ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕಿ.ಮೀಗೊಂದು ಕ್ಯಾಮೆರಾ ಅಳವಡಿಸಿ: ಅಲೋಕ್‌ ಕುಮಾರ್‌

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ವೇ ಕಾಮಗಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್‍ ಕುಮಾರ್
Published 7 ಸೆಪ್ಟೆಂಬರ್ 2023, 17:13 IST
Last Updated 7 ಸೆಪ್ಟೆಂಬರ್ 2023, 17:13 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೊಳತ್ತೂರಿನಲ್ಲಿ ಆರಂಭವಾಗಿ ಕೋಲಾರ ಮಾರ್ಗವಾಗಿ ನಡೆಯುತ್ತಿರುವ ಬೆಂಗಳೂರು-ಚೆನ್ನೈ ಕಾರಿಡಾರ್ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಗುರುವಾರ ಪರಿಶೀಲನೆ ನಡೆಸಿದರು.

ಹೊಸಕೋಟೆ ಸಮೀಪದಿಂದ ಕೋಲಾರ ತಾಲ್ಲೂಕಿನ ಪಾರ್ಶ್ವಗಾನಹಳ್ಳಿ ಗೇಟ್ ಸಮೀಪದವರೆಗೆ ರಸ್ತೆ ಕಾಮಗಾರಿ ವಿಕ್ಷಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿ ನಡೆಸುತ್ತಿರುವ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡು. ಹಲವು ಸಲಹೆ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೊಸಕೋಟೆ ಸಂಚಾರಿ ಠಾಣೆ ಹಾಗೂ ಕೋಲಾರದ ವೇಮಗಲ್, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಬ್ಲ್ಯಾಕ್‍ ಸ್ಪಾಟ್‍ಗಳು ಎಲ್ಲಿ ಇವೆ, ಅವುಗಳನ್ನು ಯಾವ ರೀತಿ ಸರಿಪಡಿಸಲಾಗಿದೆ ಎನ್ನುವುದರ ಜತೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ನಿರ್ಮಾಣ ಕಾಮಗಾರಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಒಂದು ಹಂತದಲ್ಲಿ ಪೂರ್ಣಗೊಂಡಿರುವ ಶೇ 87ರಷ್ಟು ಸೆಟರೈಟ್ ರಿಂಗ್ ರಸ್ತೆಗಳ ಕಾಮಗಾರಿ ವೀಕ್ಷಣೆ ಮಾಡಲಾಗಿದೆ’ ಎಂದರು.

‘ಬೆಂಗಳೂರು-ಮೈಸೂರು ದಶಪಥ ರಸ್ತೆಯು ಆರಂಭದಲ್ಲಿ ಅಪಘಾತಗಳು ಹೆಚ್ಚಾಗಿದ್ದು, ಆ ವೇಳೆ ಇದೇನು ‘ಹೈವೇನಾ ಅಥವಾ ಡೆತ್ ವೇನಾ’ ಎಂಬ ಭಾವನೆ ಜನರಲ್ಲಿ ಮೂಡಿತ್ತು. ಹೀಗಾಗಿ, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಆರಂಭಗೊಂಡ ಬಳಿಕ ಕೆಟ್ಟ ಘಟನೆಗಳು ಜರುಗದಂತೆ ಎಚ್ಚರ ವಹಿಸಿ, ಸವಾರರ ಸುರಕ್ಷತೆಗೆ ಒತ್ತು ನೀಡುವ ಜತೆಗೆ ಅಪಘಾತ ಹಾಗೂ ಸಾವಿನ ಪ್ರಮಾಣ ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದೇವೆ’ ಎಂದು ಹೇಳಿದರು.

‘ರಸ್ತೆ ನಿರ್ಮಾಣದ ವೇಳೆ ಜನ, ಜಾನುವಾರುಗಳು, ವಾಹನಗಳ ಅಂಡರ್‌ ಪಾಸ್‍ಗಳನ್ನು ಸರಿಯಾಗಿ ನಿರ್ಮಿಸಬೇಕು. ತಡೆಗೋಡೆ ಎತ್ತರ ಹೆಚ್ಚಿಸಿ, ಮಳೆ ಬಂದಾಗ ರಸ್ತೆ ಮೇಲೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಪಿಟಿಝೆಡ್ ಕ್ಯಾಮೆರಾಗಳು, ಆಟೋಮೆಟಿಕ್ ನಂಬರ್‌ ಪ್ಲೇಟ್ ಕ್ಯಾಮೆರಾದಂತೆಯೇ ಅತ್ಯಾಧುನಿಕ ಕ್ಯಾಮೆರಾಗಳನ್ನು ಪ್ರತಿ 10 ಕಿ.ಮೀಗೆ ಅಳವಡಿಸಲು ಸೂಚಿಸಲಾಗಿದೆ. ಜತೆಗೆ ರಾಜ್ಯದಲ್ಲಿ ಶೀಘ್ರದಲ್ಲೇ ಇ-ಚಲನ್ ತಂತ್ರಜ್ಞಾನವನ್ನು ಅಳವಡಿಸುವುದಕ್ಕೂ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದರು.

‘ಅಪಘಾತ ಅಥವಾ ಸಂಚಾರಿ ನಿಯಮ ಉಲ್ಲಂಘಿಸಿದರೆ 3 ತಿಂಗಳು ಚಾಲನಾ ಪರವಾನಗಿ ಅಮಾನತುಪಡಿಸಲಾಗುತ್ತಿದೆ. ಆದರೆ, ಕ್ರಮಕೈಗೊಳ್ಳುವಲ್ಲಿ ಕೊಂಚ ಹಿನ್ನಡೆಯಾಗಿದೆ. ಹೆಲ್ಮೆಟ್ ಹಾಕದೇ ಇರುವುದು, ಸೀಟ್ ಬೆಲ್ಟ್ ಧರಿಸದೇ ಇರುವುದು, ತ್ರಿಬಲ್ ರೈಡಿಂಗ್ ಬಗ್ಗೆ ನಿರ್ದಾಕ್ಷಿಣ್ಯ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 64 ಪ್ರಕರಣಗಳಲ್ಲಿ ಕೇವಲ 5 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಪ್ರಕರಣಗಳಲ್ಲಿಯೂ ಶೀಘ್ರ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಒಳ್ಳೆಯ ರಸ್ತೆಗಳು ನಿರ್ಮಾಣವಾಗುತ್ತಿವೆ. ಉತ್ತಮವಾಗಿ ಕಾಮಗಾರಿ ನಡೆಸಿದ್ದರೂ ಅಪಘಾತ, ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಅದನ್ನು ತಗ್ಗಿಸಬೇಕಿದೆ’ ಎಂದರು.

‘ಹೆಲ್ಮೆಟ್ ಹಾಕದವರು ಮೃತಪಟ್ಟರೆ ಪರಿಹಾರದ ಹಣವೂ ಕಡಿಮೆ ಬರುತ್ತದೆ. ಈ ಎಲ್ಲ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಲ್ಲದೆ ಬೇರೆ ಇಲಾಖೆಗಳ ಸಹಕಾರವೂ ಬೇಕಾಗಿದ್ದು, ಎಲ್ಲದರ ಬಗ್ಗೆ ಚರ್ಚೆ ನಡೆಸಿ ಸಾಧ್ಯವಾದಷ್ಟು ಉತ್ತಮ ಸೇವೆ ಒದಗಿಸಲಾಗುವುದು’ ಎಂದು ನುಡಿದರು.

ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಕೆಜಿಎಫ್ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಾದ ಜೈಕುಮಾರ್, ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಇತರ ಅಧಿಕಾರಿಗಳು ಇದ್ದರು.

Highlights - ಸುರಕ್ಷತೆಗೆ ಒತ್ತು ನೀಡಿ; ರಸ್ತೆ ಅಪಘಾತ ತಪ್ಪಿಸಿ ಇ-ಚಲನ್ ತಂತ್ರಜ್ಞಾನ ಅಳವಡಿಸಲು ಯೋಜನೆ 3 ತಿಂಗಳು ಚಾಲನಾ ಪರವಾನಗಿ ಅಮಾನತು

ವಾಹನ ಚಾಲನೆ ಮಾಡುವವರು ತಮ್ಮ ಬಗ್ಗೆಯಷ್ಟೇ ಯೋಚಿಸದೆ ವಾಹನದಲ್ಲಿರುವ ಇನ್ನಿತರರ ಬಗ್ಗೆಯೂ ಯೋಚಿಸಬೇಕು. ಚಾಲಕನ ಕೈಯಲ್ಲಿ ಬೇರೆಯವರ ಜೀವ ಇರುತ್ತದೆ.
- ಅಲೋಕ್‌ ಕುಮಾರ್‌ ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ

‘ಅಪಘಾತ–ಶೇ 60 ಬೈಕ್ ಸವಾರರೇ ಸಾವು’

‘ಅಪಘಾತಗಳಿಗೆ ಅಜಾಗರೂಕತೆ ಹಾಗೂ ಅತಿ ವೇಗವೇ ಕಾರಣವಾಗುತ್ತಿದೆ. ವಾಹನ ಚಾಲನೆಯಲ್ಲಿ ನೈಪುಣ್ಯತೆ ಇಲ್ಲದಿದ್ದರೂ 120 150 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಬೈಕ್‌ನವರು 80-90 ಕಿ.ಮೀ ವೇಗದಲ್ಲಿ ಹೋಗಿ ಡಿಕ್ಕಿ ಹೊಡೆಯುತ್ತಾರೆ. ರಾಜ್ಯದಲ್ಲಿ ಆಗುತ್ತಿರುವ ಅಪಘಾತಗಳಲ್ಲಿ ಶೇ 60 ರಷ್ಟು ಮಂದಿ ಬೈಕ್ ಸವಾರರೇ ಮೃತಪಡುತ್ತಿದ್ದಾರೆ. ಉಳಿದ ಶೇ 40ರಲ್ಲಿ ಪಾದಚಾರಿಗಳು ಸೇರಿದಂತೆ ಬೇರೆ ಬೇರೆಯವರು ಇದ್ದಾರೆ. ಈ ಎಲ್ಲಾ ಆಯಾಮಗಳು ನಮ್ಮ ಗಮನಕ್ಕೆ ಬಂದಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ’ ಎಂದು ಅಲೋಕ್‌ ಕುಮಾರ್‌ ಹೇಳಿದರು.

‘2024ರ ಮಾರ್ಚ್‌ನೊಳಗೆ ಹೆದ್ದಾರಿ ಸಿದ್ಧ’

‘285 ಕಿ.ಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದ್ದು ರಾಜ್ಯದಲ್ಲಿ ₹ 3.5 ಸಾವಿರ ಕೋಟಿ ವೆಚ್ಚದ 77.23 ಕಿ.ಮೀ ರಸ್ತೆ ಹಾದು ಹೋಗಿದೆ. ಕೋಲಾರ ಜಿಲ್ಲೆಯಲ್ಲಿ 56 ಕಿ.ಮೀ ವ್ಯಾಪ್ತಿಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. 2023ರ ಸೆಪ್ಟೆಂಬರ್ ಒಳಗಾಗಿ ಕಾಮಗಾರಿ ಮುಗಿಸಬೇಕೆಂದಿದ್ದರೂ ಕೊರೊನಾ ವೇಳೆ ಅಡಚಣೆ ಉಂಟಾಗಿತ್ತು. 6 ತಿಂಗಳ ಹೆಚ್ಚುವರಿ ಕಾಲಾವಕಾಶ ಪಡೆದಿದ್ದು ಇದೀಗ 2024ರ ಮಾರ್ಚ್ ಒಳಗಾಗಿ ಕಾಮಗಾರಿ ಮುಗಿಸಲು ಕೇಂದ್ರ ಸರ್ಕಾರ ಗುರಿ ನೀಡಿದೆ. ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅರ್ಚನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT