ಬುಧವಾರ, ಸೆಪ್ಟೆಂಬರ್ 22, 2021
29 °C
ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಿ: ಕಾರ್ಯಕರ್ತರಿಗೆ ಕಿವಿಮಾತು

ಜೆಡಿಎಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು: ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ಪಕ್ಷದ ಕಾರ್ಯಕರ್ತರ ಗುರಿಯಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ಪಕ್ಷದ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಶಕ್ತಿ ತುಂಬಬೇಕು’ ಎಂದು ತಿಳಿಸಿದರು.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಗುರುತಿಸಿ ವಿಶ್ವಾಸವಿಟ್ಟು ವಿಧಾನ ಪರಿಷತ್ ಸದಸ್ಯನಾಗಿ ಮಾಡುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಶಕ್ತಿ ಕೊಟ್ಟಿದ್ದಾರೆ. ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ’ ಎಂದರು.

‘ಜೆಡಿಎಸ್‌ನಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಬೆಳವಣಿಗೆಗೆ ಮತ್ತು ವರ್ಚಸ್ಸು ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮಾಂತರ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ವರಿಷ್ಠರು ನನ್ನನ್ನು ಸಂಚಾಲಕನಾಗಿ ನೇಮಿಸಿದ್ದಾರೆ. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಘಟಕ ರಚನೆ ಮಾಡಿ ಮುಂದಿನ ಚುನಾವಣೆಗೆ ಸಿದ್ಧರಾಗಬೇಕಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್‌.ಚೌಡರೆಡ್ಡಿ ಎಂದು ಸಲಹೆ ನೀಡಿದರು.

‘ಮುಂದಿನ ಚುನಾವಣೆಯಲ್ಲಿ ಪಕ್ಷದ ನಡವಳಿಕೆ ಮತ್ತು ಪ್ರಣಾಳಿಕೆಯನ್ನು ಜನರಿಗೆ ತಿಳಿಸುವ ಮೂಲಕ ಅಧಿಕಾರ ಹಿಡಿಯಬೇಕು. ಜಿಲ್ಲೆಯ ಶ್ರೀನಿವಾಸಪುರ ಮತ್ತು ಮುಳಬಾಗಿಲು ಕ್ಷೇತ್ರ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ತಾಲ್ಲೂಕು ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿ ಪಕ್ಷ ಸಂಘಟಿಸಬೇಕು’ ಎಂದು ಸೂಚಿಸಿದರು.

ಭಿನ್ನಾಭಿಪ್ರಾಯ ಮರೆಯಿರಿ: ‘ಸಂಘಟನೆ ದೃಷ್ಟಿಯಿಂದ ಪಕ್ಷದ ಮುಖಂಡರು ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದ ನಡಿಗೆ ಹಳ್ಳಿ ಕಡೆಗೆ ಎಂಬ ಉದ್ದೇಶದೊಂದಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಹೋರಾಟ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು’ ಎಂದು ಜೆಡಿಎಸ್‌ ಮುಖಂಡ ರಾಜೇಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಂಜುಂಡಪ್ಪ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ಮುಖಂಡರಾದ ದಯಾನಂದ್, ಆನಂದ್, ರಾಮು, ಮಲ್ಲೇಶ್‌ಬಾಬು, ನಟರಾಜ್, ಮಂಜು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು