ಕೋಲಾರ: ‘ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣವು ಸಮಸ್ಯೆಗಳ ಆಗರವಾಗಿದ್ದು, ಆಡಳಿತ ಮಂಡಳಿಯು ಸಮಸ್ಯೆ ಪರಿಹರಿಸುವುದಾಗಿ ಹೇಳುತ್ತಿದೆಯೇ ಹೊರತು ಈವರೆಗೂ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಅಧ್ಯಕ್ಷ ಮಂಜುನಾಥ್‌ರ ಅಧ್ಯಕ್ಷತೆಯಲ್ಲಿ ಇಲ್ಲಿ ಸೋಮವಾರ ನಡೆದ ರೈತರ ಕುಂದು ಕೊರತೆ ಸಭೆಯಲ್ಲಿ ಜಾಗದ ಕೊರತೆ, ವಾಹನ ನಿಲುಗಡೆಗೆ ಸ್ಥಳಾವಕಾಶ, ಕಸದ ಸಮಸ್ಯೆಗಳು ಪ್ರತಿಧ್ವನಿಸಿದವು. ‘ಎಪಿಎಂಸಿ ಆಡಳಿತ ಮಂಡಳಿಯು ಸಮಸ್ಯೆ ಪರಿಹರಿಸುವುದಾಗಿ ಭರವಸೆ ಕೊಡುತ್ತದೆಯೇ ಆ ಹೊರತು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
‘ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ತೀವ್ರವಾಗಿದ್ದು, ಟೊಮೆಟೊ ಸೇರಿದಂತೆ ತರಕಾರಿ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಬೇರೆಡೆಗೆ ಎಪಿಎಂಸಿ ಸ್ಥಳಾಂತರಿಸಲು ಜಿಲ್ಲಾಡಳಿತವು ಕಾಲಮಿತಿಯೊಳಗೆ ಜಮೀನು ನೀಡದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜುನಾಥ್, ‘ಮಾರುಕಟ್ಟೆಗೆ ಬೇರೆಡೆ ಜಮೀನು ನೀಡಲು ಜಿಲ್ಲಾಧಿಕಾರಿಯು ಒಂದು ತಿಂಗಳ ಗಡುವು ತೆಗೆದುಕೊಂಡಿದ್ದಾರೆ. ಈ ಗಡುವಿನೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ವಿಧಾನಸಭೆ ಎದುರು ಸತ್ಯಾಗ್ರಹ ನಡೆಸಲು ಸಿದ್ಧ’ ಎಂದರು.
ರೈತರ ಸಬಲೀಕರಣ: ‘ಇಲಾಖೆಯು ರೈತರ ಸಬಲೀಕರಣಕ್ಕೆ ವಿವಿಧ ಯೋಜನೆಗಳಡಿ ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ್ ಕಿವಿಮಾತು ಹೇಳಿದರು.
‘ನರೇಗಾ ಯೋಜನೆಯಡಿ ದೊರೆಯುವ ಸೌಕರ್ಯ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಹನಿ ನೀರಾವರಿ, ಪ್ಯಾಕ್‌ಹೌಸ್, ಪಾಲಿ ಹೌಸ್ ಸೌಲಭ್ಯ ಪಡೆಯಬೇಕು’ ಎಂದು ಹೇಳಿದರು. ಆಗ ಮಧ್ಯ ಪ್ರವೇಶಿಸಿದ ರೈತಪರ ಸಂಘಟನೆಗಳ ಮುಖಂಡರು, ‘ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳ ಅದಕ್ಷತೆಯ ಕಾರಣಕ್ಕೆ ಫಲಾನುಭವಿಗಳಿಗೆ ಸಕಾಲಕ್ಕೆ ಸವಲತ್ತುಗಳು ಸಿಗುತ್ತಿಲ್ಲ’ ಎಂದು ಆರೋಪಿಸಿದರು.
ಹಗರಣ ನಡೆದಿವೆ: ‘ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಹಗರಣ ನಡೆದಿವೆ. ಮಾಲೂರು ತಾಲ್ಲೂಕಿನ ಈ ಹಿಂದೆ ಸಹಾಯಕ ನಿರ್ದೇಶಕರಾಗಿದ್ದ ಪ್ರಸನ್ನಕುಮಾರ್ ರೈತರಿಗೆ ಸಿಗಬೇಕಾದ ಕೋಟ್ಯಂತರ ರೂಪಾಯಿ ಸಹಾಯಧನ ಲೂಟಿ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ?’ ಎಂದು ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಪ್ರಶ್ನಿಸಿದರು.
‘ಸರ್ಕಾರಿ ಅಧಿಕಾರಿಗಳ ಸಂಬಂಧಿಕರು ಸಲ್ಲಿಸಿದ ಅರ್ಜಿಗಳಿಗೆ ಬೇಗ ಪರಿಹಾರ ಸಿಗುತ್ತದೆ. ರೈತರು ಸಲ್ಲಿಸಿದ ಅರ್ಜಿಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆ ಹಾಕುತ್ತಾರೆ. ಅಧಿಕಾರಿಗಳು ತಾರತಮ್ಯ ಬಿಟ್ಟು ರೈತರ ಪರವಾಗಿ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
‘ಎಪಿಎಂಸಿ ಆವರಣ ತುಂಬಾ ಕಿರಿದಾಗಿದೆ. ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಬಂದಿದ್ದು, ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಾಗುತ್ತಿದ್ದು, ಆಡಳಿತ ಮಂಡಳಿಯು ಎಚ್ಚೆತ್ತುಕೊಂಡು ಜಾಗದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ತೋಟಗಾರಿಕೆ ಇಲಾಖೆಯಲ್ಲಿ ದಲ್ಲಾಳಿಗಳಿಗೆ ಇರುವ ಮಾರ್ಯದೆ ರೈತರಿಗೆ ಇಲ್ಲ. ರೈತ 2 ಎಕರೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಹಾಯಧನ ಪಡೆದುಕೊಂಡರೆ, ಏಜೆಂಟರು ನಕಲಿ ದಾಖಲೆಪತ್ರ ಸಲ್ಲಿಸಿ ಹತ್ತಾರು ಎಕರೆಗೆ ಬಿಲ್ ಮಾಡಿಕೊಳ್ಳುತ್ತಾರೆ. ಈ ಇಲಾಖೆಯಲ್ಲಿ ನಡೆಯುವಷ್ಟು ಹಗರಣಗಳು ಬೇರೆಲ್ಲೂ ನಡೆಯಲ್ಲ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.
ಎಪಿಎಂಸಿ ನಿರ್ದೇಶಕ ದೇವರಾಜ್, ಕಾರ್ಯದರ್ಶಿ ರವಿಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.