ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಮಲ್‌ ಕಾರ್ಮಿಕರ ಸಾವು ಹೆಚ್ಚಳ: ಆತಂಕ

Last Updated 15 ಮೇ 2021, 4:00 IST
ಅಕ್ಷರ ಗಾತ್ರ

ಕೆಜಿಎಫ್‌: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ಕಾರ್ಖಾನೆಯಲ್ಲಿ ಕೋವಿಡ್‌ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆತಂಕದ ಪರಿಸ್ಥಿತಿ ಉಂಟಾಗಿದೆ.

ಬೆಮಲ್‌ನ ನಾಲ್ಕು ಘಟಕಗಳಲ್ಲಿ ಇದುವರೆವಿಗೂ ಒಟ್ಟು 43 ಮಂದಿ ಮೃತಪಟ್ಟಿದ್ದು, ಅವುಗಳ ಪೈಕಿ ಹೆಚ್ಚಿನವು ಕೆಜಿಎಫ್ ಬೆಮಲ್ ಘಟಕದಲ್ಲಿ ಸಂಭವಿಸಿದೆ. ನಗರದ ಬೆಮಲ್ ಘಟಕದಲ್ಲಿ 22 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಬೆಮಲ್‌ ಕಾರ್ಮಿಕರ ಸಾವು ಕುಟುಂಬದ ವರ್ಗದಲ್ಲಿ ಆತಂಕವನ್ನು ಮೂಡಿಸಿದೆ. ಬೆಮಲ್‌ನಲ್ಲಿ ಕೆಲಸ ಮಾಡುವವರಿಗೆ ಸುರಕ್ಷತೆ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೆಮಲ್‌ನಲ್ಲಿ 1,600 ಕಾರ್ಮಿಕರಿದ್ದು, ಅರ್ಧದಷ್ಟು ಕಾರ್ಮಿಕರು ಮಾತ್ರ ಪಾಳಿಯದಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಕೆಲಸದ ಅವಧಿಯನ್ನು ಸಹ ಆರು ಗಂಟೆಗೆ ಇಳಿಸಲಾಗಿದೆ. ಎಲ್ಲೆಡೆ ಸಾರ್ವಜನಿಕ ಅಂತರವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಆದರೂ ಸೋಂಕು ಹರಡುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಕೋವಿಡ್‌ನಿಂದಾಗಿ ಕಾರ್ಮಿಕರ ಸುರಕ್ಷತೆ ಬಗ್ಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಕ್ಯಾಂಟೀನ್‌ನಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ ಎಂಬ ದೃಷ್ಟಿಯಿಂದ ಕ್ಯಾಂಟೀನ್‌ ಸೇವೆ ರದ್ದುಗೊಳಿಸಲಾಗಿದೆ. 45 ವರ್ಷ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೂ ಲಸಿಕೆ ಹಾಕಲಾಗಿದೆ. ಕೋವಿಡ್ ಕಂಡು ಬಂದ ಕಾರ್ಮಿಕರಿಗೆ ಐಸೋಲೇಷನ್‌ಗೆ ಬೆಮಲ್‌ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಚಿಕಿತ್ಸೆ ಬೇಕಾದರೆಕೋವಿಡ್‌ ಆಸ್ಪತ್ರೆ ಇಲ್ಲವೇ ಬೆಮಲ್‌ ಗುರುತಿಸಲ್ಪಟ್ಟ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ ಎಂದು ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಹೇಳುತ್ತಾರೆ.

‘ಬೆಮಲ್ ಕಾರ್ಖಾನೆಗೆ ಸಂಬಂಧಿಸಿದಂತೆ ಬೆಮಲ್‌ ಮೆಡಿಕಲ್ ಸೆಂಟರ್ ಇದೆ. 28 ಹಾಸಿಗೆಯುಳ್ಳ ಆಸ್ಪತ್ರೆ ಇದಾಗಿದ್ದು, ಸ್ಟೇಜ್ ಎರಡರವರೆವಿಗೂ ಚಿಕಿತ್ಸೆ ನೀಡಲಾಗುತ್ತದೆ. ನಂತರ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡುತ್ತೇವೆ. ಹೆಚ್ಚುವರಿ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ’ಎಂದು ಮೆಡಿಕಲ್ ಸೆಂಟರ್‌ನ ಆರ್‌ಎಂಇ ಡಾ. ಸಚ್ಚಿದಾನಂದನ್‌ ಹೇಳುತ್ತಾರೆ.

‘ಬೆಮಲ್‌ ಮೆಡಿಕಲ್ ಸೆಂಟರ್‌ ನಲ್ಲಿ ಉತ್ತಮ ಚಿಕಿತ್ಸೆಗೆ ಹೆಸರಾಗಿದ್ದ ಆಸ್ಪತ್ರೆಯಾಗಿತ್ತು. ಹೆಸರಾಂತ ವೈದ್ಯರು ಕೆಲಸ ಮಾಡುತ್ತಿದ್ದರು. ಕ್ಲಿಷ್ಟ ಆರೋಗ್ಯ ಸಮಸ್ಯೆಗಳನ್ನು ಕೂಡ ಬಗೆಹರಿಸಲಾಗುತ್ತಿತ್ತು. ಆದರೆ ಬೆಮಲ್‌ನಲ್ಲಿ ಆರ್ಥಿಕ ಹಿಂಜರಿತ ಮತ್ತು ಆರೋಗ್ಯ ಸೇವೆ ಮೇಲೆ ವಿನಿಯೋಗ ಕಡಿಮೆ ಮಾಡುತ್ತಿರುವುದರಿಂದ ಹಲವಾರು ವಿಭಾಗಗಳಲ್ಲಿ ವೈದ್ಯರೇ ಇಲ್ಲ. ಈಗ ಕೆಲವು ವೈದ್ಯರಿಗೆ ಸಹ ಕೋವಿಡ್ ಬಂದಿರುವುದರಿಂದ ಆಸ್ಪತ್ರೆಯಲ್ಲಿ ಸುಸಜ್ಜಿತ ವಿಭಾಗವನ್ನು ತೆರೆಯುವುದು ಕಷ್ಟವಾಗಿದೆ’ ಎಂದು ಮೂಲಗಳು ತಿಳಿಸಿವೆ.‌

ಬೆಮಲ್ ಮೆಡಿಕಲ್‌ ಸೆಂಟರ್‌ನಲ್ಲಿ ಕೋವಿಡ್‌ ವಿಭಾಗ ತೆರೆಯಲು ಅನುಕೂಲಗಳನ್ನು ಪರಿಶೀಲಿಸಲು ಗುರುವಾರ ಆಗಮಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕೂಡ ನಿರಾಸೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT