ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ ವ್ಯಾಲಿ: ನೀರಿನ ಹರಿವು ಕಡಿಮೆ

ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ವಿರುದ್ಧ ಶಾಸಕ ರಮೇಶ್‌ಕುಮಾರ್‌ ಅಸಮಾಧಾನ
Last Updated 6 ಜುಲೈ 2021, 14:04 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ೪೦೦ ಎಂಎಲ್‌ಡಿ ನೀರು ಹರಿಸಲು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿರ್ಧಾರವಾಗಿದೆ. ಆದರೆ, 310 ಎಎಂಲ್‌ಡಿ ಮಾತ್ರ ಹರಿಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಅವರಿಗೆ ಏನು ಸಮಸ್ಯೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಕೋಲಾರ ಅಮಾನಿಕೆರೆ ಅಭಿವೃದ್ಧಿ ಮತ್ತು ಸುಂದರೀಕರಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ ಜಿಲ್ಲೆಯ 126 ಕೆರೆ ತುಂಬಿಸುವ ಗುರಿಯಿತ್ತು. ಆದರೆ, ನಿಗದಿತ ಪ್ರಮಾಣದಲ್ಲಿ ನೀರು ಹರಿಸದ ಕಾರಣ ಈವರೆಗೆ 80 ಕೆರೆ ಮಾತ್ರ ತುಂಬಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆಲವರು ಅನಧಿಕೃತವಾಗಿ ಕೆ.ಸಿ ವ್ಯಾಲಿ ನೀರು ಬಳಕೆ ಮಾಡುತ್ತಿದ್ದಾರೆ. ಆರಂಭದಲ್ಲೇ ನೀರು ಕಳವಾದರೆ ಯೋಜನೆಯ ಕೊನೆಯಲ್ಲಿರುವ ಮುಳಬಾಗಿಲು ಹಾಗೂ ಕೆಜಿಎಫ್ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವುದು ಹೇಗೆ? ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ಣ ಪ್ರಮಾಣದಲ್ಲಿ ಜಿಲ್ಲೆಗೆ ನೀರು ಹರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಮನವಿ ಮಾಡಿದರು.

‘ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ಮುಲಾಜಿಲ್ಲದೆ ತೆರವು ಮಾಡಿಸಿ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾದರೂ ಅವರ ಪರ ನಿಲ್ಲುವುದಿಲ್ಲ. ಯರಗೋಳ್ ಯೋಜನೆ ಕಾಮಗಾರಿ ಸ್ಥಗಿತಗೊಂಡಿತ್ತು. ಯೋಜನೆಗೆ ಎದುರಾಗಿದ್ದ ತಾಂತ್ರಿಕ ದೋಷ ಪರಿಹರಿಸಿದ್ದು, ಕಾಮಗಾರಿ ಈಗ ಪೂರ್ಣಗೊಂಡಿದೆ. ಶೀಘ್ರವೇ ಯೋಜನೆ ಲೋಕಾರ್ಪಣೆ ಮಾಡಿ’ ಎಂದು ಕೋರಿದರು.

ಕಾಮಗಾರಿ ವಿಳಂಬ: ‘ಎತ್ತಿನಹೊಳೆ ಕಾಮಗಾರಿ ಸಾಕಷ್ಟು ವಿಳಂಬವಾಗುತ್ತಿದೆ. ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಯ 8 ಕಡೆ ಅಣೆಕಟ್ಟು ಮತ್ತು ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಆದರೆ, ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣ ಕಾರ್ಯ ಬಾಕಿಯಿದೆ. ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವ ಕಾರಣ ಜಲಾಶಯ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಹೇಳಿದರು.

‘ಯೋಜನೆಗೆ ಭೂಮಿ ಬಿಟ್ಟು ಕೊಟ್ಟವರಿಗೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಎಲ್ಲರಿಗೂ ಸಮನಾಗಿ ಭೂಪರಿಹಾರ ನೀಡಲು ಸದನದಲ್ಲಿ ನಿರ್ಧರಿಸಲಾಗಿದೆ. ಭೂಸ್ವಾಧೀನಕ್ಕೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಯಿಂದಲೂ ಅನುಮತಿ ಸಿಕ್ಕಿದೆ. ತ್ವರಿತ ನಿರ್ಣಯ ಕೈಗೊಂಡು ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಕೋಲಾರಕ್ಕೆ ಅನ್ಯಾಯ: ‘ಎತ್ತಿನಹೊಳೆ ಯೋಜನೆಯಲ್ಲಿ ಹೆಸರಿಗಷ್ಟೇ ಕೋಲಾರ ಜಿಲ್ಲೆಯಿದೆ. ಆದರೆ, ಯೋಜನೆ ನೀರನ್ನು ಹಾಸನ, ಚಿಕ್ಕಮಗಳೂರು, ತುಮಕೂರು ಜಿಲ್ಲೆಯವರೇ ಬೇಗ ಬಳಸಿಕೊಳ್ಳುವಂತೆ ಕಾಣುತ್ತಿದೆ. ಆ ಭಾಗದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿನ ಜನರಿಗೆ ಆನುಕೂಲವಾಗಿದೆ. ಆದರೆ, ಕೋಲಾರ ಭಾಗಕ್ಕೆ ಅನ್ಯಾಯವಾಗುತ್ತಿದೆ’ ಎಂದು ಶಾಸಕ ಕೃಷ್ಣಬೈರೇಗೌಡ ದೂರಿದರು.

‘ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳಿಲ್ಲ. ಸರ್ಕಾರ ಜಿಲ್ಲೆಯ ಕೊರತೆ ನೀಗಿಸಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಶೀಘ್ರವೇ ಭೂಸ್ವಾಧೀನ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ಸಭೆ ಕರೆಯಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT