ಕೋಲಾರ: ‘ಹಿಂದಿಯು ಭಾರತದ ರಾಷ್ಟ್ರ ಭಾಷೆಯಲ್ಲ. ಸಂವಿಧಾನವು ಹಿಂದಿಗೆ ಆ ಪಟ್ಟ ಕಟ್ಟಿಲ್ಲ. ಹಿಂದಿಯ ಪಾರಮ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ಗುಡುಗಿದರು.
ಇಲ್ಲಿ ಗುರುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ‘ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿಯಾದ 22 ಭಾಷೆಗಳೂ ಈ ದೇಶದ ಭಾಷೆಗಳೇ. ಹಿಂದಿಯು ಕೇಂದ್ರಡಾಳಿತ ಭಾಷೆ. ಕನ್ನಡವು ಕರ್ನಾಟಕದ ಆಡಳಿತ ಭಾಷೆ’ ಎಂದು ಪ್ರತಿಪಾದಿಸಿದರು.
‘ಸಂವಿಧಾನದ 343ನೇ ಅನುಚ್ಛೇದದಿಂದ 351ನೇ ಅನುಚ್ಛೇದದವರೆಗೆ ತಿದ್ದುಪಡಿ ಮಾಡಿ ಹಿಂದಿ ಭಾಷೆಯ ಪಾರಮ್ಯಕ್ಕೆ ಕಡಿವಾಣ ಹಾಕಬೇಕು. ಆಯಾ ರಾಜ್ಯದ ಭಾಷೆಯನ್ನು ಪ್ರೌಢ ಶಾಲಾ ಹಂತದವರೆಗೆ ಶಿಕ್ಷಣ ಮಾಧ್ಯಮವಾಗಿಸದಿದ್ದರೆ ಗಂಡಾಂತರ ತಪ್ಪಿದ್ದಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ಹೊಸ ಶಿಕ್ಷಣ ನೀತಿ–2020 ಸಹ ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ಬಗೆಗೆ ಜಾಣ ಮರೆವು ಪ್ರದರ್ಶಿಸಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಕಂಟಕವಾಗಿರುವ ತ್ರಿಭಾಷಾ ಸೂತ್ರ ರದ್ದುಪಡಿಸಿ ಕನ್ನಡ ಹಾಗೂ ಇಂಗ್ಲಿಷ್ ಮಾತ್ರ ಇರುವ ದ್ವಿಭಾಷಾ ಸೂತ್ರ ಜಾರಿಗೊಳಿಸುವ ಧೈರ್ಯ ತೋರಬೇಕು’ ಎಂದು ಆಗ್ರಹಿಸಿದರು.
‘ಉತ್ತರ ಭಾರತದ ರಾಜ್ಯಗಳಿಂದ ಉದ್ಯೋಗ ಅರಸಿ ರಾಜ್ಯಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಉತ್ತರಕ್ಕೆ ತ್ರಿಭಾಷಾ ಸೂತ್ರ, ದಕ್ಷಿಣಕ್ಕೆ ದ್ವಿಭಾಷಾ ಸೂತ್ರ ಜಾರಿಯಾಗುವುದು ಸೂಕ್ತ. ಕನ್ನಡಿಗರಿಗೆ ಹಿಂದಿ ಭಾಷೆ ಕಲಿಯುವ ಅಗತ್ಯವಿಲ್ಲ. ಸಾಮ್ರಾಜ್ಯಶಾಹಿ ಭಾಷೆಯಾದ ಹಿಂದಿಯು ಕನ್ನಡಕ್ಕೆ ಕಂಟಕಪ್ರಾಯ. ಹಿಂದಿಯು ನಮ್ಮ ಪಠ್ಯಕ್ರಮದಿಂದ ತೊಲಗಲಿ’ ಎಂದು ಕಿಡಿಕಾರಿದರು.
ಲಿಪಿಗಳ ರಾಣಿ: ‘ವಿಶ್ವದ ಲಿಪಿಗಳ ರಾಣಿಯಾಗಿರುವ ಕನ್ನಡವು ಸರ್ವಶಕ್ತ ಸ್ವತಂತ್ರ ಭಾಷೆ. ಜಗತ್ತಿನ 12 ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡ ಸಹ ಒಂದು. ರಾಜ್ಯದ ಜನಸಂಖ್ಯೆ 7.05 ಕೋಟಿಗೆ ಏರಿದೆ. ಮಾತೃಭಾಷಿಕರ ಸಂಖ್ಯೆಯಲ್ಲಿ ಕನ್ನಡವು ಜಗತ್ತಿನಲ್ಲಿ 30ನೇ ಸ್ಥಾನದಲ್ಲಿದೆ’ ಎಂದು ವಿವರಿಸಿದರು.
‘ಜಗತ್ತಿನ 214 ದೇಶಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಗಿಂತ ಕಡಿಮೆಯಿದೆ. ರಾಜ್ಯದ ವಿಸ್ತೀರ್ಣ 1.91 ಲಕ್ಷ ಚದರ ಕಿ.ಮೀ. ಜಗತ್ತಿನ 144 ದೇಶಗಳ ವಿಸ್ತೀರ್ಣ ಇದಕ್ಕಿಂತ ಕಡಿಮೆ. ತನ್ನ ಒಡಲಲ್ಲಿ ಕಾಗೆ ಬಂಗಾರದಿಂದ ಹಿಡಿದು ಬಂಗಾರದವರೆಗೆ ಹೊಂದಿರುವ ಸಮೃದ್ಧ ನಾಡು ಕರ್ನಾಟಕ. ಪರಿಸರ ಮತ್ತು ಪರಿಸರದ ಭಾಷೆಯಾದ ಕನ್ನಡವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಸುವರ್ಣ ಸಂಭ್ರಮ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 50 ವರ್ಷ ತುಂಬಿದೆ. ಪರಿಷತ್ತು ಸಾಲು ಸಾಲು ಸಾರ್ಥಕ ಕಾರ್ಯಕ್ರಮಗಳ ಮೂಲಕ ಸುವರ್ಣ ಸಂಭ್ರಮ ಆಚರಿಸುತ್ತಿದೆ. 106 ವರ್ಷಗಳ ಇತಿಹಾಸವಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆ. ಕನ್ನಡ, ಸಾಹಿತ್ಯ ಮತ್ತು ಜನತೆಯು ಹದವರಿತು ಪರಿಷತ್ತಿನಲ್ಲಿ ಮಿಳಿತಗೊಂಡಿವೆ. ಬೇರೆಡೆ ಇವು ಮೂರನ್ನೂ ಒಟ್ಟಾಗಿ ಕಾಣಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.