ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಬಡ್ಡಿಯಲ್ಲಿ ಗ್ರಾಮೀಣ ಪ್ರತಿಭೆಯ ಮೋಡಿ: ರಾಷ್ಟ್ರ್ರಮಟ್ಟದ ಪಂದ್ಯದಲ್ಲಿ ಪ್ರಶಸ್ತಿ

ರಾಷ್ಟ್ರ್ರಮಟ್ಟದ ಪಂದ್ಯದಲ್ಲಿ ಪ್ರಶಸ್ತಿ l ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟು
Published : 1 ಏಪ್ರಿಲ್ 2023, 6:45 IST
ಫಾಲೋ ಮಾಡಿ
Comments

ನಂಗಲಿ(ಮುಳಬಾಗಿಲು): ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಾಲ್ಲೂಕಿನ ಬೇವಹಳ್ಳಿಯ ಯುವ ಕ್ರೀಡಾಪಟು ಬಿ.ಎಸ್.ಪ್ರಿಯ ಕಬಡ್ಡಿಯಲ್ಲಿ ಭರವಸೆ ಮೂಡಿಸಿದ್ದಾರೆ.

ರೈತರಾದ ಸದಾನಂದ ಮತ್ತು ಉಷಾ ದಂಪತಿಗಳ ಹಿರಿಯ ಮಗಳು ಬಿ.ಎಸ್.ಪ್ರಿಯಾ ತಂದೆ ತಾಯಿಯರಿಗೆ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಾ, ಮತ್ತೊಂದು ಕಡೆ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂಬ್ಲಿಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ಎಸ್.ಪ್ರಿಯ ಎನ್.ವಡ್ಡಹಳ್ಳಿ ನಾರಾಯಣ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಪ್ರಿಯ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಅತ್ಯುತ್ತಮ ರೈಡರ್ ಎಂಬ ಖ್ಯಾತಿ ಗಳಿಸಿದ್ದಾರೆ.

ಪ್ರಾಥಮಿಕ ಶಾಲಾ ಹಂತದಿಂದಲೇ ಕಬಡ್ಡಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಪ್ರಿಯ ಶಾಲೆ ಹಂತದ ಕ್ರೀಡಾಕೂಟದಲ್ಲಿ ಉತ್ತಮ ಕಬಡ್ಡಿ ಪಟುವಾಗಿ ಹೊರ ಹೊಮ್ಮಿದರು. ಪ್ರಾಥಾಮಿಕ, ಪ್ರೌಢಶಾಲೆ ಹಂತದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ತಂಡ ಗೆಲ್ಲಲು ಪ್ರಮುಖ ಕಾರಣರಾಗುತ್ತಿದ್ದರು. ಇದನ್ನು ಗಮನಿಸಿ ಎನ್.ವಡ್ಡಹಳ್ಳಿ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟ್ ಅವರ ತರಬೇತಿ ನೀಡಿದರು. ಇದರಿಂದ ಕಬಡ್ಡಿಯಲ್ಲಿ ಮತ್ತಷ್ಟು ಆಟದ ಚಾಕ ಚಕ್ಯತೆ ಮೈಗೂಡಿಸಿಕೊಂಡು ಉತ್ತಮ ರೈಡರ್ ಆಗಿ ಬೆಳೆಯುತ್ತಿದ್ದಾರೆ.

ಎನ್.ವಡ್ಡಹಳ್ಳಿ ನಾರಾಯಣ ಕಾಲೇಜಿನಲ್ಲಿ ಪ್ರಥಮ ಪಿಯು ದಾಖಲಾದ ಬಳಿಕ 2016-17ನೇ ಅವಧಿಯಲ್ಲಿ ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಅಮೇಚೂರ್ ಕಬಡ್ಡಿ ಕ್ರೀಡಾ ಕೂಟದಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಉತ್ತಮ ರೈಡರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2018 -19ರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ರಾಜ್ಯದ ಪರ ಆಡಿ, ಅತ್ಯುತ್ತಮ ರೈಡರ್ ಎಂಬ ಪ್ರಶಸ್ತಿ ಪಡೆದಿದ್ದಾರೆ.‌

ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗಿ: 2017-18ರಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್‌ನಿಂದ ನಡೆದ ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ವರ್ಷ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಮಿನಿ ಒಲಂಪಿಕ್ಸ್ ನಲ್ಲಿ ತಾಲ್ಲೂಕಿನಿಂದ ಆಯ್ಕೆಯಾದ ಮೊದಲ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 63ಕ್ಕೂ ಹೆಚ್ಚು ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇನ್ನಷ್ಟು ಸಾಧನೆ ಮಾಡುವ ಆಸೆ: ‘ನನ್ನ ಹಳ್ಳಿಯಲ್ಲಿ ಪುರುಷರು ಆಡುತ್ತಿದ್ದ ಕಬಡ್ಡಿಯನ್ನು ನೋಡಿ, ನಾನೂ ಕಬಡ್ಡಿ ಆಟ ಆಗಬೇಕೆಂದು ನಿರ್ಧರಿಸಿ ಶಾಲೆಗಳಲ್ಲಿ ಕಬಡ್ಡಿ ಆಡಲು ಪ್ರಾರಂಭಿಸಿದೆ. ನಂತರ ಒಂದೊದೇ ಕ್ರೀಡಾ ಕೂಟಗಳಲ್ಲಿ ಕಬಡ್ಡಿಯಲ್ಲಿ ಉತ್ತಮ ಆಟಗಾರ್ತಿಯಾಗಿ ಆಡುತ್ತಿದ್ದೆ, ಪ್ರಶಸ್ತಿಗಳು ಬರುತ್ತಿದ್ದವು. ಇದು ಕಬಡ್ಡಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಅಂತರರಾಷ್ಟ್ರೀಯ ಕಬ್ಬಡಿ ಪಂದ್ಯವಳಿಯಲ್ಲೂ ಭಾಗವಹಿಸಿವ ಆಸೆ ಇದೆ. ಆದರೆ ನಮ್ಮದು ರೈತ ಕುಟುಂಬ. ನನ್ನಗೆ ಕೋಚಿಂಗ್‌ ಮತ್ತು ಸಹಕಾರ ಕಲ್ಪಿಸಿದರೆ ಇನ್ನುಷ್ಟು ಸಾಧನೆ ಮಾಡುತ್ತೇನೆ’ ಎನ್ನುತ್ತಾರೆ ಪ್ರಿಯ.

ಪ್ರೋತ್ಸಾಹ ಅಗತ್ಯ: ಕಬಡ್ಡಿಯಲ್ಲಿ ಭರವಸೆ ಮೂಡಿಸಿರುವ ಗ್ರಾಮೀಣ ಪ್ರತಿಭೆ ಪ್ರಿಯಗೆ ಇನ್ನಷ್ಟು ತರಬೇತಿ ಅಗತ್ಯವಿದೆ. ಪ್ರಿಯ ಅವರಿಗೆ ತರಬೇತಿ ಕೊಡಿಸುವ ಸಾಮರ್ಥ್ಯ ಅವರ ಕುಟುಂಬಕ್ಕಿಲ್ಲ. ಈ ಯುವ ಪ್ರತಿಭೆಗೆ ತರಬೇತಿ, ಸಹಕಾರ ಮತ್ತು ಸಹಕಾರ ಕಲ್ಪಿಸಿದರೆ ದೊಡ್ಡ ಕ್ರೀಡಾ ಪಟುವಾಗಿ ಬೆಳೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT