ಬುಧವಾರ, ಜನವರಿ 29, 2020
24 °C
ರೈತರ ಸಮಾವೇಶದಲ್ಲಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಹೇಳಿಕೆ

ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದ್ವಿತಳಿ ರೇಷ್ಮೆಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಅಭಿಪ್ರಾಯಪಟ್ಟರು.

ರೇಷ್ಮೆ ಇಲಾಖೆ ಹಾಗೂ ಕೇಂದ್ರ ರೇಷ್ಮೆ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಬೀಚಗೊಂಡನಹಳ್ಳಿಯಲ್ಲಿ ರೈತರ ಹಿಪ್ಪುನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶದಲ್ಲಿ ಮಾತನಾಡಿದರು.

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೈತರು ಬೇಡಿಕೆಗೆ ತಕ್ಕಂತೆ ದ್ವಿತಳಿ ರೇಷ್ಮೆಗೂಡು ಉತ್ಪಾದನೆ ಹೆಚ್ಚಿಸಿದರೆ ಚೀನಾ ರೇಷ್ಮೆ ಆಮದು ನಿಯಂತ್ರಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರ ವಿದೇಶಿ ರೇಷ್ಮೆ ಆಮದು ಶುಲ್ಕ ಹೆಚ್ಚಿಸುವ ಜತೆಗೆ ಗುಣಮಟ್ಟದ ರೇಷ್ಮೆ ಉತ್ಪಾದನೆಗೂ ಆದ್ಯತೆ ನೀಡಲಾಗಿದೆ. ಇದರಿಂದ ಬಟ್ಟೆ ನೇಯುವವರು ಸ್ವದೇಶಿ ನೂಲು ಕೊಳ್ಳಲು ಮುಂದಾಗಿದ್ದಾರೆ. ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ರೈತರು ರೇಷ್ಮೆ ಉತ್ಪಾದಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನ ಸೃಜಿಸಲಾಗಿದೆ. ಹಿಪ್ಪುನೇರಳೆ ಬೇಸಾಯ ಅಭಿವೃದ್ಧಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರೈತರು ನರೇಗಾದಡಿ ಹಿಪ್ಪುನೇರಳೆ ತೋಟದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲು ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಸೋಂಕು ನಿವಾರಣೆ: ‘ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳೆಯುವ ಜತೆಗೆ ಸೋಂಕು ನಿವಾರಣೆಗೆ ಆದ್ಯತೆ ನೀಡಬೇಕು. ರೋಗ ಸುಳಿಯದಂತೆ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ನಿಗದಿತ ರೀತಿಯಲ್ಲಿ ಉಷ್ಣಾಂಶ ಹಾಗೂ ತೇವಾಂಶ ಕಾಪಾಡಬೇಕು’ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮಾರಿಸನ್ ತಿಳಿಸಿದರು.

‘ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚುವುದರಿಂದ ಸುಣ್ಣಕಟ್ಟು ಹಾಗೂ ಶಿಲೀಂಧ್ರ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿಸಲು ಹುಳು ಸಾಕಾಣಿಕೆ ಕೊಠಡಿಯಲ್ಲಿ ಆಧುನಿಕ ಸಲಕರಣೆ ಬಳಸಬೇಕು. ಸುಣ್ಣಕಟ್ಟು ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದರು.

ಮಣ್ಣು ಪರೀಕ್ಷೆ: ‘ರೇಷ್ಮೆ ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನ ಕುರಿತು ಚನ್ನಪಟ್ಟಣದಲ್ಲಿ ತರಬೇತಿ ನೀಡುತ್ತಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು. ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶಗಳ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಚನ್ನಪಟ್ಟಣ ರೇಷ್ಮೆ ಕೃಷಿ ತರಬೇತಿ ಶಾಲೆ ಸಹಾಯಕ ನಿರ್ದೇಶಕ ರಮೇಶ್ ಅಭಿಪ್ರಾಯಪಟ್ಟರು.

‘ವಿದೇಶಿ ಮಾರುಕಟ್ಟೆಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ರೈತರು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು. ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಬಾಧೆ ತಪ್ಪಿಸಬಹುದು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ವಿವರಿಸಿದರು.

ಕೃಷಿ ವಿಜ್ಞಾನಿ ಶಶಿಧರ್, ರೇಷ್ಮೆ ವಿಸ್ತರಣಾಧಿಕಾರಿ ಎಸ್.ಕೆ.ಶ್ರೀಧರ್, ರೇಷ್ಮೆ ಬೆಳೆಗಾರರಾದ ಸಿ.ಎಲ್.ನಾಗರಾಜ್, ಮುನಿಯಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು