ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಸೋತಿದ್ದರೂ ರಾಜಕೀಯದಲ್ಲಿ ಮುಂದುವರಿಯುತ್ತಿದ್ದೆ: ಮಲ್ಲೇಶ್‌ ಬಾಬು

ಕೆ.ಎಚ್‌.ಮುನಿಯಪ್ಪ ಬೆಂಬಲಿಗರ ನೆರವು ಕೋರಿದ್ದೆ: ಬಾಬು
Published 7 ಜೂನ್ 2024, 5:41 IST
Last Updated 7 ಜೂನ್ 2024, 5:41 IST
ಅಕ್ಷರ ಗಾತ್ರ

ಕೋಲಾರ: ‘ಅಕಸ್ಮಾತ್‌ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರೂ ನಾನು ರಾಜಕೀಯದಲ್ಲಿ ಮುಂದುವರಿಯುತ್ತಿದ್ದೆ. ಒಂದೆರಡು ಸೋಲಿಗೆ ಧೃತಿಗೆಡುವ ವ್ಯಕ್ತಿ ನಾನಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ದೇವೇಗೌಡರು, ಕುಮಾರಣ್ಣ ಸೇರಿದಂತೆ ಪಕ್ಷದ ಎಲ್ಲರೂ ಧೈರ್ಯ ತುಂಬುತ್ತಿದ್ದರು ಎಂಬ ಭರವಸೆ ನನಗಿತ್ತು…’ –ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಅವರನ್ನು ಸೋಲಿಸಿ ಮೊದಲ ಬಾರಿ ಸಂಸತ್‌ ಪ್ರವೇಶಿಸಲು ಸಜ್ಜಾಗಿರುವ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಅವರ ಮಾತಿದು.

ಅವರು 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ, ಕಾಂಗ್ರೆಸ್‌ನ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ಈ ಬಾರಿ ಸೋತಿದ್ದರೆ ರಾಜಕೀಯ ಜೀವನ ಅಂತ್ಯವಾಗುತಿತ್ತು ಎಂಬ ಮಾತು ಕೇಳಿ ಬರುತ್ತಿದ್ದವು.

‘ರಾಜಕೀಯ ಜೀವನ ಅಂತ್ಯವಾಗುತಿತ್ತು ಎಂದು ನಾನು ಭಾವಿಸುವುದಿಲ್ಲ. ಹಿಂದೆ ಬಂಗಾರಪೇಟೆ ಕ್ಷೇತ್ರದಲ್ಲಿ ಸೋತಿದ್ದರೂ 74 ಸಾವಿರ ಮತ ಲಭಿಸಿತ್ತು. ಅದೇ ಕ್ಷೇತ್ರದಲ್ಲಿ ಈಗ ಇನ್ನೂ ಹೆಚ್ಚಿನ ಮತ ಲಭಿಸಿವೆ. ಎರಡು ಬಾರಿ ಸೋತಿದ್ದ ಕಾರಣಕ್ಕೆ ಈ ಸಲ ನನಗೆ ಎಲ್ಲಾ ನಾಯಕರು ಹೆಚ್ಚಿನ ಬೆಂಬಲ ನೀಡಿದರು. ಅದು ನನಗೆ ಧೈರ್ಯ ತುಂಬಿತು’ ಎಂದರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ವೈಫಲ್ಯ, ಗೆಲುವಿನಲ್ಲಿ ತಾಯಿ ಪಾತ್ರ, ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ಸೇರಿದಂತೆ ಹಲವಾರು ವಿಚಾರ ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರ

ರಾಜ್ಯ ಕಾಂಗ್ರೆಸ್‌ ಸರ್ಕಾರ ಒಂದೇ ವರ್ಷದಲ್ಲಿ ಜನರ ವಿಶ್ವಾಸ ಕಳೆದುಕೊಂಡಿತೇ?

ಕಾಂಗ್ರೆಸ್‌ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಹೆಚ್ಚಿನ ಜನರಿಗೆ ತಲುಪುತ್ತಿಲ್ಲ. ಗೆದ್ದ ಮೇಲೆ ಅಲ್ಲ; ಬಹಳ ದಿನಗಳಿಂದಲೂ ನಾನು ಇದೇ ಮಾತು ಹೇಳುತ್ತಿದ್ದೇನೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಹೊರತುಪಡಿಸಿ ಇನ್ನುಳಿದ ನಾಲ್ಕು ಯೋಜನೆಗಳು ಎಲ್ಲರಿಗೂ ಸೇರುತ್ತಿಲ್ಲ. ಈ ಬಗ್ಗೆ ಜನರಿಗೆ ಅಸಮಾಧಾನ ಇದೆ. ಸರ್ಕಾರ ಮಾತ್ರ ತಪ್ಪು ಭಾವನೆ ಹೊಂದಿದೆ.

ಪ್ರ

ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಆ ಪಕ್ಷದ ಶಾಸಕರ ನಡುವಿನ ಮನಸ್ತಾಪ ನಿಮಗೆ ವರವಾಯಿತೇ?

ಇಂಥ ವಿಚಾರಗಳು ಖಂಡಿತ ನೆರವಾಗುತ್ತವೆ. ಯಾವುದೇ ಪಕ್ಷದ ಪ್ರಮುಖ ನಾಯಕರನ್ನು ಕಡೆಗಣಿಸಿದಾಗ ಅವರ ಬೆಂಬಲಿಗರು, ಅಭಿಮಾನಿಗಳು ಬೇಸತ್ತು ತಿರುಗಿ ಬೀಳುತ್ತಾರೆ. ನಾನು ಕೂಡ ಅವರ ಬೆಂಬಲಿಗರನ್ನು ಮಾತನಾಡಿಸಿ ನೆರವು ಕೋರಿದ್ದು ನಿಜ. ಆದರೆ, ಮುನಿಯಪ್ಪ ಜೊತೆ ಮಾತನಾಡಿರಲಿಲ್ಲ.

ಪ್ರ

ತಮ್ಮ ಗೆಲುವಿನಲ್ಲಿ ಹೆಚ್ಚು ಕೆಲಸ ಮಾಡಿದ್ದು ಜೆಡಿಎಸ್ ಕಾರ್ಯಕರ್ತರೇ ಅಥವಾ ಬಿಜೆಪಿ ಕಾರ್ಯಕರ್ತರೇ?

ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಲ್ಲವೆಂದರೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್‌, ಬಿಜೆಪಿ ಸಮನ್ವಯ ಸಮಿತಿ ಮಾಡಿದಾಗಿನಿಂದ ಹಿಡಿದು ಮತದಾನದವರೆಗೆ ಒಗ್ಗಟ್ಟಾಗಿ ಶ್ರಮಿಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿರುತ್ತೇನೆ.

ಪ್ರ

ತಮ್ಮ ಗೆಲುವಿನಲ್ಲಿ ತಾಯಿ ಮಂಗಮ್ಮ ಮುನಿಸ್ವಾಮಿ ಪಾತ್ರ ಎಷ್ಟಿದೆ?

ನನ್ನ ತಾಯಿ ರಾಜಕಾರಣ ಪ್ರವೇಶಿಸಿದಾಗಿನಿಂದ ಸಿದ್ಧಾಂತಕ್ಕೆ ಬದ್ಧರಾಗಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಬಂಗಾರಪೇಟೆ, ಕೋಲಾರ ಹಾಗೂ ಸ್ವಲ್ಪಮಟ್ಟಿಗೆ ಮುಳಬಾಗಿಲು ಕ್ಷೇತ್ರದವರಿಗೆ ಮಾತ್ರ ನಾನು ಯಾರೆಂದು ಗೊತ್ತಿತ್ತು. ತಾಯಿಗೆ ಎಲ್ಲಾ ಕ್ಷೇತ್ರಗಳ ಪರಿಚಯವಿತ್ತು. ಇಂಥವರ ಮಗ ಎಂದು ನನ್ನನ್ನು ಗುರುತಿಸುತ್ತಿದ್ದರು. ತಾಯಿ ಹಾಗೂ ತಂದೆ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿವೆ.

ಪ್ರ

ಕಾಂಗ್ರೆಸ್ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ನಿಮಗೆ ಬೆಂಬಲ ನೀಡುವ ವಿಶ್ವಾಸ ಇದೆಯೇ?

ಜೆಡಿಎಸ್‌ ಗೆಲ್ಲಲಿ, ಬಿಜೆಪಿ ಗೆಲ್ಲಲಿ, ಕಾಂಗ್ರೆಸ್‌ ಗೆಲ್ಲಲಿ ಜನರಿಗೆ ಕೆಲಸ ಮಾಡಿಕೊಡುವುದೇ ಎಲ್ಲರ ಉದ್ದೇಶ. ಚುನಾವಣೆ ನಡೆದಿದ್ದು ಯಾರಿಗೋಸ್ಕರ ಹೇಳಿ. ಅಭಿವೃದ್ಧಿ ವಿಚಾರ ಬಂದಾಗ ಪಕ್ಷಗಳನ್ನು ಆಚೆಗಿಟ್ಟು ಜನತೆಗೆ ಒಳ್ಳೆಯದು ಮಾಡಬೇಕು. ಬೆಂಬಲ ಸಿಗುವ ವಿಶ್ವಾಸವಿದೆ.

ಪ್ರ

ಕೋಲಾರ ಅಭಿವೃದ್ಧಿಗೆ ಆದ್ಯತೆಗಳು ಏನೇನು? 

ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆ ಜಾರಿ ನನ್ನ ಮೊದಲ ಆದ್ಯತೆ. ಕ್ಷೇತ್ರದ ಜೆಡಿಎಸ್‌ ಶಾಸಕರು ಸೇರಿದಂತೆ ಎಲ್ಲಾ ಮುಖಂಡರ ಗುರಿಯೂ ಅದೇ ಆಗಿದೆ. ಎಚ್‌.ಡಿ. ಕುಮಾರಸ್ವಾಮಿ ಸಚಿವರಾಗಬಹುದೆಂಬ ಚರ್ಚೆ ಇದೆ. ಅವರ ನೆರವಿನಿಂದ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುತ್ತೇವೆ

ಕಾಂಗ್ರೆಸ್‌ ಶಾಸಕರು ವಿಫಲರಾಗಿಲ್ಲ!

ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿಗೆ 6.20 ಲಕ್ಷ ಮತ ಬಂದಿವೆ. ಅದೇಗೆ ಆ ಪಕ್ಷದ ಶಾಸಕರು ವಿಫಲರಾಗಿದ್ದಾರೆ ಎನ್ನುತ್ತೀರಿ? ಅವರು ಅವರ ಕೆಲಸ ಮಾಡಿದ್ದಾರೆ. ಆದರೆ ಜೆಡಿಎಸ್‌ ಬಿಜೆಪಿ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂಬ ಕಾರಣಕ್ಕೆ ಎಚ್‌.ಡಿ. ಕುಮಾರಸ್ವಾಮಿ ಮೈತ್ರಿಗೆ ಮುಂದಾದರು. ಅದು ಫಲ ನೀಡಿದೆ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಐವರು ಶಾಸಕರು ಇದ್ದರೂ ಅವರ ಅಭ್ಯರ್ಥಿಗೆ ಸೋಲಾಗಿದೆ. ಆ ಶಾಸಕರು ವಿಫಲರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಮಲ್ಲೇಶ್‌ ಬಾಬು ಈ ರೀತಿ ಉತ್ತರಿಸಿದರು.

ತಂದೆ ಆಸೆ ಪೂರೈಸಿದ ಖುಷಿ

ಐಎಎಸ್‌ ಅಧಿಕಾರಿಯಾಗಿದ್ದ ನನ್ನ ತಂದೆ ಮುನಿಸ್ವಾಮಿ ನಿಧನರಾದಾಗ ನಾನು ಪಿಯು ಓದುತ್ತಿದ್ದೆ. ಆಗಲೇ ಅವರು ನಾನು ಮುಂದೊಂದು ದಿನ ಸಂಸದನಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ರಾಜಕೀಯ ರಂಗಕ್ಕೆ ಬರಬೇಕೆಂಬುದು ಅವರ ಇರಾದೆಯಾಗಿತ್ತು. 49ನೇ ವಯಸ್ಸಿನಲ್ಲೇ ಅವರು ತೀರಿ ಹೋದರು. ಕಾಕತಾಳೀಯವೆಂದರೆ ನನಗೆ ಈಗ 49 ವರ್ಷ. ಸಂಸದನಾಗಿ ಆಯ್ಕೆಯಾಗಿದ್ದೇನೆ. ಇದಕ್ಕೆ ತಂದೆಯವರ ಆಸೆ ಹಾಗೂ ಆಶೀರ್ವಾದವೇ ಕಾರಣ. ಅವರು ತೀರಿ ಹೋಗಿ 31 ವರ್ಷ ಉರುಳಿದವು. ಈಗಲೂ ಅವರ ಹೆಸರು ಚಿರಸ್ಥಾಯಿಯಾಗಿದೆ. ಜನರ ಅವರನ್ನು ಸ್ಮರಿಸುತ್ತಾರೆ.

ಭೋವಿ ಸಮುದಾಯದ ಏಕೈಕ ಸಂಸದ!

ಮಲ್ಲೇಶ್‌ ಬಾಬು ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರುವ ಭೋವಿ ಸಮುದಾಯದ ಏಕೈಕ ಸಂಸದ. ಹೀಗಾಗಿ ಜಾತಿವಾರು ಗಮನಿಸುವುದಾದರೆ ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನದ ಅವಕಾಶ ಸಿಗಬಹುದು ಎಂಬ ಚರ್ಚೆ ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಈ ವಿಚಾರ ಪಕ್ಷದ ಮುಖಂಡರಿಗೆ ಬಿಟ್ಟಿದ್ದು. ಸಂಸದನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಕೆಲಸ’ ಎಂದರು.

ಮಲ್ಲೇಶ್‌ ಬಾಬುಗೆ ಮೊದಲ ಜಯ

ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮದ ಎಂ.ಮಲ್ಲೇಶ್‌ ಬಾಬು ಎಂಬಿಎ ಪದವೀಧರ. ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಮುನಿಸ್ವಾಮಿ ಸಿ. ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಪುತ್ರನೂ ಆಗಿರುವ ಅವರು ಮೊದಲ ಬಾರಿ ಸಂಸತ್‌ ಪ್ರವೇಶಿಸುತ್ತಿದ್ದಾರೆ. ಎರಡು ವಿಧಾನಸಭೆ ಚುನಾವಣೆ ಸೇರಿದಂತೆ ಮೂರು ಚುನಾವಣೆಗಳಲ್ಲಿ ಅವರಿಗೆ ಲಭಿಸಿದ ಮೊದಲ ಯಶಸ್ಸು ಇದು. ತಾಯಿ ಮಂಗಮ್ಮ 2009ರಲ್ಲಿ ಬಿಜೆಪಿಯಿಂದ (2.39 ಲಕ್ಷ ಮತ) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ (3.21 ಲಕ್ಷ ಮತ) ವಿರುದ್ಧ ಪರಾಭವಗೊಂಡಿದ್ದರು.

ಪೋಷಕರ ಹೆಸರು ಉಳಿಸಿದ್ದೇನೆ ಕುಮಾರಣ್ಣ ದೇವೇಗೌಡರ ನಂಬಿಕೆ ಉಳಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್‌ ಎಷ್ಟು ಬಲಿಷ್ಠವಾಗಿದೆ ಎಂಬುದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಗೊತ್ತಾಗಿದೆ.
– ಎಂ.ಮಲ್ಲೇಶ್‌ ಬಾಬು, ಸಂಸದ ಕೋಲಾರ

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಫಲಿತಾಂಶ

ಗೆದ್ದವರು: ಎಂ.ಮಲ್ಲೇಶ್‌ ಬಾಬು ಪಕ್ಷ: ಜೆಡಿಎಸ್‌ ಪಡೆದ ಮತ: 691481

ಕಾಂಗ್ರೆಸ್‌ನ ಕೆ.ವಿ.ಗೌತಮ್‌ ಪಡೆದ ಮತ: 620093 ಗೆಲುವಿನ ಅಂತರ: 71388 (ಜೆಡಿಎಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT