ಶುಕ್ರವಾರ, ಜೂನ್ 18, 2021
28 °C
ಕಾರ್ಯಪಡೆ ಕಟ್ಟೆಚ್ಚರ ವಹಿಸಬೇಕು: ಜಿ.ಪಂ ಸಿಇಒ ರವಿಕುಮಾರ್‌ ಸೂಚನೆ

ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗ್ರಾಮೀಣ ಭಾಗದಲ್ಲೂ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿದ್ದು, ಜನರು ಸೋಂಕು ತಡೆಗೆ ಜಾಗೃತರಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್‌ ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳ ಜತೆ ಇಲ್ಲಿ ಬುಧವಾರ ಆನ್‌ಲೈನ್‌ನಲ್ಲಿ ಸಭೆ ನಡೆಸಿದ ಅವರು, ‘ಹಳ್ಳಿಗಳಲ್ಲಿ ಜನರು ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆ ಗ್ರಾ.ಪಂ ಕಾರ್ಯಪಡೆ ಕಟ್ಟೆಚ್ಚರ ವಹಿಸಬೇಕು. ಜತೆಗೆ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಆಟೊ ಮೂಲಕ ಪ್ರಚಾರ ನಡೆಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನ ಆಗುತ್ತಿಲ್ಲ. ಹಳ್ಳಿಗಳಲ್ಲಿ ಜನರ ಮನೆ ಬಾಗಿಲಿಗೆ ಜಾಗೃತಿ ತಲುಪಿಸುವ ಮೂಲಕ ಕೊರೊನಾ ಸೋಂಕಿಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

‘ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಸೋಂಕು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೋವಿಡ್ 2ನೇ ಅಲೆ ಆರ್ಭಟ ಜೋರಾಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ನಗರ ಪ್ರದೇಶದಿಂದ ಹಳ್ಳಿಗಳಿಗೆ ಹಿಂದಿರುಗಿ ಬಂದಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಸೋಂಕು ವ್ಯಾಪಕವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತ್ಯಾಜ್ಯ ಘಟಕ: ‘ಜಿಲ್ಲೆಯ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಜೂನ್‌ 15ರೊಳಗೆ ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯಾರಂಭ ಮಾಡಬೇಕು. ಕಸದ ಬುಟ್ಟಿ ಖರೀದಿ ಮಾಡದ ಪಿಡಿಒಗಳು ಒಂದು ವಾರದೊಳಗೆ ಕೊಂಡುಕೊಳ್ಳಬೇಕು. ಇದಕ್ಕೆ ಲಾಕ್‌ಡೌನ್‌ನ ನೆಪ ಹೇಳಬಾರದು’ ಎಂದು ಖಡಕ್‌ ಸೂಚನೆ ನೀಡಿದರು.

‘ಗ್ರಾ.ಪಂ ಮಟ್ಟದಲ್ಲಿ ಪ್ರತಿ ವಾರ ಕಾರ್ಯಪಡೆ ಸಮಿತಿ ಸಭೆ ನಡೆಸುವ ಮೂಲಕ ಕೋವಿಡ್ ಸ್ಥಿತಿಗತಿ ಪರಿಶೀಲನೆ ನಡೆಸಬೇಕು. ಹಳ್ಳಿಗಳಲ್ಲಿ ಕೋವಿಡ್‌ 2ನೇ ಅಲೆ ಹೆಚ್ಚಿನ ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್) ಸೋಂಕಿನ ಕಾಟ ಹೆಚ್ಚಾಗಿದೆ. ಕೋವಿಡ್‌ ಮತ್ತು ಕಪ್ಪು ಶಿಲೀಂಧ್ರ ಸೋಂಕಿನಿಂದ ಜನರು ಆತಂಕಗೊಂಡಿದ್ದಾರೆ’ ಎಂದು ವಿವರಿಸಿದರು.

‘ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಮನೋಭಾವ ಬಿಟ್ಟು ಗ್ರಾ.ಪಂ ಸದಸ್ಯರು ಕೋವಿಡ್‌ ತಡೆಗೆ ಕೈ ಜೋಡಿಸಬೇಕು. ಮೊದಲು ಜನಪ್ರತಿನಿಧಿಗಳು ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲಿಸಿ ಸುರಕ್ಷಿತ ಜೀವನ ನಡೆಸುವ ಮೂಲಕ ಜನರಿಗೆ ಮಾದರಿ ಆಗಬೇಕು’ ಎಂದು ಸಲಹೆ ನೀಡಿದರು.

‘ಅಗತ್ಯವಿದ್ದಲ್ಲಿ ಗ್ರಾ.ಪಂ ಮಟ್ಟದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸುವ ಮೂಲಕ ಸೋಂಕಿತರು ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ಬಾರದಂತೆ ಕ್ರಮ ಕೈಗೊಳ್ಳಿ. ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆ ಒದಗಿಸಿ’ ಎಂದು ತಿಳಿಸಿದರು.

ಲಸಿಕಾ ಶಿಬಿರ: ‘ಗ್ರಾ.ಪಂಗಳಿಂದ ಹಳ್ಳಿ ಮಟ್ಟದಲ್ಲಿ ಕೋವಿಡ್‌ ಲಸಿಕಾ ಶಿಬಿರ ಆಯೋಜಿಸಬೇಕು. ಕೋವಿಡ್‌ 3ನೇ ಅಲೆಯೊಳಗೆ ಶೇ 100ರಷ್ಟು ಲಸಿಕೆ ನೀಡಿಕೆ ಗುರಿ ಸಾಧನೆ ಮಾಡಬೇಕು. ಪಂಚಾಯಿತಿ ಮಟ್ಟದಲ್ಲಿ ಸೋಂಕಿತರ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕಿದ್ದು, ತಪ್ಪಿದರೆ ಸಂಬಂಧಿಸಿದ ಪಂಚಾಯಿತಿಯನ್ನು ಹೊಣೆ ಮಾಡಲಾಗುತ್ತದೆ. ಸೋಂಕಿತರನ್ನು ಸಮಾಜದಿಂದ ದೂರ ತಳ್ಳುವ ಕೆಲಸ ಆಗಬಾರದು’ ಎಂದು ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹೇಳಿದರು.

‘ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರಿಗೂ ಸೋಂಕು ಹರಡುತ್ತಿದೆ. ಹೀಗಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವವರು ಎಚ್ಚರ ವಹಿಸಬೇಕು. ಸಾಧ್ಯವಾದರೆ ಕುಟುಂಬದ 5 ಜನ ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವಂತೆ ಎಚ್ಚರ ವಹಿಸಬೇಕು’ ಎಂದು ಕೋಲಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯ ದೀಪಿಕಾ, ವಿವಿಧ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳು ಭಾಗವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.