ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು | ಸೌಕರ್ಯಗಳಿಲ್ಲದ ‘ಇಂದಿರಾ’ನಗರ

ನಿರ್ಮಾಣಗೊಳ್ಳದ 150 ಮಂಜೂರಾದ ಮನೆಗಳು * ಇನ್ನೂ ಗುಡಿಸಿಲಿನಲ್ಲೇ ವಾಸ
ಕೆ.ತ್ಯಾಗರಾಜ್ ಕೊತ್ತೂರು
Published 28 ನವೆಂಬರ್ 2023, 6:58 IST
Last Updated 28 ನವೆಂಬರ್ 2023, 6:58 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಹೆಸರಿಗಷ್ಟೇ ಗ್ರಾಮವಾಗಿದ್ದು, ಮೂಲ ಸೌಲಭ್ಯಗಳಿಲ್ಲದೆ ನಲುಗಿದೆ.

ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಯ ಕೊನೆ ಗ್ರಾಮ ಇಂದಿರಾನಗರ. ಇದು ನಿರ್ಮಾಣಗೊಂಡಿದ್ದು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಅನುದಾನದ ಗುಂಪು ಮನೆಗಳ ಯೋಜನೆಯಿಂದ. 1976-77ರಲ್ಲಿ ಒಂದೇ ಸಲ 150 ಮನೆಗಳನ್ನು ಗ್ರಾಮಕ್ಕೆ ಮಂಜೂರು ಮಾಡಿದ್ದರಿಂದ ‘ಇಂದಿರಾನಗರ’ ಎಂದು ಹೆಸರು ಪಡೆಯಿತು. ಆದರೆ ಮನೆಗಳು ಮಂಜೂರಾದವೇ ಹೊರೆತು ಪೂರ್ಣಗೊಳ್ಳಲಿಲ್ಲ. ಎಲ್ಲಿ ನೋಡಿದರೂ ಮನೆಯ ಅಡಿಪಾಯಗಳು ಮಾತ್ರ ಕಾಣಿಸುತ್ತಿದ್ದು, 11 ಮನೆಗಳಲ್ಲಿ ಮಾತ್ರ ವಾಸ ಕುಟುಂಬಗಳಿವೆ. 

ಗ್ರಾಮದಲ್ಲಿ ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್, ಶಾಲೆ, ಅಂಗನವಾಡಿ ಕೇಂದ್ರ ಯಾವುದೇ ಸೌಕರ್ಯಗಳಿಲ್ಲದೆ ಕೇವಲ 11 ಮನೆಗಳಿವೆ. ಅದರಲ್ಲಿ ಎರಡು ಮನೆಗಳು ಮಾತ್ರ ಸರ್ಕಾರದಿಂದ ಮಂಜೂರಾದ ಚಪ್ಪಡಿ ಮನೆಗಳಿದ್ದರೆ, ಉಳಿದ 9 ಮನೆಗಳು ಗುಡಿಸಲಾಗಿದ್ದು ಕೇವಲ 46 ಮಂದಿ ವಾಸಿಸುತ್ತಿದ್ದಾರೆ. ಇಲ್ಲಿ ಕನಿಷ್ಠ ರಸ್ತೆಯೂ ಇಲ್ಲದೆ ಕೆರೆಯಲ್ಲಿ ನಡೆದು ಕಾಲು ದಾರಿ ನಿರ್ಮಾಣವಾಗಿದೆ. 

ಹುಲ್ಲು, ಸೋಗೆ ಹಾಗೂ ತೆಂಗಿನ ಗರಿಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರು ಗಾಳಿ ಮಳೆಗೆ ಗುಡಿಸಲು ಬೀಳುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ವಿದ್ಯುತ್‌ ಸಂಪರ್ಕ ಕಾಣದೆ ಎಲ್ಲಾ ಮನೆಯಲ್ಲೂ ಮೇಣದ ಬತ್ತಿಗಳೇ ಕಾಣಿಸುತ್ತವೆ. ಕೆಲವು ಮನೆಗಳಿಗೆ ಮಾತ್ರ ದೂರದ ಎಲ್ಲೋ ಖಾಸಗಿ ಅವರ ಕೊಳವೆ ಬಾವಿಗಳ ವಿದ್ಯುತ್ ಕಂಬಗಳಿಂದ ಸಂಪರ್ಕವನ್ನು ಪಡೆದುಕೊಂಡಿದ್ದು, ಸಂಜೆ 6ರಿಂದ 9ರವರೆಗೆ ಮಾತ್ರ ವಿದ್ಯುತ್ ಇರುತ್ತದೆ. ನಂತರ ಕರೆಂಟ್‌ ಇರುವುದೇ ಇಲ್ಲ. ಹಾಗಾಗಿ ರಾತ್ರಿಯಾದರೆ ಗ್ರಾಮದಲ್ಲಿ ಯಾರೂ ಓಡಾಡುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸುಮಾರು 43 ವರ್ಷಗಳ ಹಿಂದೆ ಗ್ರಾಮಕ್ಕೆ ಹಾಕಲಾಗಿದ್ದ ಎರಡು ಕೈಪಂಪುಗಳು ದುರಸ್ತಿಯಾಗಿದ್ದು, ಅದರ ಸಾಮಾನುಗಳು ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿವೆ. ಹಾಗಾಗಿ ಕುಡಿಯುವ ನೀರಿಗಾಗಿ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ತಂದು ಬಳಸುತ್ತಿದ್ದಾರೆ. ಜತೆಗೆ ಇದೇ ನೀರನ್ನು ಕುಡಿಯುತ್ತಿದ್ದಾರೆ.

ಶೌಚಾಲಯಗಳ ಮುಖವೇ ನೋಡದ ಜನ: ರಾಜ್ಯದಲ್ಲಿಯೇ ಬಯಲು ಮುಕ್ತ ಶೌಚಾಲಯದ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಜಿಲ್ಲೆಯ ಈ ಗ್ರಾಮದಲ್ಲಿ ಒಂದು ಶೌಚಾಲಯುವೂ ಇಲ್ಲ. ಬಯಲು ಬಹಿರ್ದೆಸೆಯೇ ಈಗಲೂ ಇಲ್ಲಿ ತಾಂಡವಾಡುತ್ತಿದೆ. ಆದ್ದರಿಂದ ಯಾವ ರೀತಿಯಲ್ಲಿ ಜಿಲ್ಲೆ ಬಯಲು ಮುಕ್ತ ಶೌಚಾಲಯದ ಪಟ್ಟಿಗೆ ಹೋಯಿತೊ ಗೊತ್ತಿಲ್ಲದಂತಾಗಿದೆ.

ಗ್ರಾಮದಲ್ಲಿ ಶಾಲೆ, ಅಂಗನವಾಡಿ ಇಲ್ಲದೆ ಇರುವುದರಿಂದ ಬಹುತೇಕ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ. 7 ರಿಂದ 8 ಮಂದಿ ಮಕ್ಕಳು ಮಾತ್ರ ದೂರದ ತಿಪ್ಪದೊಡ್ಡಿ, ಕೆ. ಉಗಿಣಿ ಮುಂತಾದ ಗ್ರಾಮಗಳ ಶಾಲೆಗಳಿಗೆ ನಡೆದುಕೊಂಡೇ ಹೋಗುತ್ತಾರೆ. ಕೆಲವರು ನಡೆದು ಹೋಗಲು ಭಯವಾಗಿ ಅರ್ಧಕ್ಕೆ ಶಾಲೆ ತೊರೆದಿದ್ದಾರೆ.

ಕೆಲವರು ಅಡಿಪಾಯದ ಜಾಗದಲ್ಲಿ ಸ್ವಂತಕ್ಕೆ ರಾಗಿ, ಜೋಳ ಚೆಲ್ಲಿದ್ದಾರೆ, ಇನ್ನೂ ಕೆಲವು ಅಕ್ಕಪಕ್ಕದ ಹೊಲದವರು ನಿವೇಶನ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಕಬ್ಬಿನ ಸೋಗೆಯಲ್ಲಿ ನಿರ್ಮಾಣವಾಗಿರುವ ಗುಡಿಸಲು 
ಕಬ್ಬಿನ ಸೋಗೆಯಲ್ಲಿ ನಿರ್ಮಾಣವಾಗಿರುವ ಗುಡಿಸಲು 
ಮೂಲ ಸೌಲಭ್ಯ ಸಮಸ್ಯೆಯಿಂದ ಅನಾಗರಿಕರಾಗಿ ಬದುಕುತ್ತಿರುವ ಜನರ ಸಮಸ್ಯೆಗಳ ಬಗ್ಗೆ ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ತೆರೆದು ನೋಡಲಿ
ಪುರುಷೋತ್ತಮ್ ಸ್ಥಳೀಯ

ನರೇಗಾದಿಂದ ಎಲ್ಲಾ ಸೌಕರ್ಯ ಒದಗಿಸುವುದು ಕಷ್ಟ  ಇಂದಿರಾನಗರದಲ್ಲಿ ಸಿಸಿ ರಸ್ತೆ ನಿರ್ಮಿಸಲು ಯಾರೂ ಮುಂದೆ ಬರುತ್ತಿಲ್ಲ. ಜತೆಗೆ ಮುಳಬಾಗಿಲು ಬರ ತಾಲ್ಲೂಕು ಆಗಿದ್ದು ಕುಡಿಯುವ ನೀರಿಗಾಗಿ ನೂತನವಾಗಿ ಕೊಳವೆ ಬಾವಿ ಕೊರೆಸಲು ಅವಕಾಶವಿಲ್ಲ. ನರೇಗಾದಿಂದ ಎಲ್ಲಾ ಮೂಲ ಸೌಕರ್ಯ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಇನ್ನಿತರೆ ಯೋಜನೆಗಳು ಬಂದರೆ ಗ್ರಾಮದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಬಹುದು. ಕೆ. ಸರ್ವೇಶ್ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT