತಿ, ಅಸ್ಲಂ ಪಾಷಾ, ಇಸ್ಮಾಯಿಲ್, ಇಲಿಯಾಸ್ ಪಾಷಾ, ಸಲೀಂ ಪಾಷಾ, ದಾಮೋದರರಾವ್, ಅನ್ವರ್‌ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT