ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕಲಿಕಾ ಉತ್ಸಾಹ ತುಂಬಿ

ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್ ಸಲಹೆ
Last Updated 3 ನವೆಂಬರ್ 2021, 15:48 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಮಹಾಮಾರಿಯ ಆತಂಕ ದೂರವಾಗುತ್ತಿದ್ದು, ಶಾಲೆಗಳು ಆರಂಭಗೊಂಡಿವೆ. ಇದೀಗ ಮಕ್ಕಳನ್ನು ಕಲಿಕೆಯ ಹಾದಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹೇಳಿದರು.

ಜಿಲ್ಲೆಯ ತೊರಲಕ್ಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ‘ಕೋವಿಡ್‌ನಿಂದಾಗಿ 18 ತಿಂಗಳಿಂದ ಕಲಿಕೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಅನೇಕ ಮಕ್ಕಳು ಅಕ್ಷರ ಮರೆತಿರುವ ಸಾಧ್ಯತೆಯೂ ಇದ್ದು, ಅವರನ್ನು ಕಲಿಕೆಗೆ ಗಮನ ಹರಿಸುವಂತೆ ಮಾಡಲು ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲು ಅನುಮತಿ ನೀಡಿದೆ. ಬಿಸಿಯೂಟವೂ ಆರಂಭವಾಗಿದೆ, ಆದರೂ ಕೋವಿಡ್ ಆತಂಕ ಪೂರ್ಣ ಪ್ರಮಾಣದಲ್ಲಿ ದೂರವಾಗಿಲ್ಲ. ಶಾಲೆಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಿ. ಕೋವಿಡ್ ಮಾರ್ಗಸೂಚಿ ಪಾಲಿಸಿ’ ಎಂದು ಸೂಚಿಸಿದರು.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಳೆದ ಬಾರಿಯಂತೆ ಬಹುಆಯ್ಕೆ ಪ್ರಶ್ನೆ ಪತ್ರಿಕೆ ಬರುವುದೆಂದು ಕಾಯಬೇಡಿ. ಖಂಡಿತ ಈ ಬಾರಿ 2019ರಂತೆಯೇ ಪ್ರಶ್ನೆಪತ್ರಿಕೆ ಬರಲಿದೆ. ಹೀಗಾಗಿ ಕಷ್ಟಪಟ್ಟು ಓದಬೇಕು. ಶೇ 100ರ ಅಂಕ ಗಳಿಕೆ ಗುರಿಯಾಗಿರಬೇಕು. ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ. ಆಗ ಮಾತ್ರ ಸಾಧನೆ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಗುಣಾತ್ಮಕ ಫಲಿತಾಂಶ: ‘ಜಿಲ್ಲೆಯಲ್ಲಿ ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡಲಾಗಿದೆ. ಆದ್ದರಿಂದಲೇ ಶೇ 85 ವಿದ್ಯಾರ್ಥಿಗಳಿಗೆ ಶೇ 60ಕ್ಕಿಂತ ಹೆಚ್ಚು ಅಂಕ ಬಂದಿದೆ. ಫಲಿತಾಂಶದ ಗುಣಮಟ್ಟ ಮತ್ತಷ್ಟು ಹೆಚ್ಚಬೇಕು. ಶಿಕ್ಷಣ ಇಲಾಖೆ ಈಗಾಗಲೇ ಅಧ್ಯಾಯವಾರು ಪ್ರಶ್ನೋತ್ತರ ಸಿದ್ಧಪಡಿಸಿ ನೀಡಿದೆ. ಇದನ್ನು ಅಭ್ಯಾಸ ಮಾಡಬೇಕು. ರೂಪಣಾತ್ಮಕ ಚಟುವಟಿಕೆ ಏಕ ರೂಪದಲ್ಲಿ ಎಲ್ಲಾ ಶಾಲೆಗಳಲ್ಲಿ ಮಾಡುವಂತಾಗಲು ಅಗತ್ಯ ಚಟುವಟಿಕೆ ವಿವರ ಒದಗಿಸಲಾಗಿದೆ’ ಎಂದರು.

‘ಕೋವಿಡ್‌ನಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಹೊಣೆ ಶಿಕ್ಷಕರದ್ದು’ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀಬಾಯಿ, ಶಿಕ್ಷಕರಾದ ವೇಣುಗೋಪಾಲ್, ರವಿಶಂಕರ್, ಚಂದ್ರಮೌಳಿ, ಅಮರಾವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT