ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ರೈತನ ಕೈ ಹಿಡಿದ ಸಾಮೂಹಿಕ ಕೃಷಿ ಪದ್ಧತಿ

Published 21 ಫೆಬ್ರುವರಿ 2024, 6:37 IST
Last Updated 21 ಫೆಬ್ರುವರಿ 2024, 6:37 IST
ಅಕ್ಷರ ಗಾತ್ರ

ಮುಳಬಾಗಿಲು: ಕೃಷಿ ಎಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ತಾಲ್ಲೂಕಿನ ನಂಗಲಿ ಗ್ರಾಮದ ರೈತ ಕೆ. ವೇಣುಗೊಪಾಲ ರೆಡ್ಡಿ ಸಾಮೂಹಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ತುಂಡು ಬೇಸಾಯ ಪದ್ಧತಿ ಅನುಸರಿಸಿ ಲಕ್ಷಾಂತರ ರೂಪಾಯಿ ಲಾಭ ಪಡೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ವ್ಯಾವಹಾರಿಕ ಕ್ಷೇತ್ರದಲ್ಲಿ ಇರುವ ಹೊರತಾಗಿಯೂ, ಕೆ. ವೇಣುಗೋಪಾಲ ರೆಡ್ಡಿ ಅವರು ಕೃಷಿಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡು ತಮ್ಮ ಮೂರು ಎಕರೆ ಜಮೀನಿನಲ್ಲಿ ತುಂಡು ಬೇಸಾಯ ಪದ್ಧತಿ ಮೂಲಕ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಬೆಳೆಯಲ್ಲಿ ನಷ್ಟವಾದರೂ, ಮತ್ತೊಂದು ಬೆಳೆಯಲ್ಲಿ ಲಾಭ ಗಳಿಸುತ್ತಿದ್ದಾರೆ. ಈ ಮೂಲಕ ಕೃಷಿಯಲ್ಲಿಯೂ ವ್ಯಾವಹಾರಿಕ ಮಾದರಿಯಲ್ಲಿಯೇ ಲಾಭ ಗಳಿಸುವ ತಂತ್ರ ಬೆಳೆಸಿಕೊಂಡಿದ್ದಾರೆ.

ತಮ್ಮ ಮೂರು ಎಕರೆ ಜಮೀನಿನಲ್ಲಿ ಬಾಳೆ, ಬೆಂಡೆ, ಅಲಸಂದಿ, ಬೀನ್ಸ್, ಹೀರೇಕಾಯಿ, ನುಗ್ಗೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ. ಹೊಲಕ್ಕೆ ಕಾಲ ಕಾಲಕ್ಕೆ ಗೊಬ್ಬರ, ಔಷಧ ಹಾಗೂ ಡ್ರಿಪ್ ಪದ್ಧತಿಯಲ್ಲಿ ನೀರು ಹಾಯಿಸುತ್ತಾರೆ. ಇದರಿಂದಾಗಿ ಎಲ್ಲ ಬೆಳೆಗಳು ಯಥೇಚ್ಛ ಫಸಲಿನೊಂದಿಗೆ ಒಂದರ ಜೊತೆ ಮತ್ತೊಂದು ಪೈಪೋಟಿಗೆ ಇಳಿದಂತೆ ಸಮೃದ್ಧವಾಗಿ ಬೆಳೆದಿವೆ. ಇದನ್ನು ಕಂಡವರು ತಾವೂ ಸಹ ಈ ರೀತಿಯ ಬೇಸಾಯ ಪದ್ಧತಿ ಅನುಸರಿಸಬೇಕು ಎಂದು ಅನ್ನಿಸದೆ ಇರದು. 

ಎಲ್ಲ ಬೆಳೆಗಳನ್ನು ಸಾಲು ಪದ್ಧತಿಯಲ್ಲಿ ಬೆಳೆಯಲಾಗಿದ್ದು, ಸುಮಾರು ಎಂಟರಿಂದ ಒಂಬತ್ತು ಅಡಿಗಳಷ್ಟು ಎತ್ತರಕ್ಕೆ ಬೆಳೆದು ನಿಂತಿವೆ. ಯಾವುದೇ ಕಾರಣಕ್ಕೂ ಗಾಳಿಗೆ ಬೀಳಬಾರದು ಎಂಬ ಕಾರಣಕ್ಕೆ ಬೆಂಡೆ, ಬೀನ್ಸ್, ಅಲಸಂದಿ ಗಿಡಗಳ ಸಾಲುಗಳ ಎರಡೂ ಕಡೆಗಳಲ್ಲಿ ಪ್ಲಾಸ್ಟಿಕ್ ಹಗ್ಗ ಕಟ್ಟಿ ಅಲ್ಲಲ್ಲಿ ಒಂದೊಂದು ಬಿದಿರು ಕಡ್ಡಿಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ ಒಂದು ಸಾಲಿಗೂ ಮತ್ತೊಂದು ಸಾಲಿಗೂ 2.5 ಅಡಿಗಳಷ್ಟು ಅಂತರ ಕಲ್ಪಿಸಿ ಜನ ಓಡಾಡಲು ಹಾಗೂ ಫಸಲನ್ನು ಕೀಳಲು ಅನುವಾಗುವಂತೆ ಮಾಡಲಾಗಿದೆ. 

ಬಾಳೆಯನ್ನು ಗುಂಡಿಗಳ ಪದ್ಧತಿಯಲ್ಲಿ ನಾಟಿ ಮಾಡಿದ್ದು, ಒಂದೊಂದು ಸಾಲಿಗೂ ಸುಮಾರು ಆರು ಅಡಿಗಳಷ್ಟು ಅಂತರ ಇಟ್ಟಿದ್ದು, ಟ್ರ್ಯಾಕ್ಟರ್ ಅಥವಾ ಟ್ರಿಲ್ಲರ್ ಯಂತ್ರದಲ್ಲಿ ಔಷಧ ಸಿಂಪಡಿಸಲು ಹಾಗೂ ಬಾಳೆ ಸಾಗಿಸಬಹುದು. ಬಾಳೆಯೂ ಸಮೃದ್ಧವಾಗಿ ಫಸಲು ಬಿಟ್ಟುಕೊಂಡಿದೆ.

ಒಂದೇ ಬೆಳೆ ವಾಡಿಕೆಯಿಂದ ರೈತರು ಹೊರಬರಲಿ: ಬೆಂಗಳೂರಿನಲ್ಲಿ ಮನೆ ಮುಂದೆ ಹಾಗೂ ಮನೆಯ ಮೇಲೆ ನಾನಾ ಬಗೆಯ ತರಕಾರಿ, ಹೂಗಳನ್ನು ಬೆಳೆಸುತ್ತಿದ್ದೆ. ಇದೇ ಪದ್ಧತಿಯನ್ನು ತಮ್ಮ ಜಮೀನಿನಲ್ಲೂ ಅಳವಡಿಸಿಕೊಂಡಿದ್ದೇನೆ. ಈ ಬೇಸಾಯ ಕ್ರಮದಿಂದ ಒಂದು ಬೆಳೆ ಕೈ ಕೊಟ್ಟರೂ ಮತ್ತೊಂದು ಬೆಳೆ ಲಾಭ ತಂದುಕೊಡುತ್ತದೆ. ಕೃಷಿ ಜಮೀನಿನಲ್ಲಿ ಕಲ್ಯಾಣ ಮಂಟಪವನ್ನೂ ಪ್ರಾರಂಭಿಸಿದ್ದು, ಬಿಡುವಿನ ಸಮಯದಲ್ಲಿ ಕಲ್ಯಾಣ ಮಂಟಪದ ಚಟುವಟಿಕೆಗಳಲ್ಲೂ ತೊಡಗುತ್ತಿದ್ದೇನೆ. ರೈತರು ಸಮಯ ಸಂದರ್ಭ ನೋಡಿ ಬೆಳೆಗಳನ್ನು ಬೆಳೆಯಬೇಕು. ಯಾವುದೇ ಕಾರಣಕ್ಕೂ ಒಂದೇ ಬೆಳೆ ಬೆಳೆಯುವ ವಾಡಿಕೆಯಿಂದ ಹೊರಬರಬೇಕು ಎಂದು ರೈತ ವೇಣುಗೋಪಾಲ ರೆಡ್ಡಿ ರೈತರಿಗೆ ಸಲಹೆ ನೀಡುತ್ತಾರೆ.

ಅಲಸಂಧಿ ಆಳೆತ್ತರಕ್ಕೆ ಬೆಳೆದಿರುವುದು.
ಅಲಸಂಧಿ ಆಳೆತ್ತರಕ್ಕೆ ಬೆಳೆದಿರುವುದು.
ಬೆಂಡೇ ಕಾಯಿ ತೋಟ ಅತ್ಯಾಕರ್ಷಕವಾಗಿ ಬೆಳೆದಿರುವುದು.
ಬೆಂಡೇ ಕಾಯಿ ತೋಟ ಅತ್ಯಾಕರ್ಷಕವಾಗಿ ಬೆಳೆದಿರುವುದು.

ಸಾಮೂಹಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ

ಸಾಮಾನ್ಯವಾಗಿ ತಾಲ್ಲೂಕಿನ ರೈತರು ಟೊಮೆಟೊ ಆಲೂಗಡ್ಡೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ನೆಚ್ಚಿಕೊಂಡಿದ್ದು ವರ್ಷಪೂರ್ತಿ ಟೊಮೆಟೊ ತಪ್ಪಿದರೆ ಆಲೂಗಡ್ಡೆ ಬೆಳೆಗಳನ್ನು ಬೆಳೆದು ಫಸಲಿದ್ದರೆ ಬೆಲೆ ಇಲ್ಲ ಬೆಲೆ ಬಂದರೆ ಬೆಳೆ ಸರಿಯಾಗಿ ಆಗದೆ ರೈತರು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಎಲ್ಲ ರೈತರು ಸಾಮೂಹಿಕ ಹಾಗೂ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡರೆ ನಷ್ಟದಿಂದ ತಪ್ಪಿಸಿಕೊಳ್ಳಬಹುದು ಎಂಬುದು ರೈತ ವೇಣುಗೋಪಾಲ ರೆಡ್ಡಿ ಅವರ ಅಂಬೋಣ.  ಬೆಂಗಳೂರಿನಲ್ಲಿ ವಾಸವಿರುವ ಕೆ.ವೇಣುಗೋಪಾಲ ರೆಡ್ಡಿ ಕೃಷಿಯಲ್ಲಿ ವಿಭಿನ್ನ ಹಾಗೂ ವಿನೂತನ ಮಾದರಿಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಹೀಗಾಗಿ ಸುತ್ತಮುತ್ತಲಿನ ರೈತರು ವೇಣುಗೋಪಾಲ ರೆಡ್ಡಿ ಅವರ ಕೃಷಿ ಮಾದರಿಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸಾಮೂಹಿಕ ಕೃಷಿ ಪದ್ಧತಿಯಿಂದ ರೈತ ನಷ್ಟ ಅನುಭವಿಸಲಾರರು ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT