ಮಂಗಳವಾರ, ಜೂನ್ 22, 2021
22 °C
ಕೆಜಿಎಫ್‌ನಲ್ಲಿ ಇಸ್ರೇಲ್‌ನ ಘಟಕ ಇಂದಿನಿಂದ ಕಾರ್ಯಾರಂಭ

ಕೆಜಿಎಫ್‌ನಲ್ಲಿ ಇಸ್ರೇಲ್‌ನ ಘಟಕ: ಪ್ರತಿ ನಿಮಿಷಕ್ಕೆ 500 ಲೀ. ಆಮ್ಲಜನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ‘ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಇಸ್ರೇಲಿನ ಆಮ್ಲಜನಕ ಉತ್ಪಾದನಾ ಘಟಕ ಮಂಗಳವಾರದಿಂದಲೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಇಸ್ರೇಲಿನಿಂದ ಬಂದ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಸ್ರೇಲ್ ದೇಶ ನೀಡಿದ ಘಟಕಗಳನ್ನು ವಾರಣಾಸಿ, ಎಚ್.ಡಿ. ಕೋಟೆ ಮತ್ತು ಕೆಜಿಎಫ್ ನಗರಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕೆಜಿಎಫ್‌ನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಈ ಘಟಕ ಚಾಲನೆ ಬಂದಿದೆ. ಘಟಕ ಕೊನೆ ಕ್ಷಣದಲ್ಲಿ ತುಮಕೂರಿಗೆ ವರ್ಗಾವಣೆಯಾಗಬೇಕಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಆರೋಗ್ಯ ಸಚಿವರು, ಜಿಲ್ಲಾಧಿಕಾರಿಗಳು ಎಲ್ಲರೂ ಶ್ರಮ ವಹಿಸಿದ್ದಾರೆ. ಆದ್ದರಿಂದ ವಿಮಾನದಲ್ಲಿ ತುರ್ತಾಗಿ ಇದನ್ನು ತರಿಸಿಕೊಂಡು ಕೂಡಲೇ ಚಾಲನೆಗೆ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಆಸ್ಪತ್ರೆಯಲ್ಲಿರುವ ಆಮ್ಲಜನಕ ಸಿಲಿಂಡರ್‌ ಗಳನ್ನು ಬಿಜಿಎಂಎಲ್ ಆಸ್ಪತ್ರೆಗೆ ಉಪಯೋಗಿಸಬಹುದು, ಇಲ್ಲವೇ ಇದೇ ಆಸ್ಪತ್ರೆಯಲ್ಲಿ ಹೆಚ್ಚುವರಿ ಕೋವಿಡ್ ವಾರ್ಡ್‌ಗಳನ್ನು ಸ್ಥಾಪಿಸಬಹುದು’ ಎಂದರು.

ಬಿಜಿಎಂಎಲ್ ಆಸ್ಪತ್ರೆ ಈ ವಾರದೊಳಗೆ ಕಾರ್ಯ ನಿರ್ವಹಿಸಲಿದೆ. ವಿವಿಧ ಕಡೆಗಳಲ್ಲಿ ಲಭ್ಯವಿರುವ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳು ಕೂಡ ಸೇವೆಯಲ್ಲಿ ಭಾಗವಹಿಸಲಿದ್ದಾರೆ. ಅತಿ ಶೀಘ್ರದಲ್ಲಿಯೇ ಆಮ್ಲಜನಕ ಕೊಳವೆಗಳನ್ನು ಅಳವಡಿಸಿ, ಆಮ್ಲಜನಕಯುಕ್ತ ವಾರ್ಡ್‌ಗಳನ್ನು ಕೂಡ ಪ್ರಾರಂಭಿಸಲಾಗುವುದು. ಈಗಾಗಲೇ 170 ಹಾಸಿಗೆಗಳು ಬಿಜಿಎಂಎಲ್ ಆಸ್ಪತ್ರೆಯಲ್ಲಿ ಸಿದ್ಧವಾಗಿದೆ ಎಂದು ಸಂಸದರು ತಿಳಿಸಿದರು.

ಬೆಮಲ್‌ನಿಂದ ಆಮ್ಲಜನಕ ಘಟಕ ಇನ್ನೂ ಬರಬೇಕಾಗಿದೆ. ಕೊಯಮತ್ತೂರಿನಲ್ಲಿ ಯಂತ್ರೋಪಕರಣ ಸಾಗಾಣಿಕೆಗೆ ಸಾಧ್ಯವಾಗದೆ ಸ್ಥಗಿತಗೊಂಡಿದ್ದರೆ, ಅದನ್ನು ನಮ್ಮ ಸ್ವಂತ ವೆಚ್ಚದಲ್ಲಿ ತರಿಸಿಕೊಳ್ಳುತ್ತೇವೆ. ಪ್ರಸ್ತುತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಆಂಬುಲೆನ್ಸ್ ಮಾತ್ರ ಇದ್ದು, ಬೆಮಲ್ ನಿಂದ ಮತ್ತೊಂದು ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ಕೊಡಬೇಕು ಎಂದು ಬೆಮಲ್ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಅವರಿಗೆ ಮನವಿ ಮಾಡಿದರು.

ಈಗಾಗಲೇ ಶವಸಾಗಾಣಿಕೆ ವಾಹನವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಉಪಯೋಗಕ್ಕೆ ನೀಡಲಾಗಿದೆ. ಆಂಬುಲೆನ್ಸ್ ನೀಡುವ ಬಗ್ಗೆ ವಿಚಾರ ಮಾಡುವುದಾಗಿ ಶಂಕರ್ ಹೇಳಿದರು.

ಮಾಜಿ ಶಾಸಕ ವೈ.ಸಂಪಂಗಿ ಏಳು ಅಮ್ಲಜನಕ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ದಾನವಾಗಿ ನೀಡಿದರು. ನಗರ ಘಟಕದ ಅಧ್ಯಕ್ಷ ಕಮಲನಾಥನ್, ರವಿಕುಮಾರ್, ಸೀನಿ, ಪಾಂಡ್ಯನ್, ಗಾಂಧಿ, ರಾಮಕೃಷ್ಣ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು