ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ| ಪ್ರವಾಸಿ ತಾಣಗಳಿಗಿಲ್ಲ ಸೂಕ್ತ ಸಾರಿಗೆ

ಮುಳಬಾಗಿಲು ತಾಲ್ಲೂಕಿನ ಐತಿಹಾಸಿಕ ತಾಣಗಳಿಗಿಲ್ಲ ಬಸ್ ವ್ಯವಸ್ಥೆ
Published 3 ಜೂನ್ 2024, 8:19 IST
Last Updated 3 ಜೂನ್ 2024, 8:19 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನಲ್ಲಿ ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳಿದ್ದ, ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈ ಪ್ರವಾಸಿತಾಣಗಳಿಗೆ ಸಮಪರ್ಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಪ್ರವಾಸೋದ್ಯಮಕ್ಕೆ ತೊಡಕಾಗಿದೆ.

ರಾಜ್ಯದ ರಾಜಕಾರಣಿಗಳ ಇಷ್ಟದೈವ ತಾಲ್ಲೂಕಿನ ಕುರುಡುಮಲೆಯ ವಿನಾಯಕ ದೇವಾಲಯ, ರಾಮಾಯಣದಲ್ಲಿ ಸೀತೆ ವನವಾಸ ಮಾಡಿದರೆಂಬ ಪ್ರತೀತಿ ಇರುವ ಆವಣಿ ರಾಮಲಿಂಗೇಶ್ವರ ದೇವಾಲಯ ಹಾಗೂ ಸೀತಮ್ಮನ ಬೆಟ್ಟ, ಐತಿಹಾಸಿಕ ವಿರೂಪಾಕ್ಷಿಯ ವಿರೂಪಾಕ್ಷೇಶ್ವರ, ಕುರುಕ್ಷೇತ್ರ ಯುದ್ಧದಲ್ಲಿ ಗೆಲುವನ್ನು ಪಡೆದ ಸಂಕೇತವಾಗಿ ಅರ್ಜುನ ಪ್ರತಿಷ್ಠಾಪನೆ ಮಾಡಿದಾನೆಂದು ಹೇಳಲಾಗುವ ಮುಳಬಾಗಿಲಿನ ಆಂಜನೇಯ ಸ್ವಾಮಿ ದೇವಾಲಯ, ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಭೇಟಿ ನೀಡುತ್ತಿದ್ದ ಎನ್ನಲಾದ ಹೈದರ್ ವಲ್ಲಿ ದರ್ಗಾ, ಪಾದರಾಜ ಮಠ ಹಾಗೂ ನರಸಿಂಹ ತೀರ್ಥರ ಕ್ಷೇತ್ರ ಹೀಗೆ ನಾನಾ ಐತಿಹಾಸಿಕ ಕ್ಷೇತ್ರಗಳಿವೆ.

ಆದರೆ, ಈ ಸ್ಥಳಗಳಿಗೆ ತೆರಳಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದ ಸಾಮಾನ್ಯ ಬಸ್‌ ಹಾಗೂ ಆಟೊಗಳಿಗೆ ಕಾಯುವ ಸ್ಥಿತಿ ಇದೆ. ಹೀಗಾಗಿ ಪ್ರತ್ಯೇಕ ಪ್ರವಾಸಿ ಬಸ್‌ಗಳನ್ನು ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂಬುದು ಈ ಭಾಗದ ಜನರ ದೀರ್ಘ ಕಾಲದ ಬೇಡಿಕೆಯಾಗಿದೆ.

ರಾಜಕಾರಣಿಗಳ ಆರಾಧ್ಯ ದೈವ:

ರಾಜ್ಯದಲ್ಲಿ ಯಾವುದೇ ಚುನಾವಣೆ ಬಂದರೂ ರಾಜ್ಯದ ಮೂಲೆ ಮೂಲೆಗಳಿಂದ ರಾಜಕಾರಣಿಗಳು ಬಂದು ರಾಜ್ಯದ ದೇವ ಮೂಲೆಯಲ್ಲಿ ಇರುವ ಕುರುಡುಮಲೆಯ ವಿನಾಯಕನಿಗೆ ಪೂಜೆ ಮಾಡಿದರೆ ಗೆಲುವು ಖಚಿತ ಎಂಬುವುದು ನಂಬಿಕೆ. ಹೀಗಾಗಿ ಯಾವುದೇ ಚುನಾವಣೆ ಬಂದರೂ ಕುರುಡುಮಲೆಯಲ್ಲಿ ರಾಜಕಾರಣಿಗಳ ದಂಡೇ ಬಂದು ಹೋಗುತ್ತದೆ. ಆದರೆ ಸ್ವಂತ ಕಾರುಗಳು ಹಾಗೂ ಇನ್ನಿತರೆ ಸಾರಿಗೆ ಅನುಕೂಲ ಇರುವವರು ಬಂದು ಹೋದರೆ ಕೆಲವರು ಬಸ್ಸುಗಳಿಗಾಗಿ ಕಾಯುವ ಸ್ಥಿತಿ ಇರುತ್ತದೆ.ಇದರಿಂದ ಆಯಾ ಮಾರ್ಗಕ್ಕೆ ಸಮಯಕ್ಕೆ ಸಂಚರಿಸುವ ಬಸ್ಸುಗಳಲ್ಲಿ ಸ್ಥಳೀಯ ಪ್ರಯಾಣಿಕರ ಜೊತೆಯಲ್ಲಿ ಪ್ರವಾಸಿಗರೂ ಹೋಗಬೇಕಾದ ಸ್ಥಿತಿ ಇದೆ.

ಹೀಗಾಗಿ ಪ್ರವಾಸಿಗರಿಗೆಂತಲೇ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಅಥವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವತಿಯಿಂದಲೇ ಪ್ರತ್ಯೇಕ ಬಸ್ಸುಗಳನ್ನು ಹಾಕಿದರೆ ಪ್ರವಾಸಿಗರಿಗೆ ಅನುಕೂಲವಾಗುವ ಜೊತೆಗೆ ಪ್ರವಾಸಿ ಸ್ಥಳಗಳೂ ಅಭಿವೃದ್ಧಿಯಾಗಲಿವೆ ಎನ್ನುವುದು ಜನರ ಅಭಿಪ್ರಾಯ.

ತಾಲ್ಲೂಕಿನ ಆವಣಿ, ವಿರೂಪಾಕ್ಷಿ ದೇವಾಲಯಗಳಿಗೆ ಬೆರಳೆಣಿಕೆಯಷ್ಟು ಬಸ್‌ಗಳಿವೆ. ಹಾಗಾಗಿ, ಪ್ರವಾಸಿಗರು ಅನಿವಾರ್ಯವಾಗಿ ಆಟೊರಿಕ್ಷಾಗಳ ಮೊರೆ ಹೋಗಬೇಕಾದ ಸ್ಥಿತಿ ಇದೆ. ನಿತ್ಯ ಸಂಚರಿಸುವ ಬಸ್ಸುಗಳು ಹಾಗೂ ಆಟೋಗಳು ಬಾರದೆ ಇದ್ದಲ್ಲಿ ಮುಳಬಾಗಿಲು ನಗರದಿಂದ ಪ್ರತ್ಯೇಕ ಆಟೋಗಳಿಗೆ ನೂರಾರು ರೂಪಾಯಿ ತೆತ್ತು ಈ ತಾಣಗಳಿಗೆ ಹೋಗಬೇಕಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಆಟೋಗಳು ಒಂದಕ್ಕೆ ಎರಡರಷ್ಟು ಹಣ ನೀಡಬೇಕಾಗಿರುತ್ತದೆ.

ತಾಲ್ಲೂಕಿನ ಆವಣಿ ಪೌರಾಣಿಕವಾಗಿ ಮಹತ್ವ ಪಡೆದಿದ್ದು ವರ್ಷದಲ್ಲಿ ರಾಮ ನವಮಿಯಂದು ಬ್ರಹ್ಮ ರಥೋತ್ಸವ, ಹಾಯ್ ಭಾರೀ ದನಗಳ ಜಾತ್ರೆ ನಡೆಯಲಿದ್ದು ವಿವಿಧ ರಾಜ್ಯಗಳಿಂದ ಜನ ಆವಣಿಗೆ ಭೇಟಿ ನೀಡುತ್ತಾರೆ. ಲಕ್ಷಾಂತರ ಮಂದಿ ಸೇರುವ ಜಾತ್ರೆಯ ಸಮಯದಲ್ಲಿ ಮಾತ್ರ ತಾಲ್ಲೂಕು ಆಡಳಿತದ ವತಿಯಿಂದ ಪ್ರತ್ಯೇಕ ಬಸ್ಸುಗಳ ವ್ಯವಸ್ಥೆ ಮಾಡಿ ಕೋಲಾರ ಜಿಲ್ಲಾ ಕೇಂದ್ರ ಹಾಗೂ ಮುಳಬಾಗಿಲು ನಗರದಿಂದ ಮೂರು ದಿನಗಳ ಕಾಲ ವಿಶೇಷವಾದ ಸಂಚಾರ ಇರುತ್ತದೆ. ಇದೇ ರೀತಿಯಲ್ಲಿ ವರ್ಷದ ಉದ್ದಕ್ಕೂ ಪ್ರತ್ಯೇಕ ಸಾರಿಗೆ ಒದಗಿಸಿದರೆ ಸದಾಕಾಲ ಪ್ರವಾಸಿಗರಿಗೆ ಸೌಲಭ್ಯ ನೀಡಿದಂತಾಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ನಗರದಲ್ಲಿನ ಕೆಜಿಎಫ್ ರಸ್ತೆಯಲ್ಲಿ ಹೈದರ್ ವಲ್ಲಿ ದರ್ಗಾ, ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸಿನಲ್ಲಿ ನರಸಿಂಹ ತೀರ್ಥ ಹಾಗೂ ನ್ಯಾಯಾಲಯಗಳ ಸಂಕೀರ್ಣದ ಬಳಿ ಪಾದರಾಜ ಮಠ ಇದ್ದು ನಗರದಿಂದ ಸಂಚರಿಸುವ ಯಾವುದೇ ಬಸ್ಸುಗಳು ಈ ಸ್ಥಳಗಳಲ್ಲಿ ನಿಲ್ಲಿಸುವುದಿಲ್ಲ. ಇದರಿಂದ ಪ್ರವಾಸಿಗರು ಕಷ್ಟ ಪಡಬೇಕಾಗಿದ್ದು ತಾತ್ಕಾಲಿಕವಾಗಿ ನಗರ ಸಾರಿಗೆ ಏರ್ಪಾಡು ಮಾಡಬೇಕಿದೆ.

ತಾಲ್ಲೂಕಿಗೆ ಹೊಂದಿಕೊಂಡಂತೆ ಕೆಜಿಎಫ್ ತಾಲ್ಲೂಕಿನ ಕೋಟಿ ಲಿಂಗೇಶ್ವರ, ಗುಟ್ಟಹಳ್ಳಿ ವೆಂಕಟರಮಣ ದೇವಾಲಯಗಳೂ ಸಹ ಇದ್ದು, ಇದೇ ಆವಣಿ ಹಾಗೂ ವಿರೂಪಾಕ್ಷಿ , ಹೈದರ್ ವಲ್ಲಿ ದರ್ಗಾದ ಕಡೆಯ ಬಸ್ಸುಗಳೇ ನೆರೆಯ ಪ್ರವಾಸಿ ಕಡೆಗಳ ಮಾರ್ಗಕ್ಕೂ ಹೋಗುತ್ತವೆ. ಇದರಿಂದ ಜಿಲ್ಲಾ ಕೇಂದ್ರದಿಂದ ಸಾರಿಗೆ ಹಾಗೂ ಪ್ರವಾಸಿ ಇಲಾಖೆ ಪ್ರವಾಸಿ ಸಾರಿಗೆಯನ್ನು ಏರ್ಪಾಡು ಮಾಡಿದರೆ ಅನುಕೂಲವಾಗಲಿದೆ.

ಕುರುಡುಮಲೆಯ ವಿನಾಯಕ
ಕುರುಡುಮಲೆಯ ವಿನಾಯಕ

ಮುಳಬಾಗಿಲು ನಗರ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿದ್ದು ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಆದರೆ ನಗರದಿಂದ ಪ್ರವಾಸಿ ಸ್ಥಳಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಈ ಸ್ಥಳಗಳಿಗೆ ಪ್ರವಾಸಿ ಬಸ್ ಸೌಕರ್ಯ ಕಲ್ಪಿಸಿದರೆ ತಾಲ್ಲೂಕು ಮತ್ತಷ್ಟು ಅಭಿವೃದ್ಧಿಯಾಗಲಿದೆ.

–ಶಿವಪ್ಪ ಪ್ರವಾಸಿಗ ಕುರುಡುಮಲೆ

ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವ ಕುರಿತು ಈ ಹಿಂದಿನ ಶಾಸಕರು ಹೇಳಿದ್ದರು. ಆದರೆ ಇದುವರೆಗೂ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಪ್ರವಾಸಿ ಸಾರಿಗೆ ಕುರಿತು ಕ್ರಮ ಕೈಗೊಳ್ಳಲಿ

–ನಳಿನಿ ಮುಳಬಾಗಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT