ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನ ಇಬ್ರಾಹಿಂ ದೊಡ್ಡ ಬಫೂನ್‌: ಮುನಿಸ್ವಾಮಿ ವ್ಯಂಗ್ಯ

ರಾಜಕೀಯ ಬದ್ಧತೆಯಿಲ್ಲ: ಸಂಸದ ಮುನಿಸ್ವಾಮಿ ವ್ಯಂಗ್ಯ
Last Updated 21 ಮೇ 2022, 12:47 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ದೊಡ್ಡ ಬಫೂನ್‌ (ವಿದೂಷಕ). ಅವರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೆ, ಯಾರನ್ನು ಹೊಗಳುತ್ತಾರೆ, ಯಾರನ್ನು ತೆಗಳುತ್ತಾರೆ ಎಂಬುದು ಗೊತ್ತಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ವ್ಯಂಗ್ಯವಾಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕೀಯವಾಗಿ ಹತಾಶರಾಗಿರುವ ಇಬ್ರಾಹಿಂ ಇಲ್ಲಿ ಸಲ್ಲದವನು ಎಲ್ಲಿಯೂ ಸಲ್ಲನಯ್ಯ ಎಂದು ವಚನಗಳನ್ನು ಹೇಳಿಕೊಳ್ಳುತ್ತಾರೆ. ಆದರೆ, ಅವರೇ ಅದರ ವಿರುದ್ಧ ಕೆಲಸ ಮಾಡುತ್ತಾರೆ. ಅವರಿಗೆ ರಾಜಕೀಯ ಬದ್ಧತೆಯಿಲ್ಲ’ ಎಂದು ಟೀಕಿಸಿದರು.

‘ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಿಲ್ಲೆಯ ಜನರ ಆಶಯ ಈಡೇರಿಸಿದೆ. ಇಬ್ರಾಹಿಂ ಅವರು ಜಿಲ್ಲೆಗೆ ಬಂದು ನೀರಿನ ವಿಚಾರದಲ್ಲಿ ಜಲಧಾರೆ ಹರಿಸುವ ಅವಶ್ಯಕತೆಯಿಲ್ಲ. ಇಲ್ಲಿ ಬಂದು ಸುಮ್ಮನೆ ಮುಸ್ಲಿಮರ ಓಲೈಕೆಗೆ ಮಾತನಾಡಿದರೆ ಪ್ರಯೋಜನವಿಲ್ಲ. ಮುಸ್ಲಿಂ ಮತದಾರರು ನಮ್ಮ ಜತೆಗೂ ಇದ್ದಾರೆ. ನಾನು ಕೋಲಾರಕ್ಕೆ ಬಂದು ಬೆಂಕಿ ಹಚ್ಚಿಲ್ಲ, ಬದಲಿಗೆ ಬೆಂಕಿಯಂತಿದ್ದ ಕೋಲಾರವನ್ನು ತಣ್ಣಗೆ ಮಾಡಿದ್ದೇವೆ. ಆದರೆ, ಇಬ್ರಾಹಿಂ ಬೆಂಕಿ ಇಡುವುದಕ್ಕೆ ಕೋಲಾರಕ್ಕೆ ಬಂದಿದ್ದಾರೆ’ ಎಂದು ಗುಡುಗಿದರು.

‘ಇಬ್ರಾಹಿಂ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದವರು. ಮೇಲಾಗಿ ಎಲ್ಲವನ್ನೂ ತಿಳಿದಿರುವವರು. ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಸಾಲವನ್ನು ಬಿಜೆಪಿ ಸರ್ಕಾರ ತೀರಿಸುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಎಷ್ಟು ಲಕ್ಷ ಕೋಟಿ ಸಾಲವಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಉತ್ತಮ ಆಡಳಿತವಿದ್ದು, ಎಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ವಿಪಕ್ಷದವರು ತೋರಿಸಲಿ’ ಎಂದು ಸವಾಲು ಹಾಕಿದರು.

ಮಸೀದಿ ತೆರವು: ‘ದೇಶ ದ್ರೋಹಿಗಳು, ದೇಶ–ಧರ್ಮ-ದೇವಾಲಯದ ವಿರೋಧಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಕ್ಲಾಕ್‌ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದೇವಾಲಯಗಳನ್ನು ಕೆಡವಿ ಅಕ್ರಮವಾಗಿ ಮಸೀದಿಗಳನ್ನು ಕಟ್ಟಿರುವುದನ್ನು ಕಾನೂನಾತ್ಮಕವಾಗಿ ತೆರವುಗೊಳಿಸುತ್ತೇವೆ’ ಎಂದು ತಿಳಿಸಿದರು.

‘ಮುಸ್ಲಿಮರಲ್ಲೂ ಸಾಕಷ್ಟು ಮಂದಿ ದೇಶ ಪ್ರೇಮಿಗಳಿದ್ದಾರೆ. ಆದರೆ, ಎಸ್‍ಡಿಪಿಐ ಹಾಗೂ ಪಿಎಫ್‍ಐನವರು ಔರಂಗಜೇಬನ ಕುಟುಂಬಸ್ಥರಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ವಾರಣಾಸಿಯಲ್ಲಿ ದೇವಸ್ಥಾನದ ಮೇಲೆ ಮಸೀದಿ ಕಟ್ಟಿದವರು ಧರ್ಮ ವಿರೋಧಿಗಳು ಎಂಬುದು ಅರ್ಥವಾಗುತ್ತಿದೆ. ಕೃಷ್ಣನ ಜನ್ಮ ಸ್ಥಳದಲ್ಲೂ ಮಸೀದಿ ಕಟ್ಟಲಾಗಿದೆ. ಶಿವನ ಮಂದಿರದ ಮೇಲೆ ತಾಜ್‍ಮಹಲ್ ಕಟ್ಟಿರುವುದು ಸಾಬೀತಾಗಿದ್ದು, ಹಿಂದೂ ದೇವಾಲಯಗಳಿಗೆ ತೊಂದರೆ ಮಾಡಿದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ' ಎಂದರು.

ಮಿಷನ್‌ 150: ‘ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಮಿಷನ್ 150ಯನ್ನು ಕೋಲಾರ ಜಿಲ್ಲೆಯಿಂದಲೇ ಆರಂಭಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಹಲವು ಮಾಜಿ ಶಾಸಕರು, ಮುಖಂಡರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮುಂದೆಯೂ ಆಗುತ್ತಾರೆ’ ಎಂದು ಹೇಳಿದರು.

‘ಮಾಜಿ ಶಾಸಕರಾದ ವರ್ತೂರು ಪ್ರಕಾಶ್‌ ಹಾಗೂ ಮಂಜುನಾಥಗೌಡರ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ. ಇನ್ನೂ ಅನೇಕ ಮಾಜಿ ಶಾಸಕರು ಪಕ್ಷಕ್ಕೆ ಬರುತ್ತಾರೆ. ಬಿಜೆಪಿಯ ತತ್ವ ಸಿದ್ಧಾಂತ ಒಪ್ಪಿಕೊಂಡು ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ’ ಎಂದು ಮಾರ್ಮಿಕವಾಗಿ ನುಡಿದರು.

‘ರಾಜ್ಯದಲ್ಲಿ 2ನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಪೂರಕ ವಾತಾವರಣವಿದೆ. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 5 ಸ್ಥಾನ ಗೆಲ್ಲಲು ಪಣ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT