ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢ: ಕೋಲಾರ ಜಿಲ್ಲೆಯಲ್ಲಿ ಆತಂಕ

Last Updated 24 ಜೂನ್ 2020, 12:53 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ದಾದೇನಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿದ್ದು, ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ.

ಕೆಜಿಎಫ್‌ ತಾಲ್ಲೂಕಿನ ಎನ್‌.ಜಿ.ಹುಲ್ಕೂರು ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯು ಗುರುವಾರದಿಂದ (ಜೂನ್‌ 25) ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು. ಈ ವಿದ್ಯಾರ್ಥಿನಿಗೆ ಪೋಷಕರು ಜೂನ್‌ 15ರಂದು ಬಾಲ್ಯವಿವಾಹ ಮಾಡಿದ್ದರು.

ಈ ಸಂಬಂಧ ಸ್ಥಳೀಯರು ಬೇತಮಂಗಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (ಸಿಡಿಪಿಒ) ದೂರು ಕೊಟ್ಟಿದ್ದರು. ನಂತರ ಸಿಡಿಪಿಒ ಅವರು ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿದ್ಯಾರ್ಥಿನಿಯನ್ನು ಕೆಜಿಎಫ್‌ನ ಬಾಲಮಂದಿರಕ್ಕೆ ದಾಖಲಿಸಿದ್ದರು.

ಇದಕ್ಕೂ ಮುನ್ನ ವಿದ್ಯಾರ್ಥಿನಿಯ ಕಫಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬುಧವಾರ ಸಂಜೆ ಬಂದ ಪ್ರಯೋಗಾಲಯದ ವರದಿಯಲ್ಲಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಶಿಕ್ಷಣ ಇಲಾಖೆಯು ಈ ವಿದ್ಯಾರ್ಥಿನಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದೆ. ಸೋಂಕಿತ ವಿದ್ಯಾರ್ಥಿನಿಯನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕೊರೊನಾ ಸೋಂಕಿತ ವಿದ್ಯಾರ್ಥಿನಿ ಪತ್ತೆಯಾಗಿರುವ ದಾದೇನಹಳ್ಳಿಯಲ್ಲಿ ಇತರೆ 4 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ದಾದೇನಹಳ್ಳಿ ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಇರುವ ಕಾರಣ ಆ 4 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ’ ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಆಂಧ್ರ ಸಂಪರ್ಕ: ದಾದೇನಹಳ್ಳಿಯು ಆಂಧ್ರಪ್ರದೇಶದ ಗಡಿ ಭಾಗದ ವಿ.ಕೋಟಕ್ಕೆ ಸಮೀಪದಲ್ಲಿದೆ. ವಿ.ಕೋಟ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿದ್ದು, ಅಲ್ಲಿನ ವ್ಯಕ್ತಿಗಳು ದಾದೇನಹಳ್ಳಿ ಬಂದು ಹೋಗುವುದು ಸಾಮಾನ್ಯ. ಹೀಗಾಗಿ ಅವರ ಸಂಪರ್ಕದಿಂದ ವಿದ್ಯಾರ್ಥಿನಿಗೆ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೆಜಿಎಫ್ ಬಾಲಮಂದಿರದಲ್ಲಿ ಸೋಂಕಿತ ವಿದ್ಯಾರ್ಥಿನಿಯ ಜತೆಗಿದ್ದ ಮತ್ತೊಬ್ಬ ಬಾಲಕಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆ ಬಾಲಕಿಯ ಕಫಾ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT