ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ; ಯುವ ಕೃಷಿಕರಿಗೆ ಪ್ರೇರಣೆಯಾದ ರುಕ್ಮಿಣಿ

Last Updated 2 ನವೆಂಬರ್ 2022, 6:49 IST
ಅಕ್ಷರ ಗಾತ್ರ

ಬಂಗಾರಪೇಟೆ: ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಮೂತನೂರು ಗ್ರಾಮದ ಪ್ರಗತಿಪರ ರೈತ ಮಹಿಳೆ ರುಕ್ಮಿಣಿ ವೆಂಕಟೇಶ್ ಯುವ ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ.

ಕೃಷಿ ಕ್ಷೇತ್ರದಲ್ಲಿನ ಅವರ ಸಾಧನೆ ಪರಿಗಣಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದೆ. ವರ್ಷಕ್ಕೆ 12 ರೇಷ್ಮೆ ಬೆಳೆ ತೆಗೆಯುತ್ತಿರುವ ಅವರು ಉತ್ತಮ ಗುಣಮಟ್ಟದ ಗೂಡು ಉತ್ಪಾದನೆಯಲ್ಲೂ ಸಾಧನೆ ಮಾಡಿದ್ದಾರೆ. ಜತೆಗೆ ರಾಗಿ, ಭತ್ತ, ಸೀಮೆ ಹಸು, ಕುರಿ, ಮೇಕೆ ಸಾಕಾಣಿಕೆಯಲ್ಲೂ ಲಾಭಗಳಿಸುತ್ತಿದ್ದಾರೆ.

8 ಎಕರೆ ಕೃಷಿ ಭೂಮಿಯ ಪೈಕಿ 3 ಎಕರೆಯಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿದೆ. 1.5 ಎಕರೆಯಲ್ಲಿ ಎಲೆತೋಟ ನಿರ್ವಹಣೆ, ಉಳಿದ ಭೂಮಿಯಲ್ಲಿ ರಾಗಿ, ಶೇಂಗಾ ಹಾಗೂ ಭತ್ತ ಬೆಳೆಯುತ್ತಾರೆ.

ಅವರದ್ದು 25 ಸದಸ್ಯರಿರುವ ಅವಿಭಕ್ತ ಕುಟುಂಬ. ಹಾಗಾಗಿ ಶ್ರಮಿಕರ ಸಮಸ್ಯೆಯಿಲ್ಲ. 6 ಜನರು ರೇಷ್ಮೆಗೆ ಮೀಸಲು. ನಾಲ್ಕು ಜನರು ಎಲೆತೋಟ ನೋಡಿಕೊಂಡರೆ, ಇನ್ನು ತಲಾ ಇಬ್ಬರಿಗೆ 5 ಕುರಿ ಪಟ್ಲಿ, 5 ಮೇಕೆ, ನಾಲ್ಕು ಸೀಮೆ ಹಸು, ದೇಸಿ ಎತ್ತು, ಹಸುಗಳ ನಿರ್ವಹಣೆಯ ಜವಾಬ್ದಾರಿ ಹಂಚಿಕೆಯಾಗಿದೆ. ಎಲ್ಲರೂ ಹೊಂದಾಣಿಕೆಯಿಂದ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದು, ವಾರ್ಷಿಕ ಸರಾಸರಿ ₹ 20 ಲಕ್ಷದಿಂದ ₹ 22 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಈ ಬಾರಿ 300 ಮೊಟ್ಟೆ ರೇಷ್ಮೆ ಸಾಕಾಣಿಕೆ ಮಾಡಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಕೆ.ಜಿ ರೇಷ್ಮೆಗೂಡಿಗೆ ₹ 766ರಂತೆ ಬೆಲೆ ದೊರೆತಿದೆ. ಕಳೆದ ತಿಂಗಳಲ್ಲಿ 220 ರೇಷ್ಮೆ ಮೊಟ್ಟೆಗೆ 238 ಕೆಜಿ ಇಳುವರಿ ತೆಗೆದ ಹೆಗ್ಗಳಿಕೆ ಅವರದು.

ಬಹುತೇಕ ಸಾವಯವ ಕೃಷಿಗೆ ಆದ್ಯತೆ ನೀಡಿದ್ದು, ರೇಷ್ಮೆಗೆ ಆರು ತಿಂಗಳಿಗೊಮ್ಮೆ ಎಕರೆಗೆ ನಾಲ್ಕೈದು ಟ್ರ್ಯಾಕ್ಟರ್ ತಿಪ್ಪೆಗೊಬ್ಬರ, ಹನಿ ನೀರಾವರಿ ಮೂಲಕ ಶೋಧಿಸಿದ ಜೀವಾಮೃತ ನೀಡಲಾಗುತ್ತಿದೆ. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ರುಕ್ಮಣಿ ಅವರ ಪತಿ ಎನ್. ವೆಂಕಟೇಶ್.

ರೇಷ್ಮೆಯನ್ನು 4*3 ಪದ್ಧತಿಯಲ್ಲಿ ನಾಟಿ ಮಾಡಿದ್ದು, ಸೊಪ್ಪು ಕಟಾವು ಮಾಡಿದ 15 ದಿನಕ್ಕೆ ಡಿಎಪಿ ರಾಸಾಯನಿಕ ಗೊಬ್ಬರ ಕೊಟ್ಟರೆ, ಅದಾದ 15 ದಿನಕ್ಕೆ ಜೀವಾಮೃತ ಮತ್ತು ಕಾಂಪೋಸ್ಟ್ ಗೊಬ್ಬರ ನೀಡುತ್ತಿರುವುದರಿಂದ ಸಮೃದ್ಧವಾಗಿ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತದೆ ಎನ್ನುವುದು ಅವರ ಅನುಭವದ ನುಡಿ.

ರೇಷ್ಮೆಯಲ್ಲಿನ ಅವರ ಅನುಭವ, ಸಾಧನೆ ಗುರುತಿಸಿದ ರೇಷ್ಮೆ ಇಲಾಖೆಯು ಅವರ ತೋಟದಲ್ಲಿಯೇ ರೈತ ಪಾಠ ಶಾಲಾ ತರಗತಿಗಳನ್ನು ನಡೆಸಿದೆ. ಎಲೆ ತೋಟದಲ್ಲಿ ಕೂಡ ಉತ್ತಮ ಫಸಲು ತೆಗೆಯುತ್ತಿರುವ ಅವರು ಹೆಚ್ಚು ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ ನಾಲ್ಕು ಮೂಟೆ ಎಲೆ ಕಟಾವು ಮಾಡಲಾಗುತ್ತಿದೆ.

‘ವ್ಯವಸಾಯ ಮಾಡಲು ಕೃಷಿ, ರೇಷ್ಮೆ ಇಲಾಖೆಯ ತಾಂತ್ರಿಕ ಸಲಹೆ ಅಗತ್ಯ. ಈ ನಿಟ್ಟಿನಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಎಸ್.ಎನ್. ಶ್ರೀನಿವಾಸ್ ಅವರ ಸಲಹೆ, ಸಹಕಾರದಿಂದ ಇಡೀ ಗ್ರಾಮದ ಚಿತ್ರಣವೇ ಬದಲಾಯಿತು’ ಎನ್ನುತ್ತಾರೆ ರುಕ್ಮಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT