ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯಾಂ ಭರ್ತಿಯಾದರೆ ಯರಗೋಳ್‌ ಲೋಕಾರ್ಪಣೆ

ನಿರೀಕ್ಷೆಯಂತೆ ಮಳೆಯಾಗಿಲ್ಲ: ಪರಿಶೀಲನೆ ಬಳಿಕ ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 5 ಜನವರಿ 2021, 14:08 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗದ ಕಾರಣ ಯರಗೋಳ್‌ ಡ್ಯಾಂ ಭರ್ತಿಯಾಗಿಲ್ಲ. ಹೆಚ್ಚಿನ ಮಳೆಯಾಗಿ ಡ್ಯಾಂ ಭರ್ತಿಯಾದ ನಂತರ ಯರಗೋಳ್‌ ಯೋಜನೆ ಲೋಕಾರ್ಪಣೆ ಮಾಡುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಯರಗೋಳ್‌ ಡ್ಯಾಂ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಯರಗೋಳ್‌ ಡ್ಯಾಂ ಭರ್ತಿಯಾಗಿದ್ದರೆ ಈ ತಿಂಗಳಲ್ಲೇ ಮುಖ್ಯಮಂತ್ರಿಗಳಿಂದ ಯೋಜನೆ ಲೋಕಾರ್ಪಣೆ ಮಾಡಿಸಲು ಉದ್ದೇಶಿಸಲಾಗಿತ್ತು. ಆದರೆ, ಡ್ಯಾಂ ಭರ್ತಿಯಾಗದ ಕಾರಣ ಸದ್ಯಕ್ಕೆ ಯೋಜನೆ ಉದ್ಘಾಟನೆ ಅಸಾಧ್ಯ’ ಎಂದರು.

‘ಯರಗೋಳ್‌ ಭಾಗದಲ್ಲಿ ನೀರು ಹರಿಯುವ ಮಾಹಿತಿಯಿತ್ತು. ಈ ಯೋಜನೆಯಿಂದ ಜಿಲ್ಲೆಗೆ ಕುಡಿಯುವ ನೀರು ಲಭ್ಯವಾಗುತ್ತದೆ ಎಂದು ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ತಿಳಿಸಿದೆ. 2006ರಲ್ಲಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2008ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ ₹ 79.93 ಕೋಟಿಯಿತ್ತು. ಬಳಿಕ ಪರಿಷ್ಕೃತ ಅಂದಾಜು ಮೊತ್ತ ₹ 128 ಕೋಟಿಗೆ ಏರಿಕೆಯಾಯಿತು’ ಎಂದು ವಿವರಿಸಿದರು.

‘ಯರಗೋಳ್‌ ಭಾಗದ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತದೆ. ಈ ಭಾಗದಲ್ಲಿ ಡ್ಯಾಂ ನಿರ್ಮಿಸಿರುವುದರಿಂದ ನೀರು ಸಂಗ್ರಹಣೆಗೆ ಅನುಕೂಲವಾಗಿದೆ. ಡ್ಯಾಂ ಭರ್ತಿಯಾದರೆ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬಹುದು’ ಎಂದು ಮಾಹಿತಿ ನೀಡಿದರು.

‘ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಪಂಪ್‌ ಮತ್ತು ಮೋಟರ್ ಅಳವಡಿಕೆ ಮಾತ್ರ ಬಾಕಿಯಿದೆ. ಈ ಕೆಲಸವು ಸದ್ಯದಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಂತರ ಚುರುಕಾಗಿ ಕೆಲಸ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯಲ್ಲಿ ಮಾರ್ಕೊಂಡಯ್ಯ ಕೆರೆಗೆ ನೀರು ಬರುತ್ತದೆ. ಆ ಕೆರೆ ತುಂಬಿದ ನಂತರ ಯರಗೋಳ್‌ ಡ್ಯಾಂಗೆ ನೀರು ಬರುತ್ತದೆ’ ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿ: ‘ಯರಗೋಳ್‌ ಅಣೆಕಟ್ಟು ಬಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತದೆ. ವಸತಿಗೃಹಗಳ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ದೊರೆತ ನಂತರ ಕ್ರಮ ಕೈಗೊಳ್ಳಲಾಗುವುದು. ಯರಗೋಳ್ ಡ್ಯಾಂ 500 ಎಂಸಿಎಫ್‌ಟಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, 375 ಎಕರೆಯಷ್ಟು ಭೂಮಿ ಮುಳುಗಡೆಯಾಗುತ್ತದೆ’ ಎಂದು ತಿಳಿಸಿದರು.

‘ಯರಗೋಳ್‌ ಕಾಮಗಾರಿ ತ್ವರಿತವಾಗಿ ನಡೆಸಿದ್ದರೆ ಇಷ್ಟು ಹೊತ್ತಿಗೆ ಕೋಲಾರಕ್ಕೆ ನೀರು ಬರುತ್ತಿತ್ತು. ಆದರೆ, ಕೋಲಾರ ಕ್ಷೇತ್ರದಲ್ಲಿ ಕಳೆದ 10 ವರ್ಷದಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾದ ಮಹಾನುಭಾವ ಜನಪರವಾಗಿ ಕೆಲಸ ಮಾಡಲಿಲ್ಲ. ಯರಗೋಳ್‌ ಯೋಜನೆ ಪೈಪ್‌ಲೈನ್‌ ಕಾಮಗಾರಿಯಲ್ಲಿ ಹಣ ದೋಚಿದ್ದೆ ಅವರ ದೊಡ್ಡ ಸಾಧನೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ವಾಗ್ದಾಳಿ ನಡೆಸಿದರು.

ನನೆಗುದಿಗೆ ಬಿದ್ದಿತ್ತು: ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಯರಗೋಳ್ ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದರು. ಬಹಳ ವರ್ಷಗಳ ಕಾಲ ಯೋಜನೆ ನನೆಗುದಿಗೆ ಬಿದ್ದಿತ್ತು. ಜನಪ್ರತಿನಿಧಿಗಳ ಒತ್ತಡದಿಂದ ಯೋಜನೆ ಅಂತಿಮ ಹಂತಕ್ಕೆ ಬಂದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

‘ಜಿಲ್ಲೆಯ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳಿಗೆ ನೀರು ಕೊಡಲು 3 ಕಡೆ ಬೃಹತ್ ಟ್ಯಾಂಕ್‌ ನಿರ್ಮಿಸಬೇಕಿದೆ. ಯೋಜನೆಗೆ ಸಂಬಂಧಿಸಿದಂತೆ ಹಲವೆಡೆ ಸಣ್ಣಪುಟ್ಟ ಕೆಲಸ ನಡೆಯುತ್ತಿವೆ’ ಎಂದರು.

ನಗರಸಭೆ ಸದಸ್ಯ ರಾಕೇಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT