ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಹೆಚ್ಚಳ

ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ಸಂತೋಷ ಗಜಾನನ ಭಟ್ ಕಳವಳ
Last Updated 10 ಅಕ್ಟೋಬರ್ 2019, 14:39 IST
ಅಕ್ಷರ ಗಾತ್ರ

ಕೋಲಾರ: ‘ಮಾನಸಿಕ ರೋಗವೆಂದರೆ ಹುಚ್ಚು ಅಥವಾ ಕಾಯಿಲೆಯೆಂದು ಆತಂಕಪಡಬೇಕಿಲ್ಲ. ಸಮಸ್ಯೆ ಎಂದು ಪರಿಗಣಿಸಿ ಸೂಕ್ತ ಚಿಕಿತ್ಸೆ ಪಡೆದು ಹೊರಬರಲು ಪ್ರಯತ್ನಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ಸಂತೋಷ ಗಜಾನನ ಭಟ್ ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಪ್ತಾಹ ಉದ್ಘಾಟಿಸಿ ಮಾತನಾಡಿ, ‘ಮಾನಸಿಕ ಸಮಸ್ಯೆಯಿಂದಾಗಿ ಜಗತ್ತಿನಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮನುಷ್ಟು ಜಾಗತೀಕರಣದ ಓಟದಲ್ಲಿ ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾನೆ. ಅವಿಭಕ್ತ ಕುಟುಂಬ, ಸಹಬಾಳ್ವೆ, ಸಮಾನತೆಯ ಜೀವನ ಕಣ್ಮರೆಯಾಗುತ್ತಿದೆ. ಅತಿ ಬೇಗ ಶ್ರೀಮಂತನಾಗುವ ಪ್ರಯತ್ನದಲ್ಲಿ ಒತ್ತಡ, ಉದ್ವೇಗ, ಖಿನ್ನತೆಗೆ ಒಳಗಾಗುತ್ತಿದ್ದಾನೆ. ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳು ಹಾಗೂ ಇಂಟರ್‌ನೆಟ್‌ನ ದಾಸರಾಗಿ ದಾರಿ ತಪ್ಪುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಭಾರತವು ಜಾಗತಿಕವಾಗಿ 2020ರ ವೇಳೆಗೆ ಅತಿ ಹೆಚ್ಚು ಕಿರಿಯ ವಯಸ್ಸಿನ ನಾಗರಿಕರನ್ನು ಹೊಂದಿರುವ ರಾಷ್ಟ್ರವಾಗಿರುತ್ತದೆ. 26 ವರ್ಷದವರ ಸಂಖ್ಯೆ ವೃದ್ಧಿಸಿ ದುಡಿಯುವ ಶಕ್ತಿಯೂ ಹೆಚ್ಚಿರುತ್ತದೆ. ಹದಿಹರೆಯದಲ್ಲಿ ಒತ್ತಡ, ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಿ ಆತ್ಮಹತ್ಯೆ ಪ್ರಕರಣ ಹೆಚ್ಚಳವಾಗುವ ಸಾಧ್ಯತೆಯಿದೆ. ಮಾನಸಿಕ ಆರೋಗ್ಯದ ಕಳಂಕ ಹೋಗಲಾಡಿಸಲು ಜಗತ್ತಿನೆಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

‘ವಿದ್ಯಾರ್ಥಿ ಜೀವನದಲ್ಲಿ ಅಂಕ ಗಳಿಕೆಯೊಂದೇ ಸಾಧನೆಯಲ್ಲ. ಉದ್ಯೋಗ. ಉತ್ತಮ ಜೀವನ ನಡೆಸಲು ಶಿಕ್ಷಣ ಬೇಕು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ಜೀವನ ಮುಗಿಯುವುದಿಲ್ಲ. ಜೀವನ ನಡೆಸಲು ಸಾಕಷ್ಟು ಮಾರ್ಗಗಳಿವೆ. ಸೋಲೇ ಯಶಸ್ಸಿನ ಮೆಟ್ಟಿಲೆಂದು ಭಾವಿಸಿ ಗುರಿ ಮುಟ್ಟಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

4ನೇ ಸ್ಥಾನದಲ್ಲಿದೆ: ‘ಮಾನಸಿಕ ಆರೋಗ್ಯದ ಪ್ರಚಾರ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ಈ ವರ್ಷದ ಸಪ್ತಾಹದ ಘೋಷವಾಕ್ಯ. ಹದಿಹರೆಯವರಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಹೆಚ್ಚುತ್ತಿವೆ. 15 ವರ್ಷದಿಂದ 29 ವರ್ಷದೊಳಗೆ ಮೃತಪಟ್ಟವರಲ್ಲಿ ಆತ್ಮಹತ್ಯೆಯು 2ನೇ ಪ್ರಮುಖ ಕಾರಣ. ಕರ್ನಾಟಕವು ದೇಶದಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ 4ನೇ ಸ್ಥಾನದಲ್ಲಿದ್ದು, 1 ಲಕ್ಷ ಜನಸಂಖ್ಯೆಯಲ್ಲಿ ಶೇ 16.4ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ವಿವರಿಸಿದರು.

‘ಜಿಲ್ಲೆಯಲ್ಲಿ 2016ರಿಂದ ಮಾನಸಿಕ ಆರೋಗ್ಯ ಘಟಕ ಆರಂಭಿಸಲಾಗಿದ್ದು, ಪ್ರತಿ ಸೋಮವಾರ ನಗರದ ದರ್ಗಾ ಮೊಹಲ್ಲಾ ಆರೋಗ್ಯ ಕೇಂದ್ರ, ಮೊದಲ ಮಂಗಳವಾರ ಶ್ರೀನಿವಾಸಪುರ, 2ನೇ ಮಂಗಳವಾರ ಮುಳಬಾಗಿಲು, 3ನೇ ಮಂಗಳವಾರ ಬಂಗಾರಪೇಟೆ ಮತ್ತು 4ನೇ ಮಂಗಳವಾರ ಮಾಲೂರು, 3ನೇ ಶುಕ್ರವಾರ ಕೆಜಿಎಫ್ ಆಸ್ಪತ್ರೆಯಲ್ಲಿ ಮನೋವೈದ್ಯರು, ಆಪ್ತ ಸಮಾಲೋಚಕರು, ಶುಶ್ರೂಷಕರು ಕಾರ್ಯ ನಿರ್ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

36,930 ಮನೋರೋಗಿಗಳು: ‘ಜಿಲ್ಲೆಯಲ್ಲಿ 36,930 ಮನೋರೋಗಿಗಳನ್ನು ಗುರುತಿಸಲಾಗಿದೆ. ಇವರಲ್ಲಿ 7,525 ಮಂದಿ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. 15,438 ಮಂದಿ ಸಾಮಾನ್ಯ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. 2,322 ಮಂದಿ ಮದ್ಯಪಾನ ಮತ್ತು ಧೂಮಪಾನ ವ್ಯಸನಿಗಳಾಗಿದ್ದಾರೆ. 3,031 ಬುದ್ಧಿಮಾಂದ್ಯರಾಗಿದ್ದಾರೆ ಮತ್ತು 8,614 ಮಂದಿ ಮೂರ್ಛೆ ರೋಗದಿಂದ ನರಳುತ್ತಿದ್ದಾರೆ. ಇವರೆಲ್ಲರಿಗೂ ಮಾನಸಿಕ ಆರೋಗ್ಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (ಪ್ರಭಾರ) ಸದಸ್ಯ ಕಾರ್ಯದರ್ಶಿ ಶಾಯಿಮಾ ಖಮರೋಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್‌, ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್, ಸರ್ಕಾರಿ ಬಾಲಕರ ಪದವಿ ಕಾಲೇಜು ಪ್ರಾಂಶುಪಾಲೆ ಮಧುಲತಾ ಮೋಸಸ್, ಕ್ಷೇತ್ರ ಆರೋಗ್ಯಾಧಿಕಾರಿ ಗೀತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪ್ರಸನ್ನ ಪಾಲ್ಗೊಂಡಿದ್ದರು.

ಅಂಕಿ ಅಂಶ.....
* 36,930 ಮನೋರೋಗಿಗಳು ಜಿಲ್ಲೆಯಲ್ಲಿದ್ದಾರೆ
* 8,614 ಮಂದಿಗೆ ಮೂರ್ಛೆ ರೋಗ
* 3,031 ಮಂದಿ ಬುದ್ಧಿಮಾಂದ್ಯರು
* 15,438 ಮಂದಿಗೆ ಸಾಮಾನ್ಯ ಮಾನಸಿಕ ತೊಂದರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT